tamanvi
ಧಾರ್ಮಿಕ

ಪುತ್ತೂರು: (ಸೆ. 4) 28ನೇ ವರ್ಷದ ‘ಶ್ರೀಕೃಷ್ಣ ಲೋಕ’: ಅದ್ಧೂರಿ ಶೋಭಾಯಾತ್ರೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಹಾಗೂ ವಿವೇಕಾನಂದ ಶಿಶುಮಂದಿರ, ಶಿವಪೇಟೆ-ಪರ್ಲಡ್ಕ, ಪುತ್ತೂರು ಇದರ ಆಶ್ರಯದಲ್ಲಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ 28ನೇ ವರ್ಷದ ‘ಶ್ರೀಕೃಷ್ಣ ಲೋಕ’ ಕಾರ್ಯಕ್ರಮ ಸೆ.4ರಂದು ಪುತ್ತೂರಿನಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾತೃ ಸಂಸ್ಥೆಯಡಿ ನಡೆಯುತ್ತಿರುವ ವಿವೇಕಾನಂದ ಶಿಶುಮಂದಿರದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಡಾ. ಹರ್ಷ ರೈ ಮಾಡಾವು ವಿವರಿಸಿದರು.

ಸೆ.4ರಂದು ಬೆಳಗ್ಗೆ 9 ಗಂಟೆಗೆ ವಿವೇಕಾನಂದ ಶಿಶುಮಂದಿರದ ಆವರಣದಲ್ಲಿ ‘ಶ್ರೀ ಬಾಲಕೃಷ್ಣನ ತೊಟ್ಟಿಲ ಸಂಭ್ರಮ’ ನಡೆಯಲಿದೆ. ಬಳಿಕ ಬೆಳಗ್ಗೆ 9.30ಕ್ಕೆ ಶೋಭಾಯಾತ್ರೆ ಆರಂಭವಾಗಲಿದೆ. ಶಿವಪೇಟೆಯ ವಿವೇಕಾನಂದ ಶಿಶುಮಂದಿರದಿಂದ ಹೊರಡುವ ಶೋಭಾಯಾತ್ರೆಯು ಚೇತನ ಆಸ್ಪತ್ರೆ ಎದುರಿನ ರಸ್ತೆಯ ಮೂಲಕ ಕೋರ್ಟ್ ರಸ್ತೆಗೆ ತೆರಳಿ, ಅಲ್ಲಿಂದ ಮುಖ್ಯ ರಸ್ತೆಯಾಗಿ ಸಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಸಮಾಪ್ತಿಗೊಳ್ಳಲಿದೆ.

ಶೋಭಾಯಾತ್ರೆಯಲ್ಲಿ 10 ವರ್ಷದೊಳಗಿನ ಮಕ್ಕಳಿಗೆ ಶ್ರೀಕೃಷ್ಣ ಹಾಗೂ ರಾಧೆಯರ ವೇಷ ಧರಿಸಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ವೇಷ ಧರಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಮಕ್ಕಳಿಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಭಾಗವಹಿಸಲು ಇಚ್ಛಿಸುವವರು ಮುಂಚಿತವಾಗಿ ವಿವೇಕಾನಂದ ಶಿಶುಮಂದಿರದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

ವೇಷ ಧರಿಸುವ ಮಕ್ಕಳ ಪಾಲಕರು ಸಾಂಪ್ರದಾಯಿಕ ಉಡುಗೆಯಲ್ಲಿಯೇ ಶೋಭಾಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಸೂಚಿಸಲಾಗಿದೆ.

ಬೆಳಗ್ಗೆ 11ರಿಂದ ಸಭಾ ಕಾರ್ಯಕ್ರಮ

ಶೋಭಾಯಾತ್ರೆಯ ಬಳಿಕ ಬೆಳಗ್ಗೆ 11 ಗಂಟೆಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಕೃಷ್ಣಕುಮಾರ್ ಶೆಟ್ಟಿ ಕಡಬ ಸಭಾಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ, ಪುತ್ತೂರಿನ ಆಡಳಿತ ನಿರ್ದೇಶಕ ಡಾ. ಚೇತನ್ ಪ್ರಕಾಶ್ ಕಜೆ ಭಾಗವಹಿಸಲಿದ್ದಾರೆ. ಶ್ರೀ ಪೂರ್ಣಾತ್ಮರಾಮ ಈಶ್ವರಮಂಗಲ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಶಿಶುಮಂದಿರದ ಸಂಚಾಲಕ ಅಕ್ಷಯ ಕುಮಾರ್ ಬಿ.ಎಸ್., ಸಮಿತಿ ಕಾರ್ಯದರ್ಶಿ ಬ್ರಿಜೇಶ್ ರೈ ಸಣಂಗಳ ಹಾಗೂ ಜೊತೆ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts