ಪ್ರಚಲಿತ

ರೋಟರಿಯ 4ವೇ ಟೆಸ್ಟ್ ಯಶಸ್ಸಿಗೆ ಮೆಟ್ಟಿಲು | ರೋಟರಿ ಕ್ಲಬ್ ಪುತ್ತೂರು ಯುವದ ಪದಸ್ವೀಕಾರ ಸಮಾರಂಭದಲ್ಲಿ ಡಾ. ಸುಧಾ ರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ತಿಳಿಸಿರುವ 4 ವೇ ಟೆಸ್ಟ್ ಅನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ವೈಯಕ್ತಿಕ ಜೀವನ, ವೃತ್ತಿ ಜೀವನ, ಸಾಮಾಜಿಕ ಜೀವನ ಉತ್ತಮವಾಗಿರುತ್ತದೆ ಎಂದು ಬೊಳುವಾರು ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸುಧಾ ರಾವ್ ಹೇಳಿದರು.

maithri

ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಪುತ್ತೂರು ಯುವದ ಪದಸ್ವೀಕಾರ ಸಮಾರಂಭದಲ್ಲಿ ಪದಪ್ರದಾನ ಅಧಿಕಾರಿಯಾಗಿ ಅವರು ಮಾತನಾಡಿದರು.

ಇದು ಸತ್ಯವೇ? ಸಂಬಂಧಪಟ್ಟ ಎಲ್ಲರಿಗೂ ಇದು ನ್ಯಾಯಯುತವಾಗಿದೆಯೇ? ಇದು ಸೌಹಾರ್ದತೆ ಮತ್ತು ಉತ್ತಮ ಸ್ನೇಹವನ್ನು ಬೆಳೆಸುತ್ತದೆಯೇ? ಇದು ಸಂಬಂಧಪಟ್ಟ ಎಲ್ಲರಿಗೂ ಪ್ರಯೋಜನಕಾರಿಯಾಗಿದೆಯೇ? ಇವೇ ರೋಟರಿ ತಿಳಿಸಿರುವ 4 ವೇ ಟೆಸ್ಟ್. ದಿವಾಳಿಯ ಅಂಚಿನಲ್ಲಿರುವ ಸಂಸ್ಥೆಯೊಂದನ್ನು ಸುವ್ಯವಸ್ಥೆಗೆ ತರುವ ಹಿನ್ನೆಲೆಯಲ್ಲಿ 1932ರಲ್ಲಿ ಹರ್ಬರ್ಟ್ ಜೆ. ಟೇಲರ್ ಈ ಸಾಲುಗಳನ್ನು ರಚಿಸಿದರು. ಒಂದು ಕಂಪೆನಿಯನ್ನು ಹೇಗೆ ದಿವಾಳಿಯ ಅಂಚಿನಿಂದ ಮೇಲಕ್ಕೆ ತಂದರೋ ಅದೇ ರೀತಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಇದೇ ಸಾಲುಗಳು ಪ್ರಯೋಜನಕಾರಿ ಎಂದರು.

ನಮ್ಮಿಂದ ಸಾಧ್ಯವಾದಷ್ಟು ಒಳ್ಳೆಯದನ್ನೇ ಮಾಡಬೇಕು. ಆಗ ಸಮಾಜ ಸುಂದರವಾಗಿರುತ್ತದೆ. ನಮ್ಮ ಶಕ್ತಿಯನ್ನು ಗುಣಾತ್ಮಕವಾಗಿ ಬದಲಾಯಿಸಿಕೊಂಡಾಗ ಸಮಾಜದಲ್ಲಿ ಧನಾತ್ಮಕ ಪರಿವರ್ತನೆ ಸಾಧ್ಯ ಎಂದರು.

