ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯ ಪರಿಶೀಲನೆ ಮಾಡುವುದನ್ನು ಸಹಿಸದ ಅಶೋಕ್ ಕುಮಾರ್ ರೈ ಅವರ ಶಾಸಕ ಸ್ಥಾನ ಅರುಣ್ ಕುಮಾರ್ ಪುತ್ತಿಲ ಅವರ ಭಿಕ್ಷೆ ಎನ್ನುವುದನ್ನು ಮರೆಯಬಾರದು ಎಂದು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಎಚ್ಚರಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಲಕ್ಕಿ ಡಿಪ್ ಡ್ರಾ ಆದಂತೆ ಅಶೋಕ್ ಕುಮಾರ್ ರೈ ಗೆದ್ದು ಬಿಟ್ಟರು. ಒಟ್ಟಿನಲ್ಲಿ ಅರುಣ್ ಕುಮಾರ್ ಪುತ್ತಿಲ ನೀಡಿದ ಭಿಕ್ಷೆ ಅಶೋಕ್ ರೈ ಅವರ ಶಾಸಕ ಹುದ್ದೆ. ಇದನ್ನು ಮರೆತು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದರು.
ಬಿಜೆಪಿ ಹಾಗೂ ಪುತ್ತಿಲ ಭಿನ್ನಾಭಿಪ್ರಾಯದ ಬಗ್ಗೆ ಪ್ರಶ್ನಿಸಿದಾಗ, ಸಣ್ಣ ಭಿನ್ನಾಭಿಪ್ರಾಯ ಇದ್ದದ್ದು ನಿಜ. ಇಂದು ಪುರುಷರಕಟ್ಟೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದಕ್ಕೂ ಬೆಂಬಲ ನೀಡುತ್ತೇವೆ. ಮುಂದೆ ಬಿಜೆಪಿ – ಪುತ್ತಿಲ ನಡುವಿನ ಭಿನ್ನಾಭಿಪ್ರಾಯಕ್ಕೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಪುತ್ತೂರು: ಪ್ರತಿಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ಮಾಡುವುದನ್ನು ಸಹಿಸದ ಪುತ್ತೂರಿನ ಶಾಸಕರ ಸರ್ವಾಧಿಕಾರಿ ಧೋರಣೆ ಜನತೆಗೆ ಅರ್ಥವಾಗತೊಡಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಬೊಳುವಾರುನಿಂದ ಹಾರಾಡಿ ನಡುವೆ ನಡೆಯುತ್ತಿರುವ ಕಾಮಗಾರಿಯನ್ನು ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ಪರಿಶೀಲನೆ ನಡೆಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ್ದಾರೆ. ಇದನ್ನು ಸಹಿಸದ ಶಾಸಕರು ಟೀಕೆ ಮಾಡುತ್ತಿದ್ದಾರೆ. ಅಪಹಾಸ್ಯ ಮಾಡುತ್ತಿದ್ದಾರೆ. ಇದು ಅವರ ಸ್ಥಾನಕ್ಕೆ ತಕ್ಕ ನಡವಳಿಕೆ ಅಲ್ಲ. ಪ್ರತಿಪಕ್ಷ ಇರುವುದೇ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವುದಕ್ಕೆ ಎಂಬುದು ಶಾಸಕರಿಗೆ ತಿಳಿದಿರಬೇಕು. