ಸಂಸ್ಕರಿಸದೆ ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಮಾಡಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕುಮಾರಧಾರಾ ನದಿಗೆ ತ್ಯಾಜ್ಯವನ್ನು ನೇರವಾಗಿ ಹರಿಯಬಿಡುತ್ತಿರುವವರ ಮೇಲೆ ಕ್ರಮ ವಹಿಸಲು ಸೂಚಿಸಿದರುವುದಾಗಿ ತಿಳಿಸಿದರು.
ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿಗಾ ಇಡಬೇಕು, ತ್ಯಾಜ್ಯ ಜಲ ಸಂಸ್ಕರಣಾ ಘಟಕಗಳ ಪರಿಶೀಲನೆ ಮಾಡಬೇಕು, ಯಾರೇ ಸಂಸ್ಕರಿಸದೆ ತ್ಯಾಜ್ಯ ನದಿಗೆ ಬಿಟ್ಟಿದ್ದರೆ ಮೊದಲಿಗೆ ಎಚ್ಚರಿಕೆ ನೀಡಬೇಕು. ಪದೇ ಪದೇ ಇದೇ ತಪ್ಪು ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ತಿಳಿಸಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರ ಮೇಲೆ ವನ್ಯಜೀವಿ ದಾಳಿ ಮಾಡದಂತೆ ಎಚ್ಚರ ವಹಿಸಲು ಮತ್ತು ಚಿರತೆ ಸಮಸ್ಯೆ ಇರುವ ಕಡೆಗೆ ಹೆಚ್ಚಿನ ಬೋನು ನೀಯೋಜಿಸಲು ಮತ್ತು ಆನೆಗಳು ಬಾರದಂತೆ ಕಂದಕ ಕಾಮಗಾರಿ ಪೂರ್ಣಗೊಳಿಸಲು ಮತ್ತು ಸೌರ ತಂತಿ ಬೇಲಿ ಅಳವಡಿಸಲು ಸೂಚಿಸಿದರು.
ಮಾನವನ ಜೀವ ಅತ್ಯಮೂಲ್ಯವಾಗಿದ್ದು ಒಂದೇ ಒಂದು ಪ್ರಾಣಹಾನಿಯೂ ಆಗಬಾರದು. ಈ ನಿಟ್ಟಿನಲ್ಲಿ ಕ್ರಮ ವಹಿಸಲು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಡಲು ಡ್ರೋನ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ಕಮಾಂಡ್ ಸೆಂಟರ್ ತೆರೆಯಲಾಗಿದೆ ಎಂದು ತಿಳಿಸಿದರು.
ತಾವು ಇಂದು ದೇವಾಲಯಕ್ಕೆ ಬರುವಾಗ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಬಾಟಲಿ, ತಟ್ಟೆ ಇತ್ಯಾದಿ ಬಿದ್ದಿರುವುದನ್ನು ನೋಡಿ ಆತಂಕವಾಯಿತು. ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಚಕ್ ಪೋಸ್ಟ್ ಸ್ಥಾಪಿಸಿ 2 ಹಂತದ ತಪಾಸಣೆ ಮಾಡಲು ಸೂಚಿಸಿರುವುದಾಗಿ ತಿಳಿಸಿದರು.






