ರೋಟರಿಯ ಅಧ್ಯಕ್ಷತೆ ಎನ್ನುವುದು ಅಧಿಕಾರವಲ್ಲ; ಜವಾಬ್ದಾರಿ. ರೋಟರಿ ಕ್ಲಬ್ ಪುತ್ತೂರು ಯುವ 12 ಅಧ್ಯಕ್ಷರನ್ನು ಕಂಡಿದೆ. ಅವರು ಹಾಕಿಕೊಟ್ಟ ಬುನಾದಿಯನ್ನು ಮುಂದುವರಿಸಿ. ನೀವು ಹಮ್ಮಿಕೊಳ್ಳುವ ಕಾರ್ಯಕ್ರಮ ಯಶಸ್ವಿಯಾಗಿ ಸಮಾಜಕ್ಕೆ ತಲುಪುವಂತಾಗಲು ಎಲ್ಲರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಹಾರೈಸಿದರು.

ವಚನ ಜಯರಾಂ ಅವರು ಪ್ರಭಾವಿ ಮಹಿಳೆ. ಏನಾದರೂ ಸಾಧಿಸಬಲ್ಲವರು. ಯಾರು ತನ್ನ ಜೊತೆಗಾರರನ್ನು ಜೊತೆಯಾಗಿ ಮುನ್ನಡೆಸುತ್ತಾರೋ ಅವರು ಲೀಡರ್ ಎನಿಸಿಕೊಳ್ಳುತ್ತಾರೆ. ಅಂತಹ ಗುಣ ವಚನ ಅವರಲ್ಲಿದೆ. ಇದರ ಜೊತೆಗೆ ಹೊಸ ಸದಸ್ಯರನ್ನು ಕ್ಲಬ್ಬಿಗೆ ಸೇರಿಸಿಕೊಳ್ಳುವ ಪ್ರಯತ್ನ ಸದಾ ನಡೆಯುತ್ತಿರುತ್ತದೆ. ಅವರು ಕ್ಲಬ್ಬನ್ನು ಬಿಟ್ಟು ಹೋಗದಂತೆ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ತುಂಬಾ ಅಗತ್ಯ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿನಿಯರಲ್ಲಿ ಶುಚಿತ್ವದ ಜಾಗೃತಿ ಮೂಡಿಸುವ ಯೋಜನೆ “ಸುವಿಧಾ ಸಖಿ”

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ವಚನ ಜಯರಾಂ, ನಮ್ಮ ಒಂದು ವರ್ಷದ ಸೇವಾ ಚಟುವಟಿಕೆಗಳಲ್ಲಿ ಕ್ಲಬ್‌ನ ಪ್ರತಿಯೋರ್ವ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇವೆ. ಈ ರೋಟರಿ ವರ್ಷದಲ್ಲಿ ನಮ್ಮ ಯೋಜನೆಗಳಲ್ಲಿ ಪ್ರಮುಖವಾಗಿರುವುದು” ಸುವಿಧಾ ಸಖಿ” ಯೋಜನೆ. ಶಾಲಾ ವಿದ್ಯಾರ್ಥಿನಿಯರಲ್ಲಿ ಶುಚಿತ್ವದ ಜಾಗೃತಿ ಮೂಡಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶ. ಈಗಿರುವ ಮಾಹಿತಿಯಂತೆ 5ರಲ್ಲಿ 1 ಹೆಣ್ಮಗು ಶಾಲೆಯಿಂದ ದೂರ ಉಳಿಯುತ್ತಿವೆ. ಕಾರಣ ಮುಟ್ಟಿನ ಸಮಸ್ಯೆ. ಇದು ಸಮಸ್ಯೆಯಲ್ಲ. ಶುಚಿತ್ವದಿಂದ ನಿಭಾಯಿಸಿದರೆ, ಉಳಿದ ದಿನಗಳಂತೆ ಮುಟ್ಟಿನ ದಿನಗಳನ್ನು ಆರಾಮವಾಗಿ ಕಳೆಯಬಹುದು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಲಿದ್ದೇವೆ. ಈ ಯೋಜನೆಗೆ 2500 ವಿದ್ಯಾರ್ಥಿನಿಯರನ್ನು ಈ ವರ್ಷ ತೆಗೆದುಕೊಳ್ಳಲಿದ್ದೇವೆ. ಜವಾಬ್ದಾರಿಯೊಂದಿಗೆ ಸಮಾಜದಲ್ಲಿ ಸೇವೆ ಮಾಡಲು ನನಗೊಂದು ಅವಕಾಶ. ಕಿರಿಯರ ಪ್ರೀತಿ, ಹಿರಿಯರ ಆಶೀರ್ವಾದ, ಸದಸ್ಯರ ಸಹಕಾರದಿಂದ ಕ್ಲಬ್ ಅನ್ನು ಯಶಸ್ವಿಯತ್ತ ಮುನ್ನೆಡೆಸೋಣ ಎಂದರು.

