ಪುತ್ತೂರು: ಕೆಆರ್ಐಡಿಎಲ್ ಸಂಸ್ಥೆಯ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ, ಪುತ್ತೂರು ಕ್ಷೇತ್ರದಲ್ಲಿ ಕೆಆರ್ಐಡಿಎಲ್ ಮೂಲಕ ನಡೆಸಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್ಐಡಿಎಲ್ನಲ್ಲಿ ಲಂಚದ ವ್ಯವಹಾರ ನಡೆಯುತ್ತಿದೆ ಎಂಬುದು ಶಾಸಕರಿಗೆ ತಿಳಿದಿಲ್ಲವೇ? ತಿಳಿದಿದ್ದರೂ ಅದೇ ಸಂಸ್ಥೆಗೆ ಪದೇಪದೇ ಕಾಮಗಾರಿಗಳನ್ನು ವಹಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ಜಿಲ್ಲಾ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆಗಳು ಇರುವಾಗ ಕೆಆರ್ಐಡಿಎಲ್ಗೆ ಮತ್ತೆ ಮತ್ತೆ ಕಾಮಗಾರಿ ವಹಿಸುವ ಉದ್ದೇಶವೇನು? ಕಾಮಗಾರಿ ವಹಿಸಿದ ಬಳಿಕ ಅದೇ ಸಂಸ್ಥೆಯ ವಿರುದ್ಧ ಲಂಚದ ಆರೋಪ ಮಾಡುವುದೇಕೆ ಎಂದು ಮಠಂದೂರು ಪ್ರಶ್ನಿಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ ತಳಮಟ್ಟಕ್ಕೂ ತಲುಪಿದೆ ಎನ್ನುವುದಕ್ಕೆ ಪುತ್ತೂರು ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಕಾಮಗಾರಿಗಳಲ್ಲೂ ವ್ಯತ್ಯಾಸವಾಗಿದೆ ಎಂದು ಆರೋಪಿಸಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲನಿಗಳಲ್ಲಿ ನಡೆಯಬೇಕಾದ ಕಾಮಗಾರಿಗಳನ್ನು ಬೇರೆ ಸಮುದಾಯದವರು ವಾಸಿಸುವ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ ಎಂದು ದೂರಿದರು.
ಕೆಆರ್ಐಡಿಎಲ್ಗೆ ವಹಿಸಿರುವ ಎಲ್ಲಾ ಕಾಮಗಾರಿಗಳ ವಿವರಗಳನ್ನು ಲೋಕಾಯುಕ್ತಕ್ಕೆ ನೀಡಿ ಸಮಗ್ರ ತನಿಖೆ ನಡೆಸಬೇಕು. ತನಿಖೆಯಲ್ಲಿ ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಕೆಆರ್ಐಡಿಎಲ್ಗೆ ಕಾಮಗಾರಿ ನೀಡುವುದಿಲ್ಲ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಮಠಂದೂರು, ಆ ಸಂಸ್ಥೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಅಭಿಪ್ರಾಯವಿದ್ದರೆ, ಪುತ್ತೂರಿನಲ್ಲಿ ಅದೇ ಸಂಸ್ಥೆಗೆ ಕಾಮಗಾರಿ ನೀಡಿರುವುದೇಕೆ ಎಂದು ಪ್ರಶ್ನಿಸಿದರು.
ಆಡಳಿತ ಪಕ್ಷದ ಶಾಸಕರೇ ತಮ್ಮದೇ ಸರ್ಕಾರದ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡುತ್ತಿರುವುದು, ಸರ್ಕಾರಕ್ಕೆ ತನ್ನ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು, ಪದಾಧಿಕಾರಿಗಳಾದ ಸುನೀಲ್ ದಡ್ಡು, ಸಾಜ ರಾಧಾಕೃಷ್ಣ ಆಳ್ವ, ಯುವರಾಜ ಪೆರಿಯಾತ್ತೋಡಿ, ರಾಜೇಶ್ ಬನ್ನೂರು, ಪ್ರಸನ್ನ ಮಾರ್ತಾ ಹಾಗೂ ವಿಶ್ವನಾಥ ಕುಲಾಲ್ ಉಪಸ್ಥಿತರಿದ್ದರು.
ಬಾಕ್ಸ್: ಲಂಚಕೋರರ ಮರು ನೇಮಕ ಆರೋಪ
ನಾನು ಶಾಸಕನಾಗಿದ್ದಾಗ ಲಂಚ ಪಡೆದ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಂಡು ಜೈಲಿಗೆ ಕಳುಹಿಸುವ ಕೆಲಸ ಮಾಡಿದ್ದೇನೆ. ಆ ಮೂಲಕ ಭ್ರಷ್ಟಾಚಾರ ನಡೆಸುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದೆ. ಆದರೆ ಈಗಿನ ಶಾಸಕರು ಲೋಕಾಯುಕ್ತ ದಾಳಿ ಸಂದರ್ಭ ಲಂಚದ ಆರೋಪ ಕೇಳಿಬಂದಿದ್ದ ತಹಶೀಲ್ದಾರ್ರನ್ನು ಮತ್ತೆ ಪುತ್ತೂರಿಗೆ ಕರೆಸಿಕೊಂಡಿದ್ದಾರೆ ಎಂದು ಸಂಜೀವ ಮಠಂದೂರು ಆರೋಪಿಸಿದರು.
ವಿಎಗಳು ಅಕ್ರಮ–ಸಕ್ರಮ ಕೆಲಸಗಳಿಗೆ ಲಂಚ ಪಡೆಯುತ್ತಾರೆ ಎನ್ನುವ ಮೂಲಕ, ತಮ್ಮದೇ ಸರ್ಕಾರದ ತಳಮಟ್ಟದಲ್ಲೂ ಲಂಚದ ವ್ಯವಹಾರ ನಡೆಯುತ್ತಿದೆ ಎಂಬುದನ್ನು ಶಾಸಕರು ಹತಾಶೆಯಿಂದ ಹೇಳುತ್ತಿದ್ದಾರೆ ಎಂದು ಅವರು ಟೀಕಿಸಿದರು.

























