ಪ್ರಚಲಿತ

ಇನ್ನೊಬ್ಬರ ನೆಮ್ಮದಿಗಾಗಿ ನಮ್ಮ ಶ್ರಮ – ರೋಟರಿ ಧ್ಯೇಯ | ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಪದಸ್ವೀಕಾರ ಸಮಾರಂಭದಲ್ಲಿ ವಾಲ್ಟರ್ ನಂದಳಿಕೆ | ಪಿಂಕ್ ಆಟೋ, ಬ್ಯಾಡ್ಜ್ – ವರ್ಷದ ಯೋಜನೆ: ಆಶಾ ರೆಬೆಲ್ಲೋ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಮ್ಮ ನೆಮ್ಮದಿ ಇನ್ನೊಬ್ಬರ ಕೈಯಲ್ಲಿರುವುದು. ಹಾಗಾಗಿ ಇನ್ನೊಬ್ಬರ ಜೀವನದಲ್ಲಿ ನಾವು ಖುಷಿಯನ್ನು ನೀಡುವವರಾಗಬೇಕು. ರೋಟರಿ ಕ್ಲಬ್’ಗಳು ಈ ನಿಟ್ಟಿನಲ್ಲಿ ಕಾರ್ಯ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮಂಗಳೂರು ಡೈಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಹೇಳಿದರು.

maithri

ರೋಟರಿ ಮನೀಷಾ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಯಕ ಯಾರು ಅಂದರೆ – ಮತ್ತೊಬ್ಬರಿಗಾಗಿ ಸಮಾಜದಲ್ಲಿ ಪ್ರಭಾವವನ್ನು ಸೃಷ್ಟಿ ಮಾಡುವವನು. ಅಂದರೆ ನಾವು ನಮಗಾಗಿ ಬದುಕುವುದಲ್ಲ. ಸಮಾಜಕ್ಕಾಗಿ, ಸಮಾಜದ ಇನ್ಯಾರೋ ವ್ಯಕ್ತಿಗಳ ನೆಮ್ಮದಿ, ಖುಷಿಗಾಗಿ ಬದುಕುವುದು. ಅದೇ ರೀತಿ ನಮ್ಮ ಜೀವನವನ್ನೇ ನೋಡಿಕೊಳ್ಳಿ – ನಮ್ಮ ಖುಷಿಗೆ ಇನ್ಯಾರೋ ಕಾರಣರಾಗಿರುತ್ತಾರೆ. ಹಾಗಾಗಿ ಇನ್ನೊಬ್ಬರ ಖುಷಿ, ನೆಮ್ಮದಿಗಾಗಿ ನಾವು ಕೆಲಸ ಮಾಡಬೇಕು ಎಂದರು.

ಆರೋಗ್ಯಕ್ಕೆ ಆದ್ಯತೆ:

ನಮ್ಮ ಜೀವನದಲ್ಲಿ ಎಂದಿಗೂ ಆರೋಗ್ಯಕ್ಕೆ ಮೊದಲ ಸ್ಥಾನ ನೀಡಬೇಕು. ಒಂದು ವೇಳೆ ಆರೋಗ್ಯ ಕಳೆದುಕೊಂಡರೆ, ಮಿಕ್ಕೆಲ್ಲವನ್ನು ಕಳೆದುಕೊಂಡಂತೆ. ರೋಗ ಬರುವವರೆಗೂ ಜಾಗೃತರಾಗದೇ ಇರುವ ಸ್ಥಿತಿ ಬೇಡ. ಇಂದಿನಿಂದಲೇ ಆರೋಗ್ಯವಂತ ಜೀವನ ನಡೆಸಲು ಏನು ಬೇಕೋ ಅದೆಲ್ಲವನ್ನು ಮೊದಲ ಪ್ರಾಶಸ್ತ್ಯ ನೀಡಿ ಮಾಡಬೇಕು. ಹಾಗೆಂದು ಅತಿರೇಕ ಬೇಡ. ಬ್ಯಾಲೆನ್ಸ್ ಇರಲಿ ಎಂದು ಕಿವಿಮಾತು ಹೇಳಿದರು.