ಸಂಘರ್ಷ ಬಿಟ್ಟು ಸ್ನೇಹಚಾರ ಹೊಂದಿದಾಗ ಶಾಂತಿ

ಕ್ಲಬ್ ಬುಲೆಟಿನ್ ಬಿಡುಗಡೆಗೊಳಿಸಿ ಮಾತನಾಡಿದ ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರೊ|ಝೇವಿಯರ್ ಡಿ’ಸೋಜ, ವೈವಿಧ್ಯಗಳ ನಡುವೆ ನಿರ್ದಿಷ್ಟ ಉದ್ದೇಶಕ್ಕೆ ಒಗ್ಗಟ್ಟಾಗಿ ಕಾರ್ಯೋನ್ಮುಖವಾದರೆ ಗುರಿ ಸುಲಭವಾಗಿ ತಲುಪುತ್ತೇವೆ. ರೋಟರಿ ಕ್ಲಬ್ ಪುತ್ತೂರು ಯುವ ಸಮಾಜದ ಒಳಿತಿಗಾಗಿ ಒಂದಾಗಿ, ಯೋಜನೆಗಳನ್ನು ಜಾರಿ ಮಾಡಲಿ. ಆ ಯೋಜನೆಗಳು ಶಾಶ್ವತವಾದ ಛಾಪನ್ನು ಮೂಡಿಸಲಿ. ಜಗತ್ತಿನಲ್ಲಿ ಸಂಘರ್ಷ ಬಿಟ್ಟು ಸ್ನೇಹಚಾರವನ್ನು ಹೊಂದಿದಾಗ ಶಾಂತಿಯಿಂದ ಇರಲು ಸಾಧ್ಯ ಎಂದ ಅವರು, ಕ್ಲಬ್ ಪದ ಪ್ರದಾನಕ್ಕಿಂತ ಮುಂಚಿತವಾಗಿಯೇ ಕ್ಲಬ್ ಸದಸ್ಯರ ಶುಲ್ಕವನ್ನು ಶೇ 100 ಪಾವತಿಸಿರುವುದು ರೋಟರಿ ಯುವದ ಹೆಗ್ಗಳಿಕೆ ಎಂದರು.

ಜನಮಾನಸದಲ್ಲಿ ನೆಲೆಸುವಂತಹ ಯೋಜನೆಗಳು ಮೂಡಿಬರಲಿ

ರೋಟರಿ ಯುವ ಪೂರ್ವಾಧ್ಯಕ್ಷ, ಪ್ರಸ್ತುತ ರೋಟರಿ ವಲಯ ಸೇನಾನಿ ಪಶುಪತಿ ಶರ್ಮ ಮಾತನಾಡಿ, ಬಲ್ನಾಡು ಗ್ರಾಮದಲ್ಲಿನ ಅಭಿವೃದ್ಧಿಗೆ ರೂ.1 ಲಕ್ಷಕ್ಕೂ ಮಿಕ್ಕಿ ದೇಣಿಗೆ ನೀಡಿದ ಹಿಂದಿನ ಅಧ್ಯಕ್ಷ ಕುಸುಮ್ ರಾಜ್ ರವರ ತಂಡಕ್ಕೆ ಕೃತಜ್ಞತೆಗಳು. ನೂತನ ಸಾರಥಿ ವಚನ ಜಯರಾಮ್ ರವರ ತಂಡ ರೋಟರಿ ಧ್ಯೇಯವಾಕ್ಯದಂತೆ ಪ್ರಾಜೆಕ್ಟ್ ಗಳು ಜನಮಾನಸದಲ್ಲಿ ನೆಲೆಸುವಂತೆ ಇಂಪ್ಯಾಕ್ಟ್ ಹೊಂದಲಿ ಎಂದರು.