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವಾಗ ಮತ್ತು ಪುತ್ತೂರಿನಲ್ಲಿ ಬಿಜೆಪಿಯ ಶಾಸಕರು ಇರುವಾಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ಸಿನವರು ಟೀಕೆ, ವಿರೋಧ, ಪ್ರತಿಭಟನೆ ಮಾಡಿದ್ದಾರೆ. ಅದನ್ನು ನಾವು ನಕರಾತ್ಮಕವಾಗಿ ಸ್ವೀಕರಿಸಿದ್ದೇವೆ. ಆದರೆ ಈಗಿನ ಶಾಸಕರು ಯಾವ ಸಲಹೆಗಳನ್ನು ಸ್ವೀಕರಿಸುವ ಮನೋಸ್ಥಿತಿಯನ್ನು ಹೊಂದಿಲ್ಲ ಎಂಬುದು ಅವರ ವರ್ತನೆಯಿಂದ ಗೊತ್ತಾಗುತ್ತದೆ. ಕಾಮಗಾರಿ ನಡೆಯುವ ಜಾಗವನ್ನು ಪರಿಶೀಲನೆ. ನಡೆಸಿದ್ದನ್ನೇ ಸಹಿಸದ ಶಾಸಕರು ಇನ್ನು ಹೇಗೆ ಅಧಿಕಾರಿ ವರ್ಗವನ್ನು ನೋಡಿಕೊಳ್ಳುತ್ತಾರೆ ಎಂಬುದನ್ನು ಜನರು ಅರ್ಧ ಮಾಡಿಕೊಳ್ಳುತ್ತಾರೆ ಎಂದು ಹೇಳಿದ ರಾಜೇಶ ಬನ್ನೂರು ಅವರು ಜನರು ಕಟ್ಟಿದ ತೆರಿಗೆ ಹಣವನ್ನು ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಶಾಸಕರು ಸರಕಾರದ ಅನುದಾನವನ್ನು ಅವರ ಮನೆಯಿಂದ ನೀಡುವಂತೆ ಭಾವಿಸಿದಂತಿದೆ ಎಂದು ಹೇಳಿದರು.
ಬಿಜೆಪಿಯವರು ನಮ್ಮ ತಂಟೆಗೆ ಬರಬೇಡಿ ಎಂದು ಶಾಸಕರು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ರಾಜೇಶ್ ಬನ್ನೂರು ಅವರು ನಾವು ಯಾರೂ ಶಾಸಕರ ತಂಟೆಗೆ ಹೋಗುತ್ತಿಲ್ಲ. ಅವರ ವೈಯುಕ್ತಿಕ ವಿಚಾರ, ವ್ಯವಹಾರದ ಬಗ್ಗೆ ನಾವು ಮಾತನಾಡುತ್ತಿಲ್ಲ. ಸರಕಾರದ ಅನುದಾನದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಲ್ಲಿನ ವೈಫಲ್ಯವನ್ನು ಹಾಗೂ ಅವೈಜ್ಞಾನಿಕ ಕಾಮಗಾರಿಗಳ ಲೋಪವನ್ನು ಎತ್ತಿ ತೋರಿಸುತ್ತಿದ್ದೇವೆ. ಅದನ್ನೇ ಶಾಸಕರು ಸಹಿಸುವುದಿಲ್ಲ ಎಂದಾದರೆ ಅವರು ಸರ್ವಾಧಿಕಾರಿ ಎಂದು ಕಾಂಗ್ರೆಸ್ಸಿನವರೇ ಹೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ, ಅಶೋಕ್ ರೈ ಅವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದಾಗ ಅವರೊಂದಿಗೆ ಇದ್ದವರು ಹೆಚ್ಚಿನವರು ಈಗ ಅವರೊಂದಿಗೆ ಇಲ್ಲ. ಈಗ ಇರುವವರು ಬಹುತೇಕ ಮಂದಿ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಪ್ರಯತ್ನಿಸಿದವರು ಎಂಬುದು ಅವರ ಗಮನದಲ್ಲಿ ಇರಬೇಕು ಎಂದರು.