ರೋಟರಿಯ ಸಮಯ ಪಾಲನೆ ನನಗೆ ತುಂಬಾ ಇಷ್ಟ. ಇಲ್ಲಿ ನಾವು ಕಲಿಯಬೇಕಾದ ಪಾಠವೂ ಇದೆ. ಜೀವನದಲ್ಲಿ ಸಮಯಕ್ಕೆ ಬೆಲೆ ನೀಡಿದರೆ ಎಲ್ಲಾ ಕಡೆಯೂ ಗೆಲ್ಲುತ್ತೇವೆ ಎಂದರು.

ಪಿಂಕ್ ಆಟೋ, ಬ್ಯಾಡ್ಜ್ – ಈ ವರ್ಷದ ಯೋಜನೆ: ಆಶಾ ಮರಿಯಾ ರೆಬೆಲ್ಲೋ

ಅಧಿಕಾರ ಸ್ವೀಕರಿಸಿ ಮಾತನಾಡಿದ ಆಶಾ ಮರಿಯಾ ರೆಬೆಲ್ಲೋ, ಕೊರೋನಾ ಸಂದರ್ಭ ವಾಲ್ಟರ್ ನಂದಳಿಕೆ ಅವರು ಆರಂಭಿಸಿದ ಕೊರೋನಾ ಗೆಲ್ಲೋಣ ಎಂಬ ಜಾಗೃತಿ ಕಾರ್ಯಕ್ರಮದಿಂದ ನಾನು ಪ್ರೇರೇಪಿತನಾದೆ. ಇದರಿಂದಾಗಿ ನಾವು ಒಂದಷ್ಟು ಮಂದಿ ಕೆಲಸ ಮಾಡುವಂತಾಯಿತು. ಹೊರ ಪ್ರಪಂಚಕ್ಕೆ ನಾವು ತೆರೆದುಕೊಳ್ಳಬೇಕು. ಬಾವಿಯೊಳಗಿನ ಕಪ್ಪೆ ಎಂಬ ಸ್ಥಿತಿಯಿಂದ ಹೊರಬಂದು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕಾದ ಅಗತ್ಯ ಪ್ರತಿಯೋರ್ವ ಸ್ತ್ರೀಗೂ ಇದೆ ಎಂದರು.

ರೋಟರಿ ಎಂದರೆ ನಾನು ಅಲ್ಲ; ನಾವು ಎಂದು. ಇಲ್ಲಿ ಯೋಜನೆಗಳನ್ನು ರೂಪಿಸಿ, ಸಮಾಜಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ಜಾರಿ ಮಾಡಲಾಗುತ್ತದೆ. ಈ ಬಾರಿ ಪಿಂಕ್ ಆಟೋ ಎಂಬ ಯೋಜನೆಯನ್ನು ರೂಪಿಸಿದ್ದೇವೆ. ಓರ್ವ ಮಹಿಳೆಗೆ ಬ್ಯಾಡ್ಜ್ ನೀಡಿ, ಆಟೋ ರಿಕ್ಷಾ ತೆಗೆದುಕೊಡುವ ಯೋಜನೆ ಇದು. ಈ ಮೂಲಕ ಮಹಿಳೆಯೋರ್ವಳನ್ನು ಸಶಕ್ತಳಾಗಿ ರೂಪಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.