ಕ್ಲಬ್ ನಿರ್ಗಮಿತ ಅಧ್ಯಕ್ಷ ಕುಸುಮ್ ರಾಜ್ ಮಾತನಾಡಿ, ವರ್ಷದ ಹಿಂದೆ ವಿಶ್ವಾಸದಿಂದ ಅಧಿಕಾರ ಸ್ವೀಕರಿಸಿದ್ದು ಈ ದಿನ ಅಧಿಕಾರವನ್ನು ಸಂತೋಷದಿಂದ ಹಸ್ತಾಂತರಿಸುತ್ತಿದ್ದೇನೆ. ಕ್ಲಬ್ ನಲ್ಲಿ ನಾವಿಂದು ಸಾಧಿಸಿದ್ದೇವೆ ಎಂಬುದು ನನ್ನೊಬ್ಬನ ಸಾಧನೆಯಲ್ಲ, ಅದು ಎಲ್ಲರ ಒಗ್ಗಟ್ಟುನ ಫಲ. ಪ್ರತಿ ಹೆಜ್ಜೆಯಲ್ಲಿ ಸದಸ್ಯರ ಸಮರ್ಪಣಾ ಮನೋಭಾವ, ತ್ಯಾಗ, ಪ್ರೀತಿ ಇದೆ. ಇಂದು ನಾನು ಅಧ್ಯಕ್ಷನಾಗಿ ವಿದಾಯ ಮಾತ್ರ ಆದರೆ ರೋಟರಿಯಿಂದ ಅಲ್ಲ ಎಂದರು.

ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರವಿಕುಮಾರ್ ರೈ ಶುಭಹಾರೈಸಿದರು. ವೇದಿಕೆಯಲ್ಲಿ ನಿರ್ಗಮಿತ ಅಧ್ಯಕ್ಷ ಕುಸುಮ್ ರಾಜ್ ಅವರ ಪತ್ನಿ ಲಿಖಿತಾ ಕುಸುಮ್ ರಾಜ್, ನೂತನ ಅಧ್ಯಕ್ಷೆ ವಚನ ಜಯರಾಮ್ ಅವರ ಪತಿ ಪ್ರದೀಪ್ ರಾಮಕೃಷ್ಣ ಗೌಡ ಉಪಸ್ಥಿತರಿದ್ದರು.

