tamanvi
ಕರಾವಳಿ

ಕಾಳುಮೆಣಸು ಬೆಳೆಗಾರರಿಗೆ ಗುಡ್‌ನ್ಯೂಸ್; ವಿವಿಧ ಯೋಜನೆಗಳಡಿ ಆರ್ಥಿಕ ನೆರವು: ಕಿಶೋರ್ ಕುಮಾರ್ ಪುತ್ತೂರು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರಾಜ್ಯದ ಕಾಳುಮೆಣಸು ಬೆಳೆಗಾರರಿಗೆ ವಿವಿಧ ಸರ್ಕಾರಿ ಯೋಜನೆಗಳಡಿ ಆರ್ಥಿಕ ನೆರವು ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ.

ಆಗಸ್ಟ್ 18ರಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಕಾಳುಮೆಣಸು ಬೆಳೆಗಾರರ ಕುರಿತು ಕಿಶೋರ್ ಕುಮಾರ್ ಪುತ್ತೂರು ಅವರು ಕೇಳಿದ್ದ ಲಿಖಿತ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ.

ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾಳುಮೆಣಸನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದ್ದು, ಒಟ್ಟು 2.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಹೆಕ್ಟೇರ್‌ಗೆ ₹40 ಸಾವಿರದವರೆಗೆ ಸಹಾಯಧನ

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ (MIDH) ಯೋಜನೆಯಡಿ ತೋಟಗಾರಿಕಾ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಲ್ಲಿ ಕಾಳುಮೆಣಸಿಗೆ ಪ್ರತಿ ಹೆಕ್ಟೇರ್‌ಗೆ ₹1 ಲಕ್ಷ ಘಟಕ ವೆಚ್ಚ ನಿಗದಿಪಡಿಸಲಾಗಿದೆ. ಇದರ ಶೇ.40ರಷ್ಟು, ಅಂದರೆ ಗರಿಷ್ಠ ₹40 ಸಾವಿರದವರೆಗೆ ಸಹಾಯಧನ ನೀಡಲಾಗುತ್ತಿದ್ದು, ಫಲಾನುಭವಿಯು ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ಪಡೆಯಲು ಅವಕಾಶವಿದೆ.

2026-27ನೇ ಸಾಲಿನಲ್ಲಿ ಕಾಳುಮೆಣಸು ಸೇರಿದಂತೆ ಬಹುವಾರ್ಷಿಕ ಸಾಂಬಾರು ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ₹266.80 ಲಕ್ಷ ಅನುದಾನ ನಿಗದಿಪಡಿಸಲಾಗಿದೆ.

ಈ ಅನುದಾನವು ರೈತರ ಅಗತ್ಯಕ್ಕೆ ಹೋಲಿಸಿದರೆ ಕಡಿಮೆಯಿದ್ದು, ಅನುದಾನವನ್ನು ಹೆಚ್ಚಿಸಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಒತ್ತಾಯಿಸಿದ್ದಾರೆ. ಈ ಕುರಿತು ತೋಟಗಾರಿಕಾ ಸಚಿವರಿಗೆ ಪತ್ರದ ಮೂಲಕ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಕೀಟ ಹಾಗೂ ರೋಗ ನಿಯಂತ್ರಣಕ್ಕೂ ನೆರವು

ತೋಟಗಾರಿಕಾ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಕಾಳುಮೆಣಸು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಲ್ಲಿ ಕೀಟ ಹಾಗೂ ರೋಗಗಳ ನಿರ್ವಹಣೆಗೆ ಸಹಾಯಧನ ನೀಡಲಾಗುತ್ತಿದೆ.