ಸಮಾಜದಲ್ಲಿ ಬದಲಾವಣೆ ಮಾಡಬೇಕು, ಸಮಾಜದಲ್ಲಿನ ನೊಂದವರ ಬಾಳಿನಲ್ಲಿ ಮಂದಹಾಸ ಮೂಡಬೇಕು, ಸಮಾಜವನ್ನು ಬೆಳಗಿಸಬೇಕು ಎನ್ನುವುದು ರೋಟರಿ ಸಂಸ್ಥೆಯ ಧ್ಯೇಯ ಶ್ಲಾಘನೀಯ. ಸ್ವಾರ್ಥರಹಿತ ಸೇವೆಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ಮುಖ್ಯ ಅತಿಥಿ, ಮಂಗಳೂರಿನ ದಾಯ್ಜಿ ವಲ್ಡ್೯ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ವಾಲ್ಟರ್ ನಂದಳಿಕೆರವರು ಹೇಳಿದರು.

ರೋಟರಿ ಅಧ್ಯಕ್ಷ ಹುದ್ದೆ ಜವಾಬ್ದಾರಿಯ ಹುದ್ದೆಪ್ರೊ|ದತ್ತಾತ್ರೇಯ ರಾವ್:
ಪದ ಪ್ರದಾನ ನೆರವೇರಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಕ್ಲಬ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್‌, ಅಂತಾರಾಷ್ಟ್ರೀಯ ರೋಟರಿಯಲ್ಲಿ ನಮಗೆ ಕೊಡುವ ಅಧ್ಯಕ್ಷ ಹುದ್ದೆ ಅದು ಜವಾಬ್ದಾರಿಯ ಹುದ್ದೆಯಾಗಿದೆ. ಸಮಾಜಕ್ಕೆ, ಜನರಿಗೆ ಒಳ್ಳೆಯದು ಮಾಡಲಿಕ್ಕೆ ಅದು ವೇದಿಕೆಯಾಗಿದೆ. ರೋಟರಿ ಏನು ಮಾಡುತ್ತದೆ ಎಂದು ಪ್ರಶ್ನಿಸುವವರಿಗೆ, ರೋಟರಿ ಸದಸ್ಯನಾದ ಮೇಲೆ ಗೊತ್ತಾಗುತ್ತದೆ ರೋಟರಿ ಏನೆಂಬುದು ಎಂದು ಹೇಳುವುದಿದೆ. ರೋಟರಿ ಮುಖೇನ ನೀಡುವ ದೇಣಿಗೆ ಅದು ಯಾರಿಗೆ ಸಲ್ಲಬೇಕು ಅಲ್ಲಿ ಸಲ್ಲುತ್ತದೆ. ರೋಟರಿಯಲ್ಲಿ ಜಾತಿ, ಧರ್ಮ, ಮೇಲು-ಕೀಳು ಎಂದು ಇಲ್ಲ. ಇಲ್ಲಿ ಎಲ್ಲರೂ ಸಮಾನರೇ ಎಂದರು.

ಯೋಜನೆಗಳು ಯಶಸ್ವಿಯಾಗಲಿ: ಪ್ರೊ|ಝೇವಿಯರ್ ಡಿಸೋಜ
ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿದ ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜರವರು, ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ಆಶಾ ರೆಬೆಲ್ಲೋರವರು ಕ್ಲಬ್ ಅಧ್ಯಕ್ಷರಾಗಿದ್ದಾರೆ. ಮಾತ್ರವಲ್ಲ ಅವರಲ್ಲಿ ಕನಸುಗಳನ್ನು ಸಾಧಿಸುವ ಛಲವಿದೆ. ಕ್ಲಬ್ ಪೂರ್ವಾಧ್ಯಕ್ಷರು ಕ್ಲಬ್‌ನ್ನು ಮುನ್ನೆಡೆಸಿಕೊಂಡು ಬಂದಿದ್ದು ಕ್ಲಬ್‌ನ ಮುಂದಿನ ಯೋಜನೆಗಳು ಯಶಸ್ವಿಯಾಗಲಿ ಎಂದರು.

