tamanvi
ವಿಶೇಷಸ್ಥಳೀಯ

ಮಂಗಳೂರು: ಕೆಎಸ್‌ಆರ್‌ಟಿಸಿ ವಿಭಾಗಕ್ಕೆ 100 ಎಲೆಕ್ಟ್ರಿಕ್ ಬಸ್‌ಗಳು ಮಂಜೂರು

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಕೇಂದ್ರ ಸರ್ಕಾರದ ಪಿಎಂ ಬಸ್ ಸೇವಾ ಯೋಜನೆಯಡಿ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ 100 ಹೊಸ ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿವೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ಬಸ್‌ಗಳ ಸೇವೆಯನ್ನು ವಿವಿಧ ಮಾರ್ಗಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

ಯೋಜನೆಯಡಿ ಸ್ಟೇಟ್ ಬ್ಯಾಂಕ್‌ನಿಂದ ಸುರತ್ಕಲ್, ಮೂಲ್ಕಿ ಹಾಗೂ ಪಡುಬಿದ್ರಿ ಮಾರ್ಗವಾಗಿ ಉಡುಪಿಗೆ 10 ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ. ಇದೇ ರೀತಿ ವಾಮಂಜೂರು, ಗುರುಪುರ ಹಾಗೂ ಕೈಕಂಬ ಮಾರ್ಗವಾಗಿ ಮೂಡುಬಿದಿರೆಗೆ 10 ಬಸ್‌ಗಳನ್ನು ನಿಯೋಜಿಸಲಾಗುತ್ತದೆ.

ಇದರೊಂದಿಗೆ ಪಡೀಲ್‌ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಅನುಕೂಲಕ್ಕಾಗಿ 4 ಬಸ್‌ಗಳನ್ನು ಹಾಗೂ ಈ ಹಿಂದೆ ಸ್ಥಗಿತಗೊಂಡಿದ್ದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗಕ್ಕೆ ಮತ್ತೆ 2 ಬಸ್‌ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ ಮತ್ತು ಚಾರ್ಜಿಂಗ್ ವ್ಯವಸ್ಥೆಗಾಗಿ ಮಂಗಳೂರಿನ ಕುಂಟಿಕಾನ ಹಾಗೂ ಬಾಳೆಪುಣಿಯಲ್ಲಿ ಡಿಪೋಗಳನ್ನು ಗುರುತಿಸಲಾಗಿದೆ. ಪ್ರತಿ ಡಿಪೋದಲ್ಲಿ 50 ಬಸ್‌ಗಳ ನಿಲುಗಡೆ ಹಾಗೂ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆಯಿದೆ.

ಈ ಮೂಲಕ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 142