ಸ್ಥಳೀಯ

ಮಹಾಲಿಂಗೇಶ್ವರ ದೇವಸ್ಥಾನದ ಅನುಮತಿ ರಹಿತ ಕಾಮಗಾರಿಗಳಿಗೆ ಹೈಕೋರ್ಟ್‌ ತಡೆಯಾಜ್ಞೆ: ವಿರೂಪಾಕ್ಷ ಮಚ್ಚಿಮಲೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಲಾಖೆಯ ಅನುಮತಿ ಇಲ್ಲದೇ ಅನೇಕ ಕಾಮಗಾರಿಗಳು ನಡೆಯುತ್ತಿದ್ದು, ಆ ಕಾಮಗಾರಿಗಳಿಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ವಕೀಲ ವಿರೂಪಾಕ್ಷ ಮಚ್ಚಿಮಲೆ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀರ್ಣೋದ್ಧಾರ / ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ಭಕ್ತರಿಂದ ಹಣ ಸಂಗ್ರಹ ಮಾಡುತ್ತಿದ್ದು, ಈ ಸಮಿತಿಗೆ ಇಲಾಖೆಯಿಂದ ಅನುಮೋದನೆ ಸಿಕ್ಕಿರುವುದಿಲ್ಲ. ಹಾಗಾಗಿ ಸಮಿತಿ ಹೆಸರಿನಲ್ಲಿ ಸಭೆ ನಡೆಸುವುದು ಅನಧಿಕೃತ ಎನ್ನುವುದನ್ನು ಹೈಕೋರ್ಟ್‌ ಗಮನಕ್ಕೆ ತರಲಾಗಿದೆ ಎಂದ ಅವರು, ಇದೇ ಸಮಿತಿ ಹೆಸರಿನಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಈ ಅನಧಿಕೃತ ಟೆಂಡರ್‌ ಪ್ರಕಟಣೆಗಳನ್ನು ದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ ಎಂದರು.

ದೇವಸ್ಥಾನದ ಉತ್ತರ ಭಾಗದ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದು, ಇದಕ್ಕೂ ಧಾರ್ಮಿಕ ದತ್ತಿ ಇಲಾಖೆಯಿಂದ ಪೂರ್ವಾನುಮತಿ ಪಡೆದುಕೊಂಡಿಲ್ಲ. ಈ ಕಾಮಗಾರಿಗೆ ಮೊದಲೇ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಅದನ್ನು ಮೀರಿ ಕೆಲಸಗಳನ್ನು ನಡೆಸಲಾಗುತ್ತಿದೆ ಎಂದ ಅವರು, ಅಭಿವೃದ್ಧಿ ಸಮಿತಿ ರಚನೆಯೇ ನಿಯಮ ಬಾಹಿರ. ಧಾರ್ಮಿಕ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಸಮಿತಿ ರಚನೆ ಆಗಿಲ್ಲ. ಇದಲ್ಲದೇ, ದೇವಾಲಯದಲ್ಲಿ ಸಮಿತಿ ನೇಮಕವಾದ ನಂತರ ನಡೆದಿರುವ ವಾರ್ಷಿಕ ಲೆಕ್ಕ ಪತ್ರಗಳಲ್ಲಿ ಲೋಪದೋಷಗಳು ಇವೆ ಎಂದರು.