ಕ್ಲಬ್ ಸ್ವರ್ಣಮಯ ಹೊಂದಲಿ: ಸುಂದರ ರೈ
ರೋಟರಿ ವಲಯ ಸೇನಾನಿ, ರೋಟರಿ ಸ್ವರ್ಣ ಪೂರ್ವಾಧ್ಯಕ್ಷ ಸುಂದರ್ ರೈ ಬಲ್ಕಾಡಿ ಮಾತನಾಡಿ, ಕ್ಲಬ್ ಪೂರ್ವಾಧ್ಯಕ್ಷ ಸುಭಾಷ್ ರೈರವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದರೂ ಬಿಡುವಿಲ್ಲದ ಸಮಯದಲ್ಲೂ ಕ್ಲಬ್‌ನಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ನೂತನ ಅಧ್ಯಕ್ಷೆ ಆಶಾ ರೆಬೆಲ್ಲೋ ಅವರು ಹಲವಾರು ಕನಸುಗಳನ್ನು ಹೊಂದಿದ್ದು, ಆ ಕನಸುಗಳು ನನಸಾಗಿ ಕ್ಲಬ್ ಸ್ವರ್ಣಮಯ ಹೊಂದಲಿ ಎಂದರು.

ತಂದೆಯನ್ನು ಮೀರಿಸಿದ ಮಗ: ಚಿದಾನಂದ ಬೈಲಾಡಿ

ಜಿ.ಎಸ್.ಆರ್ ಚಿದಾನಂದ ಬೈಲಾಡಿ ಮಾತನಾಡಿ, ಕಳೆದ ಹನ್ನೊಂದು ವರ್ಷಗಳಿಂದ ಕ್ಲಬ್ ಪೂರ್ವಾಧ್ಯಕ್ಷರು ಕ್ಲಬ್ ಅನ್ನು ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಬಂದಿದ್ದಾರೆ. 60 ವರ್ಷದ ಪುತ್ತೂರಿನ ಹಿರಿಯ ಕ್ಲಬ್ ಪುತ್ತೂರು ರೋಟರಿ ಕ್ಲಬ್. ಇದರ ಮಗನ ಪ್ರಾಯದ ರೋಟರಿ ಸ್ವರ್ಣ ತನ್ನ ತಂದೆಯನ್ನು ಮೀರಿಸಿದ ಸಾಧನೆ ಮಾಡಿದೆ ಎಂದರೆ ತಪ್ಪಾಗದು. ರೋಟರಿ ಪುತ್ತೂರಿನ ಚರಿತ್ರೆಯಲ್ಲಿಯೇ ಮಹಿಳೆ ಅಧ್ಯಕ್ಷರಾಗಿಲ್ಲ. ಆದರೆ ರೋಟರಿ ಸ್ವರ್ಣದಲ್ಲಿ ಮಹಿಳೆ ಎರಡು ಬಾರಿ ಅಧ್ಯಕ್ಷತೆ ವಹಿಸಿಕೊಳ್ಳುವಂತಾಗಿದೆ. ನಾವೆಲ್ಲಾ ರೋಟರಿ ಚಳುವಳಿಯಲ್ಲಿ ತೊಡಗಿಸಿಕೊಂಡಾಗ ರೋಟರಿ ಸಂಸ್ಥೆ ಬೆಳೆಯುತ್ತದೆ ಎಂದರು.

ಸೇವೆಗಳು ನಿಂತ ನೀರಾಗಬಾರದು, ನಿರಂತರ ಹರಿಯಬೇಕುಸುಭಾಷ್ ರೈ:
ಕ್ಲಬ್ ನಿರ್ಗಮಿತ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ಪುತ್ತೂರಿನ ಎಲ್ಲಾ ರೋಟರಿ ಕ್ಲಬ್‌ಗಳ ಪದಾಧಿಕಾರಿಗಳು ಕ್ಲಬ್‌ನ ಯಶಸ್ವಿಗೆ ಸಹಕರಿಸಿದ್ದಾರೆ. ರೋಟರಿ ಸಂಸ್ಥೆಯಲ್ಲಿ ಸಮಾಜಮುಖಿ ಕಾರ್ಯಗಳು ನಿಂತ ನೀರಾಗಬಾರದು. ಅದು ನಿರಂತರ ಹರಿಯುವಂತಾಗಬೇಕು. ಬೇರೆ ಬೇರೆ ಒತ್ತಡ ಇದ್ದರೂ ಕ್ಲಬ್ ಸದಸ್ಯರ ಸಹಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನೂತನ ಅಧ್ಯಕ್ಷೆಗೆ ಶುಭ ಹಾರೈಸಿದರು.