ರೋಟರಿ ಯುವ ಉದ್ಯಮಶೀಲತಾ ಸಾಧನಾ ಪ್ರಶಸ್ತಿ – ರೋಟರಿ ಯುವ ಸಮಾಜ ಸೇವಾ ರತ್ನ ಪ್ರಶಸ್ತಿ

ವೃತ್ತಿಪರ ಸೇವಾ ವಿಭಾಗದ ವತಿಯಿಂದ ಉದ್ಯಮ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದು ಸಮಾಜಕ್ಕೆ ಮಾದರಿಯಾಗಿರುವ ಯಶಸ್ವಿ ಮಹಿಳಾ ಉದ್ಯಮಿ ಮರೀಲು ಭಾರತ್ ಎಂಟರ್ಪ್ರೈಸ್ ಮಾಲಕಿ ಕೃಷ್ಣವೇಣಿ ಅವರಿಗೆ “ರೋಟರಿ ಯುವ ಉದ್ಯಮಶೀಲತಾ ಸಾಧನಾ ಪ್ರಶಸ್ತಿ”ಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೃಷ್ಣವೇಣಿರವರ ಪತಿ ತಿಮ್ಮಪ್ಪ ಗೌಡ, ಪುತ್ರಿ ಡಾ.ಕೃತಿ, ಅದಿತಿ, ಪುತ್ರ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅಪಾರ ಪರಿಣತಿಯ ಮೂಲಕ ಸಾವಿರಾರು ರೋಗಿಗಳ ಬದುಕಿಗೆ ಹೊಸ ಭರವಸೆ ಮೂಡಿಸಿರುವ, ಸಮಾಜಸೇವೆಯನ್ನು ತನ್ನ ಜೀವನದ ಧ್ಯೇಯವನ್ನಾಗಿಸಿ ಜನರ ಬದುಕಿನಲ್ಲಿ ಆಶಾಕಿರಣವಾಗಿರುವ ಬೆಂಗಳೂರಿನ ದೀಪಶ್ರೀ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರರೋಗ ಮತ್ತು ಮಾನಸಿಕ ಆರೋಗ್ಯ ತಜ್ಞ ಡಾ.ಶ್ರೀಧರ್ ಕೆ.ಸಿ ಅವರಿಗೆ “ರೋಟರಿ ಯುವ ಸಮಾಜಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡಾ.ಶ್ರೀಧರ್ ಕೆ.ಸಿರವರ ಪತ್ನಿ ದೀಪ ಉಪಸ್ಥಿತರಿದ್ದರು.

ಸಹಾಯಧನ ವಿತರಣೆ

ಕೆನಡಾ ನಿವಾಸಿ ಟಿ.ಅನಂತ್ ಪೈ ಅವರು ಕಳೆದ ಏಳು ವರ್ಷಗಳಿಂದ ದರ್ಬೆ ರಾಜೇಶ್ ಪ್ರಭು ಅವರ ಪುತ್ರಿ ಕು.ಅನುಷ್ಕಾ ಪ್ರಭುರವರ ಶಾಲಾ ಶಿಕ್ಷಣದ ಸಂಪೂರ್ಣ ಶುಲ್ಕವನ್ನು ಭರಿಸುತ್ತಾ ಬಂದಿದ್ದು, ಈ ಬಾರಿ ಅನುಷ್ಕಾ ಪ್ರಭುರವರು ಎಂಟನೇ ತರಗತಿಯಲ್ಲಿ ಶೇ. 92 ಅಂಕಗಳನ್ನು ಗಳಿಸಿದ್ದು, ಅನುಷ್ಕಾ ಪ್ರಭುರವರ ಶಿಕ್ಷಣಕ್ಕೆ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96.16 ಅಂಕ ಗಳಿಸಿದ ಸಂತ ಫಿಲೋಮಿನಾ ಪ್ರೌಢಶಾಲೆಯ ಟಾಪರ್ ಜೀತನ್ ಕೆ. ಅವರಿಗೆ ಸಮುದಾಯ ಸೇವಾ ವಿಭಾಗದಡಿಯಲ್ಲಿ ರೂ.10 ಸಾವಿರ ಸಹಾಯಧನವನ್ನು, ಶಿವಮಣಿ ಕಲಾಸಂಘದ ಪ್ರತಿಭಾನ್ವಿತ 15 ಮಂದಿ ವಿದ್ಯಾರ್ಥಿ ಕಲಾವಿದರಿಗೆ ಬೇಕಾದ ಶಾಲಾ ಪರಿಕರಗಳು, ಸಮವಸ್ತ್ರ, ಹೊಲಿಸುವ ವೆಚ್ಚ, ಇತರ ಶೈಕ್ಷಣಿಕ ಅಗತ್ಯಗಳಿಗಾಗಿ ರೂ.22500 ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಗೌರವಾರ್ಪಣೆ