ದೇವಸ್ಥಾನದ ಹೊರಾಂಗಣದಲ್ಲಿ ಐದು ಹಳೆ ಕಟ್ಟಡಗಳನ್ನು ತೆರವುಗೊಳಿಸಿ, ಇಲಾಖೆಯ ಅನುಮತಿ ಪಡೆಯದೇ ನೂತನ ಶಿಲಾಮಯ ಕಟ್ಟಡ ನಿರ್ಮಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅನಧಿಕೃತವಾಗಿ ಹಣ ಸಂಗ್ರಹ ಮಾಡಲಾಗಿದೆ. ಇದರ ಕಾಮಗಾರಿಗೂ ಟೆಂಡರ್‌ ಪ್ರಕ್ರಿಯೆ ನಡೆಸಿಲ್ಲ. ಕಟ್ಟೆಗಳ ನಿರ್ಮಾಣಕ್ಕೂ ಇಲಾಖೆಯ ನಿಯಮಗಳನ್ನು ಪಾಲಿಸಿಲ್ಲ ಎಂದು ದೂರಿದರು. ಅಲ್ಲದೇ, ನವಗ್ರಹ ಗುಡಿ, ಅಯ್ಯಪ್ಪ ಸನ್ನಿಧ, ನಟರಾಜ ವೇದಿಕೆ ಸಭಾಂಗಣ ತೆರವುಗೊಳಿಸುವ ಬಗ್ಗೆ ಸರಕಾರದ ನಿಯಮಗಳಡಿಯಲ್ಲಿ ಟೆಂಡರ್‌ ಪ್ರಕ್ರಿಯೆ, ಮೌಲ್ಯಮಾಪನ ಮಾಡದೇ ತೆರವುಗೊಳಿಸಲಾಗಿದೆ. ಈಗಾಗಲೇ ದೇವರಿಗೆ ಚಿನ್ನದ ಮುಖವಾಡ ಮಾಡುವ ಬಗ್ಗೆ ಭಕ್ತಾಧಿಗಳಿಂದ ಕಾಣಿಕೆ ರೂಪದಲ್ಲಿ ಚಿನ್ನ ಸಂಗ್ರಹ ಮಾಡಲಾಗುತ್ತಿದೆ. ಆದರೆ ಇದರ ಬಗ್ಗೆ ಇಲಾಖಾ ಅನುಮತಿಯಾಗಲಿ, ಆಗಮ ಪಂಡಿತರ ಅಭಿಪ್ರಾಯ ವರದಿಗಳನ್ನು ಪಡೆದಿಲ್ಲ. ಇದರ ನಿರ್ವಹಣೆ ಬಗ್ಗೆ ದೇವಳದಿಂದ ಸರಿಯಾದ ಮಾಹಿತಿಯೇ ಇಲ್ಲ ಎಂದು ಆರೋಪಿಸಿದರು.

ಇದರ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಇದರ ಬಗ್ಗೆ ಇಲಾಖಾ ತನಿಖೆ ನಡೆಯುತ್ತಿದ್ದು, ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ, ಕಾನೂನು ಹೋರಾಟವನ್ನು ನಡೆಸಲಾಗುತ್ತಿದೆ. ಇದೀಗ ಮಧ್ಯಂತರ ತಡೆಯಾಜ್ಞೆ ನೀಡಿರುವ ನ್ಯಾಯಾಲಯ, ನಿಯಮ ಬಾಹಿರ ಕೆಲಸ ಕಾಮಗಾರಿ ನಡೆಸದಂತೆ ಹಾಗೂ ಈಗಾಗಲೇ ಕರೆದಿರುವ ನಿಯಮ ಬಾಹಿರ ಟೆಂಡರ್‌ ಕೆಲಸಗಳನ್ನು ಮುಂದುವರಿಸದಂತೆ, ಅನುಮೋದನೆಯಾಗದ ಜೀರ್ಣೋದ್ಧಾರ ಸಮಿತಿಯ ಹೆಸರಿನಲ್ಲಿ ಕೆಲಸಗಳನ್ನು ಮಾಡಲು ಸಭೆಗಳನ್ನು ನಡೆಸಲು ಮಧ್ಯಂತರ ತಡೆಯಾಜ್ಞೆ ನೀಡಿದೆ. ಇಲಾಖಾ ನಿಯಮ ಹಾಗೂ ಕಾನೂನಿಗೆ ವಿರುದ್ಧವಾದ ಯಾವುದೇ ಕಾಮಗಾರಿ ಮಾಡದಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಸರಕಾರಕ್ಕೆ ನಿರ್ದೇಶನ ನೀಡಿರುತ್ತದೆ ಎಂದು ಮಾಹಿತಿ ನೀಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಡಿ. 20ರ ಒಕ್ಕಲಿಗ ಸಮುದಾಯದ ವಾರ್ಷಿಕ ಸಮಾವೇಶದ ಪ್ರಚಾರಕ್ಕೆ ಕುಂಬ್ರ ವಲಯದ ಸಿದ್ಧತೆ – ತಾಲೂಕು ಕ್ರೀಡಾಕೂಟದ ಕುರಿತು ಚರ್ಚೆ

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಾಗೂ ಸಹ ಸಂಘಟನೆಗಳ ಸಹಯೋಗದಲ್ಲಿ ಡಿಸೆಂಬರ್…

1 of 140