ಸದಸ್ಯರ ಸೇರ್ಪಡೆ
ಕ್ಲಬ್ ನೂತನ ಸದಸ್ಯರಾಗಿ ನಿವೃತ್ತ ಮುಖ್ಯ ಶಿಕ್ಷಕಿ ಗ್ರೆಟ್ಟಾ ಮಸ್ಕರೇನ್ಹಸ್, ನಿವೃತ್ತ ಉಪನ್ಯಾಸಕಿ ವಾರಿಜ ಕೆ. ಅವರನ್ನು ನೂತನ ಅಧ್ಯಕ್ಷೆ ಆಶಾ ರೆಬೆಲ್ಲೋರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು. ಕ್ಲಬ್ ಪೂರ್ವಾಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ನೂತನ ಸದಸ್ಯರನ್ನು ಪರಿಚಯಿಸಿದರು.

ಟಿ.ಆರ್.ಎಫ್ ದೇಣಿಗೆ
ಇಂಟರ್ನ್ಯಾಷನಲ್ ಸರ್ವಿಸ್ ವತಿಯಿಂದ ಟಿ.ಆರ್.ಎಫ್ ಫೌಂಡೇಶನ್‌ಗೆ ಕ್ಲಬ್ ಸದಸ್ಯರ ದೇಣಿಗೆಯಾಗಿ ಚೆಕ್ ಅನ್ನು ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ದೀಪಕ್ ಮಿನೇಜಸ್‌ ಅವರು ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿ ಗಳಿಸಿದ ಸದಸ್ಯ ರೋಶನ್ ರೈ ಬನ್ನೂರು ಅವರನ್ನು ಅಭಿನಂದಿಸಲಾಯಿತು.