ಬಿಜೆಪಿಯವರಿಂದ ಕಲಿಯಲಿ:
ಬಿಜೆಪಿಯವರು ಸ್ಥಳ ಪರಿಶೀಲನೆ ನಡೆಸಿದ ಜಾಗಕ್ಕೆ ಅನುದಾನ ಕೊಡುವುದಿಲ್ಲ ಎಂದು ಹೇಳುವ ಶಾಸಕರು ಹಿಂದಿನ ಬಿಜೆಪಿ ಶಾಸಕರಿಂದ ಕಲಿಯುವುದು ಬಹಳಷ್ಟು ಇದೆ. ಬಿಜೆಪಿಯಿಂದ ಗೆದ್ದಿದ್ದ ಉರಿಮಜಲು ರಾಮ ಭಟ್ ಆಗಲೀ, ಡಿ.ವಿ.ಸದಾನಂದ ಗೌಡರಾಗಲೀ, ಶಕುಂತಲಾ ಶೆಟ್ಟಿ, ಮಲ್ಲಿಕಾ ಪ್ರಸಾದ್, ಸಂಜೀವ ಮಠಂದೂರು ಅಗಲೀ ಯಾರು ಕೂಡ ಈ ರೀತಿ ದ್ವೇಷದ ರಾಜಕಾರಣ ನಡೆಸಿಲ್ಲ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ. ಆದರೆ ಈಗಿನ ಶಾಸಕರು ತಮ್ಮಿಂದಲೇ ಎಲ್ಲಾ ನಾನೇ ಎಲ್ಲಾ ಎಂದು ತಿಳಿದುಕೊಂಡಿದ್ದಾರೆ. ಅವರು ಮಂಜೂರು ಮಾಡಿಸಿದ್ದಾರೆ ಎಂದು ಹೇಳಿಕೊಳ್ಳುವ ಅಕ್ರಮ ಸಕ್ರಮದಲ್ಲಿ ಎಷ್ಟು ಭ್ರಷ್ಟಾಚಾರ ಆಗಿದೆ, ಕಾಮಗಾರಿಗಳ ಕಂಟ್ರಾಕ್ಟಿನಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಅವರ ಆಚೆ ಈಚೆ ಇರುವವರು ಎಷ್ಟು ಲಂಚ ಪಡೆಯುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗಿದೆ ಎಂದರು.
ಅಶೋಕ್ ರೈ ಸೋಲು ಖಚಿತ
ಶಾಸಕರು ಇತರರನ್ನು ಅಪಹಾಸ್ಯ ಮಾಡುವುದು, ಅವಹೇಳನ ಮಾಡುವುದು, ವ್ಯಂಗ್ಯ ಮಾಡುವುದೇ ಅಭಿವೃದ್ಧಿ ಎಂದು ತಿಳಿದುಕೊಂಡಿದ್ದಾರೆ. ನಮ್ಮೊಳಗಿನ ಸಣ್ಣ ಪುಟ್ಟ ಭಿನ್ನಾಭಿಪ್ರಾಯದಿಂದಾಗಿ ನಾವು ವಿಧಾನಸಭಾ ಚುನಾವಣೆಯಲ್ಲಿ ಸೋತಿರಬಹುದು. ಪ್ರತೀ ಸಲ ಸೋತಾಗಲೂ ಎದ್ದು ನಿಂತಿದ್ದೇವೆ. ಸೋಲಿಗಾಗಿ ಅಂಜುವ ಜಾಯಮಾನ ಬಿಜೆಪಿಯದ್ದು ಅಲ್ಲ, ಬಿಜೆಪಿಯೊಳಗಿನ ಎಲ್ಲಾ ವ್ಯತ್ಯಾಸಗಳನ್ನು ಸರಿ ಪಡಿಸಿಕೊಂಡು ಬಲಿಷ್ಠರಾಗುತ್ತಿದ್ದೇವೆ. ಸಂಘಟನಾತ್ಮಕ ಚಟುವಟಿಕೆಯನ್ನು ಬಲ ಪಡಿಸುತ್ತಿದ್ದೇವೆ. ನಾಯಕರು ಮತ್ತು ಕಾರ್ಯಕರ್ತರು ಏಕ ಮನಸ್ಸಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳಾ ಮೋರ್ಚಾ, ಯುವ ಮೋರ್ಚ ಸೇರಿದಂತೆ ಬಿಜೆಪಿಯ ಎಲ್ಲಾ ಘಟಕಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಭಾರೀ ನಿರೀಕ್ಷೆಯಿಂದ ಮತ ಚಲಾಯಿಸಿದ್ದವರು ಶಾಸಕರ ದಬ್ಬಾಳಿಕೆಯ ರಾಜಕಾರಣವನ್ನು ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಅವರ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಲೊಕೇಶ್ ಚಾಕೋಟೆ, ಮಾಧ್ಯಮ ಪ್ರಮುಖ್ ಸತೀಶ್ ನಾಯ್ಕ್, ಮಹೇಶ್ ಉಪಸ್ಥಿತರಿದ್ದರು.
























