ನೂರು ವರ್ಷ ಪೂರೈಸಿರುವ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನ ನೂತನ ಸ್ವತಂತ್ರ ನಿರ್ದೇಶಕರಾಗಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಎಂ. ಅರುಣ್ ಶ್ಯಾಮ್ ನೇಮಕಗೊಂಡಿದ್ದಾರೆ.
ಬ್ಯಾಂಕ್‌ನ ಆಡಳಿತವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವರನ್ನು ಮಂಡಳಿಗೆ ನೇಮಕ ಮಾಡಲಾಗಿದೆ. ಪ್ರಸ್ತುತ ಬ್ಯಾಂಕ್‌ನ ಮಂಡಳಿಯಲ್ಲಿ ಪಿ. ಪ್ರದೀಪ್ ಕುಮಾರ್ ಅವರು ಅರೆಕಾಲಿಕ ಅಧ್ಯಕ್ಷರಾಗಿದ್ದು ಡಾ. ಅರುಣ್ ಶ್ಯಾಮ್ ಅವರನ್ನು ಒಳಗೊಂಡಂತೆ ಒಟ್ಟು 7 ಮಂದಿ ಸ್ವತಂತ್ರ ನಿರ್ದೇಶಕರಿದ್ದಾರೆ.
ಇತರೆ ಸ್ವತಂತ್ರ ನಿರ್ದೇಶಕರಾಗಿ ಉಮಾ ಶಂಕರ್, ಬಾಲಕೃಷ್ಣ ಆಲ್ಸೆ ಎಸ್., ಜೀವದಾಸ್ ನಾರಾಯಣ್, ಕಲ್ಮಂಜೆ ಗುರುರಾಜ್ ಆಚಾರ್ಯ ಮತ್ತು ಹರೀಶ್ ಎಚ್. ವಿ. ಕಾರ್ಯ ನಿರ್ವಹಿಸುತ್ತಿದ್ದಾರೆ. ಆರ್‌ಬಿಐ ನಿಯಮದಂತೆ ಸ್ವತಂತ್ರ ನಿರ್ದೇಶಕರ ನೇಮಕ ಬ್ಯಾಂಕ್‌ನ ನಿರ್ಧಾರ ಪ್ರಕ್ರಿಯೆಯಲ್ಲಿ ನಿಷ್ಪಕ್ಷಪಾತ ಮತ್ತು ಪಾರದರ್ಶಕತೆ ತರಲು ಸಹಕಾರಿಯಾಗಲಿದೆ.
ಮೂಲತ: ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಪಂಜಿಗದ್ದೆ ನಿವಾಸಿಯಾಗಿರುವ ಅರುಣ್ ಶ್ಯಾಮ್ ಅವರು 2006ರಲ್ಲಿ ಪುತ್ತೂರಿನ ಈಶ್ವರಮಂಗಲ ನಿವಾಸಿ ಕೆ.ಎಂ. ನಟರಾಜ್ ಅವರ ಜೊತೆ ಬೆಂಗಳೂರು ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಮುಂದೆ ಸ್ವಂತ ಕಚೇರಿ ಆರಂಭಿಸಿ ವಕೀಲಿ ವೃತ್ತಿ ಮುಂದುವರಿಸಿದ್ದರು. ವಿಟ್ಲ ಮಾದಕಟ್ಟೆ ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡ ಅರುಣ್‌ಶ್ಯಾಮ್ ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಬಳಿಕ ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜಿನಲ್ಲಿ ಎಲ್‌ಎಲ್‌ಎಂ ಪದವಿ ಪಡೆದರು. ಇದರ ಜೊತೆಗೆ ಶಿವಮೊಗ್ಗದಲ್ಲಿ ಎಂ.ಆರ್. ಸತ್ಯನಾರಾಯಣ ಅವರ ಜೊತೆ ವಕೀಲಿ ವೃತ್ತಿ ಮಾಡಿದ್ದರು. ಬಳಿಕ 2006ರಲ್ಲಿ ಬೆಂಗಳೂರಿನತ್ತ ಚಿತ್ತ ಹರಿಸಿದರು. ಬೆಂಗಳೂರಿನ ಅಲಯನ್ಸ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅರುಣ್‌ಶ್ಯಾಮ್ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ. ಈಶ್ವರ ಭಟ್ ಮತ್ತು ಕುಸುಮ ಈಶ್ವರ ಭಟ್‌ರವರ ಪುತ್ರರಾದ ಅರುಣ್‌ಶ್ಯಾಮ್ ಪ್ರಸ್ತುತ ಪತ್ನಿ ಸುಷ್ಮಾ ಅರುಣ್ ಶ್ಯಾಮ್ ಮತ್ತು ಮಕ್ಕಳೊಂದಿಗ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಧಿ ಪರಿಷತ್ ಮೂಲಕ ಸಂಘ ಪರಿವಾರ ಪ್ರವೇಶಿಸಿರುವ ಅರುಣ್ ಶ್ಯಾಮ್ ಅವರು ಹಲವು ಕ್ಲಿಷ್ಟಕರ ಕೇಸುಗಳಲ್ಲಿ ವಾದ ಮಂಡಿಸಿ ಗಮನ ಸೆಳೆದಿದ್ದಾರೆ.





