ಸಹಕರಿಸಿದವರಿಗೆ ಅಭಿನಂದನೆ
ಕ್ಲಬ್ ನೂತನ ಅಧ್ಯಕ್ಷೆ ಆಶಾ ರೆಬೆಲ್ಲೋರವರು ತನ್ನ ಕಾರ್ಯ ಕ್ಷೇತ್ರದಲ್ಲಿ ಸಹಕರಿಸಿದ ಶಿಕ್ಷಕಿ ಮೋಲಿ ಪಿಂಟೊ, ಉದ್ಯಮಿ ಜೋನ್ ಕುಟಿನ್ಹಾ, ನ್ಯಾಯವಾದಿ ಪ್ರಕಾಶ್ ಸಿಕ್ವೇರಾ, ಫೋಟೋಗ್ರಾಫರ್ ರೋಶನ್ ಡಾಯಸ್, ಉದ್ಯಮಿ ರೋಹನ್ ಡಾಯಸ್, ಉದ್ಯಮಿ ಸಿಲ್ವೆಸ್ಟರ್ ಗೊನ್ಸಾಲ್ವಿಸ್, ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರುಗಳನ್ನು ಅಭಿನಂದಿಸಲಾಯಿತು.
ಶ್ರೀಮತಿ ಮೀನಾಕ್ಷಿ ಗೌಡ ಪ್ರಾರ್ಥಿಸಿದರು. ವೇದಿಕೆಯಲ್ಲಿ ನೂತನ ಅಧ್ಯಕ್ಷೆ ಆಶಾ ಮರಿಯಾ ರೆಬೆಲ್ಲೋರವರ ಪತಿ ಫೆಬಿಯನ್ ಗೋವಿಯಸ್, ೨೦೨೪-೨೫ರ ಅಧ್ಯಕ್ಷ ಸುರೇಶ್ ಪಿ. ನಿಕಟಪೂರ್ವ ಕೋಶಾಧಿಕಾರಿ ವಿಜಯ್ ಡಿ’ಸೋಜ ಉಪಸ್ಥಿತರಿದ್ದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ಬೈಲಾಡಿ ವಂದಿಸಿದರು. ನಿಕಟಪೂರ್ವ ಕಾರ್ಯದರ್ಶಿ ಪ್ರವೀಣ್ ರೈ ಸಾಂತ್ಯ ವರದಿ ಮಂಡಿಸಿದರು. ಪೂರ್ವಾಧ್ಯಕ್ಷರಾದ ಮಹಾಬಲ ಗೌಡ, ಭಾಸ್ಕರ ಕೋಡಿಂಬಾಳ, ವೆಂಕಟ್ರಮಣ ಗೌಡ ಕಳುವಾಜೆ ಹಾಗೂ ಸದಸ್ಯರಾದ ದೀಪಕ್ ಮಿನೇಜಸ್, ರಾಮಣ್ಣ ರೈ, ದೀಪಕ್ ಬೊಳ್ವಾರುರವರು ಅತಿಥಿಗಳ ಪರಿಚಯ ಮಾಡಿದರು. ಮಹೇಶ್ ಕೆ.ಸವಣೂರು ಹಾಗೂ ಶ್ರೀಮತಿ ಸುಶ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ..
2028-29ರ ಸಾಲಿನ ರೋಟರಿ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ ಡಾ.ಸೂರ್ಯನಾರಾಯಣ ಕೆ ದಂಪತಿ, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿದ ಪ್ರಮೀಳಾ ರಾವ್ ಹಾಗೂ ಸುರೇಶ್ ಪಿ, ಹೂವಿನ ವ್ಯಾಪಾರಿ, ರಿಯಲ್ ಎಸ್ಟೇಟ್ ಉದ್ಯಮಿ, 27 ಬಾರಿ ರಕ್ತದಾನ ಮಾಡಿರುವ ದ.ಕ ಜಿಲ್ಲೆಯ ಏಕೈಕ ಮಹಿಳೆ ಪ್ಲೋನ್ಸಿ ಸುವಾರಿಸ್, ಶಾಲೆಯಲ್ಲಿ ಕೈದೋಟ ನಿರ್ಮಾಣ, ವೃಕ್ಷಾರೋಹಣ ನಿರ್ಮಾಣ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿವೃತ್ತ ಮುಖ್ಯ ಶಿಕ್ಷಕ ರಾಮಣ್ಣ ಗೌಡ, ಕ್ಲಬ್‌ನಲ್ಲಿ ಕಳೆದ ವರ್ಷ ಅಧಿಕಾರ ಸ್ವೀಕರಿಸಿ ಮುನ್ನೆಡೆಸಿದ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಪ್ರವೀಣ್ ರೈ ಸಾಂತ್ಯ, ಕೋಶಾಧಿಕಾರಿ ವಿಜಯ್ ಡಿ’ಸೋಜರವರುಗಳನ್ನು ಸನ್ಮಾನಿಸಲಾಯಿತು.

