tamanvi
ಸ್ಥಳೀಯ

ಪುತ್ತೂರು: ನಕಲಿ ಗೂಗಲ್ ಪೇ ಪಾವತಿ ನಾಟಕ; ಅಂಗಡಿಗೆ ಸಾವಿರಕ್ಕೂ ಅಧಿಕ ರೂ. ವಂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ನಕಲಿ ‘ಗೂಗಲ್ ಪೇ’ ಪಾವತಿಯ ನಾಟಕವಾಡಿ ಸ್ಥಳೀಯ ಅಂಗಡಿಯೊಂದಕ್ಕೆ ಸಾವಿರಕ್ಕೂ ಅಧಿಕ ರೂಪಾಯಿ ವಂಚಿಸಿ ಪರಾರಿಯಾದ ಘಟನೆ ಆ. 26ರ ಸಂಜೆ ಪುತ್ತೂರು ತಾಲೂಕಿನ ಕುಂಬ್ರದ ಗಾಣಿಗ ಆಯಿಲ್ ಮಿಲ್‌ನಲ್ಲಿ ನಡೆದಿದೆ.

ಸ್ಕೂಟರ್‌ನಲ್ಲಿ ಅಂಗಡಿಗೆ ಬಂದ ಅಪರಿಚಿತ ವ್ಯಕ್ತಿ, ಮುಖ ಗುರುತಾಗದಂತೆ ಹೆಲ್ಮೆಟ್ ಧರಿಸಿಯೇ ಒಳ ಪ್ರವೇಶಿಸಿದ್ದಾನೆ. ಬಳಿಕ 200 ರೂ. ಮೌಲ್ಯದ ತೆಂಗಿನ ಎಣ್ಣೆ ಖರೀದಿಸಿ, ತುರ್ತಾಗಿ 1,000 ರೂ. ನಗದು ಅಗತ್ಯವಿದೆ ಎಂದು ಅಂಗಡಿ ಮಾಲಕಿಯಲ್ಲಿ ವಿನಂತಿಸಿದ್ದಾನೆ.

ಎಣ್ಣೆಯ ಬೆಲೆ ಸೇರಿದಂತೆ ಒಟ್ಟು 1,200 ರೂ. ಮೊತ್ತವನ್ನು ಗೂಗಲ್ ಪೇ ಮೂಲಕ ತಕ್ಷಣ ಪಾವತಿಸುವುದಾಗಿ ಆತ ನಂಬಿಸಿದ್ದಾನೆ. ಆತನ ಮಾತನ್ನು ನಂಬಿದ ಅಂಗಡಿ ಮಾಲಕಿ 200 ರೂ. ಮೌಲ್ಯದ ತೆಂಗಿನ ಎಣ್ಣೆ ಹಾಗೂ 1,000 ರೂ. ನಗದನ್ನು ನೀಡಿದ್ದಾರೆ.

ಈ ವೇಳೆ ತನ್ನ ಮೊಬೈಲ್‌ನಲ್ಲಿ ಹಣ ಪಾವತಿಸಿದಂತೆ ನಟಿಸಿದ ವ್ಯಕ್ತಿ, ಕೆಲವೇ ಕ್ಷಣಗಳಲ್ಲಿ ಸ್ಕೂಟರ್ ಏರಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಖಾತೆಯನ್ನು ಪರಿಶೀಲಿಸಿದಾಗ ಯಾವುದೇ ಹಣ ಜಮೆಯಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಇದರಿಂದ ಅಂಗಡಿ ಮಾಲಕಿ ಹಣ ಹಾಗೂ ನೀಡಿದ್ದ ತೆಂಗಿನ ಎಣ್ಣೆ ಎರಡನ್ನೂ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.

ಘಟನೆಯ ವೇಳೆ ಆರೋಪಿಯು ಹೆಲ್ಮೆಟ್ ಕಳಚದೆ ಮುಖ ಮರೆಸಿಕೊಂಡೇ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಡಿಜಿಟಲ್ ಪಾವತಿಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ವಂಚನೆಗಳ ಬಗ್ಗೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 135