ಪುತ್ತೂರು: ರಕ್ಷಾಬಂಧನವು ಕೇವಲ ರಾಖಿ ಕಟ್ಟುವ ಆಚರಣೆಯಲ್ಲ. ಅದು ಪ್ರೀತಿ, ಬಾಂಧವ್ಯ, ಪರಸ್ಪರ ನಂಬಿಕೆ ಹಾಗೂ ರಕ್ಷಣೆ – ಭರವಸೆಯ ಸಂಕೇತವಾಗಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಸಂತೋಷ, ಪ್ರಾಮಾಣಿಕತೆ ಹಾಗೂ ಸಮಾಜದ ಒಳಿತಿನ ಮನೋಭಾವ ಹೊಂದಿರಬೇಕು. ರಾಖಿಯ ದಾರವು ಸಹೋದರ–ಸಹೋದರಿಯರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ, ಕಷ್ಟ–ಸುಖಗಳಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವ ಭರವಸೆಯ ಸಂಕೇತವಾಗಿದೆ ಧರ್ಮಾಭ್ಯುದಯ – ಧರ್ಮಶಿಕ್ಷಣ ತಾಲೂಕು ಸಮಿತಿಯ ಕಾರ್ಯದರ್ಶಿಯಾಗಿರುವ ಆರ್. ಸಿ. ನಾರಾಯಣ ಹೇಳಿದರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ನಟ್ಟೋಜ ಶಿವಾನಂದ ರಾವ್–ಸುಶೀಲಾ ರಾವ್ ಸಭಾಂಗಣದಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ರಕ್ಷಣೆ ಎಂದರೆ ಕೇವಲ ದೈಹಿಕ ಕಾವಲಲ್ಲ. ಕಷ್ಟದ ಸಂದರ್ಭದಲ್ಲಿ ಧೈರ್ಯ ತುಂಬುವುದು, ಆತ್ಮಸ್ಥೈರ್ಯ ನೀಡುವುದು, ಸರಿಯಾದ ದಾರಿಯನ್ನು ತೋರಿಸುವುದು ಹಾಗೂ ಪರಸ್ಪರ ಕಾಳಜಿ ವಹಿಸುವುದೂ ರಕ್ಷಣೆಯೇ. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಸಂತೋಷ, ಪ್ರಾಮಾಣಿಕತೆ ಮತ್ತು ಮಾನವೀಯತೆ ಇರಬೇಕು ಎಂಬುದನ್ನು ಈ ಹಬ್ಬ ನೆನಪಿಸುತ್ತದೆ ಎಂದು ಹೇಳಿದರು.
ರಕ್ಷಾಬಂಧನದ ಸಂದೇಶವು ಕುಟುಂಬದ ಎಲ್ಲ ಸಂಬAಧಗಳಿಗೂ ವಿಸ್ತರಿಸಬೇಕು. ನಮ್ಮ ಬದುಕಿನ ಮೊದಲ ರಕ್ಷಕರಾದ ತಂದೆ–ತಾಯಿಯೊಂದಿಗೆ ಸದಾ ಗಟ್ಟಿಯಾದ ಬಾಂಧವ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ. ಅವರ ಪ್ರೀತಿ, ತ್ಯಾಗ ಮತ್ತು ಮಾರ್ಗದರ್ಶನವನ್ನು ಗೌರವಿಸಿ, ಅವರೊಂದಿಗೆ ಸಮಯ ಕಳೆಯುವುದು ನಿಜವಾದ ಕೃತಜ್ಞತೆ. “ಧರ್ಮವು ದಯೆಯನ್ನು ಕರುಣಿಸುತ್ತದೆ” ಎಂಬ ಆಶಯದಂತೆ, ನಮ್ಮ ಸುತ್ತಲಿರುವವರ ನೋವಿಗೆ ಸ್ಪಂದಿಸಿ, ಅಗತ್ಯವಿರುವವರಿಗೆ ನೆರವಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಇದೇ ರಕ್ಷಾಬಂಧನದ ನಿಜವಾದ ಸಾರ್ಥಕತೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಧಾರ್ಮಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ದೇಶಭಕ್ತಿ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಮಕ್ಕಳಿಗೆ ಕೇವಲ ಶೈಕ್ಷಣಿಕ ಜ್ಞಾನ ನೀಡುವುದಷ್ಟೇ ಶಿಕ್ಷಣದ ಉದ್ದೇಶವಾಗಬಾರದು. ಭಾರತೀಯ ಸಂಸ್ಕೃತಿ, ಪರಂಪರೆ, ಧಾರ್ಮಿಕ ಮೌಲ್ಯಗಳು ಹಾಗೂ ದೇಶದ ಬಗ್ಗೆ ಗೌರವದ ಭಾವನೆಯನ್ನು ಬೆಳೆಸುವ ಶಿಕ್ಷಣವೂ ಅಗತ್ಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಖಿ ಕಟ್ಟುವ ಮೂಲಕ ಸಹೋದರತ್ವ ಹಾಗೂ ಪರಸ್ಪರ ಪ್ರೀತಿ, ಗೌರವದ ಸಂದೇಶ ಸಾರಿದರು. ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವೈಷ್ಣವಿ, ಧಾತ್ರಿ ಹಾಗೂ ಸೌಜನ್ಯ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ:
ರಕ್ಷಾಬಂಧನದ ಜತೆಗೆ ಸಂಸ್ಕೃತೋತ್ಸವವನ್ನೂ ಆಚರಿಸಲಾಯಿತು. ಪರಸ್ಪರರಲ್ಲಿ ಭ್ರಾತೃತ್ವ ಭಾವನೆ ಹಾಗೂ ಸ್ನೇಹವನ್ನು ಬೆಳೆಸುವ ಸಂಕೇತವಾಗಿ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟುವ ಮೂಲಕ ರಕ್ಷಾಬಂಧನವನ್ನು ಆಚರಿಸಿದರು.
ಹತ್ತನೇ ತರಗತಿಯ ವಿದ್ಯಾರ್ಥಿಗಳು ‘ಸೌಹಾರ್ದಂ ಪ್ರಕೃತೇಃ ಶೋಭಾ’ ಎಂಬ ಲಘು ನಾಟಕವನ್ನು ಪ್ರದರ್ಶಿಸಿದರು. ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಸೌಂದರ್ಯವನ್ನು ಹಾಡಿನ ಮೂಲಕ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ಸಂಸ್ಕೃತೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಸೌಪರ್ಣಿಕಾ ಎಸ್. ದಾನೇಗೊಂಡರ್ ಪ್ರಸ್ತಾವಿಸಿದರು. ಯಶ್ವಿಮತ್ತು ನಿನಾದ ಕಾರ್ಯಕ್ರಮ ನಿರ್ವಹಿಸಿದರು.
