ಪದ ಪ್ರದಾನ..
ನೂತನ ಅಧ್ಯಕ್ಷೆ ಆಶಾ ರೆಬೆಲ್ಲೋ, ಕಾರ್ಯದರ್ಶಿ ಸಂಧ್ಯಾ ಬೈಲಾಡಿ, ಕೋಶಾಧಿಕಾರಿ ವಿಜಯ್ ವಿಲ್ಫ್ರೆಡ್ ಡಿ’ಸೋಜ, ಉಪಾಧ್ಯಕ್ಷ ರಾಮಣ್ಣ ರೈ, ನಿಕಟಪೂರ್ವ ಅಧ್ಯಕ್ಷ ಸುಭಾಷ್ ರೈ ಬೆಳ್ಳಿಪ್ಪಾಡಿ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಭಾಸ್ಕರ್ ಕೋಡಿಂಬಾಳ, ಸಾರ್ಜಂಟ್ ಎಟ್ ಆಮ್ಸ್೯ ಮೀನಾಕ್ಷಿ ಗೌಡ, ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಪ್ರವೀಣ್ ರೈ ಸಾಂತ್ಯ, ಚೇರ್ಮನ್‌ಗಳಾದ ಮೆಂಬರ್‌ಶಿಪ್ ಸುರೇಶ್ ಪಿ, ವೊಕೇಶನಲ್ ಸರ್ವಿಸ್ ದೀಪಕ್ ಬೊಳ್ವಾರು, ಕ್ಲಬ್ ಸರ್ವಿಸ್ ಪ್ರಾಜೆಕ್ಟ್ ದಿನೇಶ್ ಆಚಾರ್ಯ, ಟಿಆರ್‌ಎಫ್ ಫೌಂಡೇಶನ್ ಮಹಾಬಲ ಗೌಡ, ನ್ಯೂ ಜನರೇಶನ್ ದೀಪಕ್ ಮಿನೇಜಸ್, ಪಬ್ಲಿಕ್ ಇಮೇಜ್ ಸುನಿಲ್ ಜಾಧವ್, ಪಲ್ಸ್ ಪೋಲಿಯೊ ಸೆನೋರಿಟಾ ಆನಂದ್, ಬುಲೆಟಿನ್ ಎಡಿಟರ್ ಮಹೇಶ್ ಸವಣೂರು, ಕಮ್ಯೂನಿಟಿ ಸರ್ವಿಸ್ ಉಮೇಶ್ ಮಲುವೇಳು, ಇಂಟರ್ನ್ಯಾಷನಲ್ ಸರ್ವಿಸ್ ಆನಂದ್ ಮೂವಪ್ಪು, ಟೀಚ್ ನಾರಾಯಣ ರೈ, ವಿನ್ಸ್ ರೋಶನ್ ರೈ, ವೆಬ್& ಐಟಿ ಸುಂದರ ಗೌಡ, ಸಿ.ಎಲ್.ಸಿ.ಸಿ ಸುರೇಂದ್ರ ಆಚಾರ್ಯ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಉದಯ ಕುಮಾರ್ ಕರ್ಮಲ, ಎಥಿಕ್ಸ್ ಕಮಿಟಿ ಜಯಂತ್ ಶೆಟ್ಟಿ, ಪ್ರೋಗ್ರಾಂ ಸಮಿತಿ ಚಂದ್ರಶೇಖರ ಮೂರ್ತಿರವರಿಗೆ ಪದ ಪ್ರದಾನ ಅಧಿಕಾರಿ ಪ್ರೊ|ದತ್ತಾತ್ರೇಯ ರಾವ್‌ರವರು ಪದ ಪ್ರದಾನ ಮಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುರುಷರಕಟ್ಟೆ ಪ್ರಕರಣ: ಯುವತಿ ಮನೆಯವರಿಗೆ ಧೈರ್ಯ ತುಂಬಿದ ಪುತ್ತೂರು ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು

ಪುತ್ತೂರು: ಪುರುಷರಕಟ್ಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಯುವತಿಯ ಮನೆಗೆ ಗೌಡ ಸಮುದಾಯದ…

ರೋಟರಿಯ 4ವೇ ಟೆಸ್ಟ್ ಯಶಸ್ಸಿಗೆ ಮೆಟ್ಟಿಲು | ರೋಟರಿ ಕ್ಲಬ್ ಪುತ್ತೂರು ಯುವದ ಪದಸ್ವೀಕಾರ ಸಮಾರಂಭದಲ್ಲಿ ಡಾ. ಸುಧಾ ರಾವ್

ಪುತ್ತೂರು: ರೋಟರಿ ತಿಳಿಸಿರುವ 4 ವೇ ಟೆಸ್ಟ್ ಅನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ವೈಯಕ್ತಿಕ…

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…