tamanvi
ಸ್ಥಳೀಯ

ದರ್ಬೆ ಗಲಭೆ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಬಿಜೆಪಿ ಆಗ್ರಹ; ‘ಪುತ್ತೂರು ಚಲೋ’ಗೆ ಸಂಪೂರ್ಣ ಬೆಂಬಲ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದರ್ಬೆಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಪುತ್ತೂರು ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಪುತ್ತೂರು ಮುಖಂಡ ರಾಜೇಶ್ ಬನ್ನೂರು, ಲ್ಯಾಮಿನೇಷನ್ ಸಂದರ್ಭದಲ್ಲಿ ಉಂಟಾದ ತಾಂತ್ರಿಕ ದೋಷಕ್ಕೆ ಸೇವಾ ಕೇಂದ್ರದ ಸಿಬ್ಬಂದಿ ಅಥವಾ ಅಂಗಡಿ ಮಾಲೀಕರು ಕಾರಣಕರ್ತರಲ್ಲ. ಕೇವಲ ₹100ರ ವಿಚಾರವಾಗಿ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ಥಳದಲ್ಲಿ ಜಮಾಯಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಜನರು ಸ್ಥಳಕ್ಕೆ ಸೇರುವಂತೆ ಕರೆ ನೀಡಿದವರು ಯಾರು ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಘಟನೆಯ ಸಂದರ್ಭದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ ಎಂದು ಹೇಳಿರುವ ಅವರು, ಈ ಸಂಬಂಧ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿರುವುದು ಹಾಗೂ ಬಂಧನವಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.

ಅದೇ ರೀತಿ, ಪೊಲೀಸ್ ಜೀಪಿನೊಳಗೆ ನುಗ್ಗಿ ವ್ಯಕ್ತಿಯೊಬ್ಬರನ್ನು ಹೊರಗೆಳೆದು ಹಲ್ಲೆ ಮಾಡಲು ಯತ್ನಿಸಿರುವುದು ಗಂಭೀರ ವಿಚಾರವಾಗಿದೆ. ಪೊಲೀಸರ ಸಮ್ಮುಖದಲ್ಲೇ ಪೊಲೀಸ್ ವಾಹನದೊಳಗೆ ನುಗ್ಗಿ ಈ ರೀತಿಯ ವರ್ತನೆ ತೋರಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಎಲ್ಲರಿಗೂ ಸಮಾನವಾಗಿ ಕಾನೂನು ಅನ್ವಯವಾಗಲಿ’

ದರ್ಬೆ ಪ್ರಕರಣದಲ್ಲಿ ಕೆಲವರ ವಿರುದ್ಧ ಗಂಭೀರ ಪ್ರಕರಣ ದಾಖಲಿಸಲಾಗಿದ್ದು, ಮತ್ತೊಂದೆಡೆ ಹಲ್ಲೆ ಹಾಗೂ ಪೊಲೀಸ್ ವಾಹನದೊಳಗೆ ನುಗ್ಗಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡ ಅಥವಾ ಪಕ್ಷಪಾತಕ್ಕೆ ಅವಕಾಶ ನೀಡದೆ ತನಿಖೆ ನಡೆಸಬೇಕು. ಕಾಂಗ್ರೆಸ್ ಪಕ್ಷದ ರಾಜಕೀಯ ಹಸ್ತಕ್ಷೇಪದಿಂದ ತನಿಖೆಯ ದಿಕ್ಕು ಬದಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ ಎಂದು ರಾಜೇಶ್ ಬನ್ನೂರು ಹೇಳಿದರು.

ಅಂಜನಾ ಪೈ ಹಾಗೂ ಅವರ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ, ಘಟನೆಯ ಎಲ್ಲಾ ಆಯಾಮಗಳನ್ನೂ ಪರಿಶೀಲಿಸಿ ನೈಜ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧವೂ ರಾಜೇಶ್ ಬನ್ನೂರು ಟೀಕೆ ವ್ಯಕ್ತಪಡಿಸಿದರು. ದರ್ಬೆ ಪ್ರಕರಣ ಸೇರಿದಂತೆ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರದಲ್ಲಿ ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿದ ಅವರು, ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಸಂಘಟನೆಗಳು ಜನರ ಪರವಾಗಿ ಹೋರಾಟ ಮುಂದುವರಿಸಲಿವೆ ಎಂದರು.

‘ಪುತ್ತೂರು ಚಲೋ’ಗೆ ಬಿಜೆಪಿ ಬೆಂಬಲ

ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಡೆಯಲಿರುವ ‘ಪುತ್ತೂರು ಚಲೋ’ ಕಾರ್ಯಕ್ರಮಕ್ಕೆ ಭಾರತೀಯ ಜನತಾ ಪಕ್ಷ, ಪುತ್ತೂರು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದರ್ಬೆ ವೃತ್ತದವರೆಗೆ ನಡೆಯುವ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕು ಹಾಗೂ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂಬುದು ಬಿಜೆಪಿಯ ಸ್ಪಷ್ಟ ನಿಲುವು ಎಂದು ರಾಜೇಶ್ ಬನ್ನೂರು ಹೇಳಿದರು.

ಪತ್ರಿಕಾ ಹೇಳಿಕೆ ಸಂದರ್ಭ ಶಶಿಧರ್, ಮಹೇಶ್, ಸತೀಶ್ ನಾಯ್ಕ್, ಸ್ವರ್ಣಲತಾ ಹೆಗ್ಡೆ ಹಾಗೂ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್‌ಗೆ ವಿಟ್ಲದಲ್ಲಿ ಅದ್ಧೂರಿ ಸ್ವಾಗತ: ಹುಟ್ಟೂರಿನ ಗೌರವ, ರೋಡ್ ಶೋ

ವಿಟ್ಲ: ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಹೊರಹೊಮ್ಮಿದ…

1 of 132