ಕಳೆದ ಸಾಲಿನಲ್ಲಿ ಯಶಸ್ವಿಯಾಗಿ ಕ್ಲಬ್ ಅನ್ನು ಮುನ್ನೆಡೆಸಿದ ಕ್ಲಬ್ ಅಧ್ಯಕ್ಷ ಕುಸುಮ್ ರಾಜ್, ಕಾರ್ಯದರ್ಶಿ ಅಭಿಶ್ ಕೆ ಹಾಗೂ ರೋಟರಿ ಜಿಲ್ಲೆಯಲ್ಲಿ ವಲಯ ಸೇನಾನಿಯಾಗಿ ಕರ್ತವ್ಯ ನಿರ್ವಹಿಸಿದ ಕ್ಲಬ್ ಪೂರ್ವಾಧ್ಯಕ್ಷ ಭರತ್ ಪೈ ಅವರನ್ನು ಸನ್ಮಾನಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.

ಸದಸ್ಯರ ಸೇರ್ಪಡೆ

ವಿವೇಕಾನಂದ ಹಾಗೂ ಅಂಬಿಕಾ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀದೇವಿ ರೈ, ವಿಜಯಾ ಸುಪಾರಿ ಇಂಡಸ್ಟ್ರೀಸ್ ನಲ್ಲಿ ಮ್ಯಾನೇಜ್ಮೆಂಟ್ ಪಾಲುದಾರರಾಗಿರುವ ಪವನ್ ಪುತ್ತೂರು ಅವರನ್ನು ಪದ ಪ್ರದಾನ ಅಧಿಕಾರಿ ಡಾ.ಸುಧಾ ರಾವ್ ರವರು ರೋಟರಿ ಪಿನ್ ತೊಡಿಸಿ ಅಧಿಕೃತವಾಗಿ ಕ್ಲಬ್‌ಗೆ ಬರಮಾಡಿಕೊಂಡರು.

ಜೀವಿಕಾ ಕಜೆ ಪ್ರಾರ್ಥಿಸಿದರು. ಕ್ಲಬ್ ನಿರ್ಗಮಿತ ಅಧ್ಯಕ್ಷ ಕುಸುಮ್ ರಾಜ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅನೂಪ್ ಕೆ.ಜೆ ವಂದಿಸಿದರು. ಸ್ಥಾಪಕಾಧ್ಯಕ್ಷ ರತ್ನಾಕರ್ ರೈ, ಪೂರ್ವಾಧ್ಯಕ್ಷರಾದ ನರಸಿಂಹ ಪೈ, ಉಮೇಶ್ ನಾಯಕ್, ಚೇತನ್ ಪ್ರಕಾಶ್ ಕಜೆ, ಪ್ರಮೀಳಾ ರಾವ್ ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ನಿರ್ಗಮಿತ ಕಾರ್ಯದರ್ಶಿ ಅಭಿಶ್ ಕೆ ವರದಿ ಮಂಡಿಸಿದರು. 2024-25ರ ಸಾಲಿನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಚೇತನ್ ಪ್ರಕಾಶ್ ಕಜೆ, ಭರತ್ ನಾಯಕ್, ನರಸಿಂಹ ಪೈ, ಉಮೇಶ್ ನಾಯಕ್ ಪದ ಪ್ರದಾನ ಅಧಿಕಾರಿಯ, ಅತಿಥಿಗಳ, ಪದಾಧಿಕಾರಿಗಳ ಪರಿಚಯ ಮಾಡಿದರು. ಪೂರ್ವಾಧ್ಯಕ್ಷ ಭರತ್ ಪೈ ಹಾಗೂ ಶ್ರದ್ಧಾ ಸಚಿನ್ ನಾಯಕ್  ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ಕೇಶವ ಅಮೈ ಅವರಿಗೆ ದರ್ಬೆಯಲ್ಲಿ ಸ್ವಾಗತ, ಮೆರವಣಿಗೆ

ಫುತ್ತೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಸ್.ಆರ್.ಕೆ.…