ಸಿಎಂ ಬದಲಾವಣೆ ಹೊತ್ತಲ್ಲೇ ಮುಸ್ಲಿಂ ಸಮುದಾಯ ಕಾಂಗ್ರೆಸ್ ಹೈಕಮಾಂಡಿಗೆ ಮತ್ತೊಮ್ಮೆ ಖಡಕ್ ಸಂದೇಶ ರವಾನಿಸಿದೆ. ಇದರೊಂದಿಗೆ ಮುಸ್ಲಿಂ ಸಮುದಾಯದ ಮಹತ್ವದ ಬೇಡಿಕೆಯನ್ನು ಮುಂದಿಟ್ಟಿದೆ.
ಯು.ಟಿ ಖಾದರ್ ಅವರಿಗೆ (ಅಲ್ಪಸಂಖ್ಯಾತ ಕೋಟಾದಡಿಯಲ್ಲಿ) ಸಚಿವ ಸ್ಥಾನ ನೀಡಲಾಗಿದೆ. ಇದೀಗ ಮತ್ತೆ 4 ಜನರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಬೇಡಿಕೆ. ಇದೊಂದು ರೀತಿಯಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ಭಾರೀ ಇಕ್ಕಟ್ಟಿನ ಪರಿಸ್ಥಿತಿ ಎಂದೇ ಹೇಳಬಹುದು.
ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದ ಧರ್ಮಗುರುಗಳು ಹಾಗೂ ರಾಜಕೀಯ ನಾಯಕರು ಒಕ್ಕೊರಲಿನಿಂದ ಈ ಆಗ್ರಹವನ್ನು ಮುಂದಿಟ್ಟಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಮೌಲ್ವಿಗಳು ಖಡಕ್ ಸಂದೇಶ ರವಾನಿಸಿದ್ದಾರೆ.
“ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಏಕಪಕ್ಷೀಯ ಮತಗಳಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವು ಸಮುದಾಯದ ಋಣವನ್ನು ಮುಟ್ಟಿಸಬೇಕಾದ ಅನಿವಾರ್ಯತೆ ಇದೆ. ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಭಾರಿ ರಾಜಕೀಯ ಹೊಡೆತ ಬೀಳುವುದು ನಿಶ್ಚಿತ” ಎಂದು ನಾಯಕರು ಎಚ್ಚರಿಸಿದ್ದಾರೆ.
ಯು.ಟಿ. ಖಾದರ್ ಅವರೊಂದಿಗೆ ಸಮುದಾಯದ ಇತರ ನಾಲ್ವರು ಹಿರಿಯ ಶಾಸಕರುಗಳಾದ ಜಮೀರ್ ಅಹ್ಮದ್, ಎನ್.ಎ. ಹ್ಯಾರಿಸ್, ತನ್ವೀರ್ ಸೇಠ್ ಮತ್ತು ಸಲೀಂ ಅಹ್ಮದ್ ಅವರಿಗೆ ಕಡ್ಡಾಯವಾಗಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಇನ್ನು ಎರಡನೇ ಹಂತದ ಸಚಿವ ಸಂಪುಟ ರಚನೆಯಲ್ಲಿ ಯಾರಿಗೆಲ್ಲ ಸ್ಥಾನ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.






