ಸಾಮಾನ್ಯ ವರ್ಗದ ರೈತರಿಗೆ ಶೇ.75ರಷ್ಟು, ಗರಿಷ್ಠ ₹7,500 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಷ್ಟು, ಗರಿಷ್ಠ ₹9,000 ಸಹಾಯಧನವನ್ನು ಗರಿಷ್ಠ ಒಂದು ಹೆಕ್ಟೇರ್ ಪ್ರದೇಶಕ್ಕೆ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಇದೇ ವೇಳೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಾಳುಮೆಣಸು ಸೇರಿದಂತೆ ತೋಟಗಾರಿಕಾ ಬೆಳೆಗಳ ಸಮಗ್ರ ರೋಗ, ಕೀಟ ಹಾಗೂ ಪೋಷಕಾಂಶ ನಿರ್ವಹಣೆಗೆ ಪ್ರತಿ ಹೆಕ್ಟೇರ್‌ಗೆ ₹1,500ರಂತೆ, ಗರಿಷ್ಠ 2 ಹೆಕ್ಟೇರ್‌ಗೆ ₹3,000 ಸಹಾಯಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ₹400.01 ಲಕ್ಷ ಅನುದಾನ ನಿಗದಿಪಡಿಸಲಾಗಿದೆ.

ವಿಬಿ-ಜಿ-ರಾಮ್‌ ಜಿ ಯೋಜನೆಯಲ್ಲೂ ಕಾಳುಮೆಣಸಿಗೆ ಅವಕಾಶ

ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ ಗ್ರಾಮೀಣ (ವಿಬಿ-ಜಿ-ರಾಮ್‌ ಜಿ) ಯೋಜನೆಯಡಿ ವಿವಿಧ ಬೆಳೆಗಳಲ್ಲಿ ಮಿಶ್ರ ಬೆಳೆಯಾಗಿ ಕಾಳುಮೆಣಸು ಬೆಳೆಯಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಕಾಳುಮೆಣಸು ಬೆಳೆಯುವ ರೈತರಿಗೆ ಆರ್ಥಿಕ ನೆರವು ದೊರೆಯಲಿದೆ.

ಅಡಕೆ ಕೃಷಿಯಲ್ಲಿ ಮಿಶ್ರ ಬೆಳೆಯಾಗಿ ಕಾಳುಮೆಣಸು: ಪ್ರತಿ ಹೆಕ್ಟೇರ್‌ಗೆ ₹1,17,975

ತೆಂಗಿನ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ಕಾಳುಮೆಣಸು: ಪ್ರತಿ ಹೆಕ್ಟೇರ್‌ಗೆ ₹18,265

ಕಾಫಿ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ಕಾಳುಮೆಣಸು: ಪ್ರತಿ ಹೆಕ್ಟೇರ್‌ಗೆ ₹25,075

ರೋಬಸ್ಟಾ ಕಾಫಿಯಲ್ಲಿ ಮಿಶ್ರ ಬೆಳೆಯಾಗಿ ಕಾಳುಮೆಣಸು: ಪ್ರತಿ ಹೆಕ್ಟೇರ್‌ಗೆ ₹31,776

ಅರೇಬಿಕಾ ಕಾಫಿಯಲ್ಲಿ ಮಿಶ್ರ ಬೆಳೆಯಾಗಿ ಕಾಳುಮೆಣಸು: ಪ್ರತಿ ಹೆಕ್ಟೇರ್‌ಗೆ ₹55,151

ವಿಬಿ-ಜಿ-ರಾಮ್‌ ಜಿ ಯೋಜನೆಯ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕಾಳುಮೆಣಸು ಬೆಳೆಯಲು ಆಸಕ್ತಿ ವಹಿಸಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಮನವಿ ಮಾಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಪುತ್ತೂರು ಚಲೋಗೆ ಅನುಮತಿ ನೀಡದಿರಿ: ಎಸ್.ಡಿ.ಪಿ.ಐ. | ಪಿ.ಜಿ. ಜಗನ್ನಿವಾಸ್ ರಾವ್ ಮನೆಗೆ ಚಲೊ ಮಾಡಿ: ಅನ್ವರ್ ಸಾದಾತ್

ಪುತ್ತೂರು: ಆ. 22ರಂದು ದರ್ಬೆಯಲ್ಲಿ ನಡೆದ ಸಣ್ಣ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನು…

ಮಂಗಳೂರು: ತಂಗಿಯ ಸಾವಿನಿಂದ ನೊಂದಿದ್ದ ಅಣ್ಣನೂ ಮೃತ್ಯು| ಎರಡು ತಿಂಗಳ ಅಂತರದಲ್ಲಿ ಕುಟುಂಬಕ್ಕೆ ಆಘಾತ

ಮಂಗಳೂರು: ತಂಗಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ…