ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ತಿರುಪತಿ ಕ್ಷೇತ್ರದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವಂತೆ ವಿಶ್ರಾಂತ ಪತ್ರಕರ್ತ, ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸುಧಾಕರ ರಾವ್ ಆರ್ಯಾಪು ಅವರು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ದಿನಂಪ್ರತಿ ಸಾವಿರಾರು ಭಕ್ತರು ಹಾಗೆ ವಿಶೇಷ ದಿನಗಳಲ್ಲಿ ಅತ್ಯಧಿಕ ಭಕ್ತರು ಬಂದು ಶ್ರೀ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ತೆರಳುತ್ತಾರೆ. ಇಲ್ಲಿಗೆ ನೆರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ಕೇರಳ,ತಮಿಳುನಾಡು, ಮಹಾರಾಷ್ಟ್ರ ಗೋವಾ ಹಾಗೂ ಉತ್ತರ ಭಾರತದ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಬರುತ್ತಿರುತ್ತಾರೆ. ಆದರೆ ಇಲ್ಲಿಯ ಜನಸಂದಣಿಗೆ ಪೂರಕವಾಗಿ ಶ್ರೀ ದೇವಳದಿಂದ ವಸತಿಗೃಹ ವ್ಯವಸ್ಥೆ, ಪಾರ್ಕಿಂಗ್, ವಿಶಾಲವಾದ ಭೋಜನಶಾಲಾ ವ್ಯವಸ್ಥೆ, ವಿಪರೀತ ಜನಸಂದಣಿ ಇದ್ದಾಗ ಸರತಿ ಸಾಲಿನ ವ್ಯವಸ್ಥೆ, ನೂಕು ನುಗ್ಗಲು ತಪ್ಪಿಸಲು ತಿರುಪತಿ ಮಾದರಿಯ ಪರ್ಯಾಯ ಆಧುನಿಕರಣ ವ್ಯವಸ್ಥೆ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕುಕ್ಕೆ ಕ್ಷೇತ್ರದ ಆಸು ಪಾಸಿನಲ್ಲಿ ಎಲ್ಲೆಂದರಲ್ಲಿ ಓಡಾಡುವ ಬೀದಿ ನಾಯಿಗಳು, ಜಾನುವಾರುಗಳಿಗೆ ಸೂಕ್ತ ವ್ಯವಸ್ಥೆ ಆಗಲೇಬೇಕು. ಇಕ್ಕಟಾದ ಪ್ರವೇಶ ದ್ವಾರಗಳಿಗೆ ವ್ಯವಸ್ಥೆ, ಕುಮಾರಧಾರ ದಿಂದ ರಥವೀದಿಯಾಗಿ ಕ್ಷೇತ್ರದ ವರೆಗೆ ಅಲ್ಲಲ್ಲಿ ವಿಶ್ರಾಂತಿ ಧಾಮಗಳು, ಸುಲಭ ಶೌಚಾಲಯಗಳ ವ್ಯವಸ್ಥೆ, ಕಾಶಿ ಕಟ್ಟೆಯಿಂದ ಆದಿ ಸುಬ್ರಹ್ಮಣ್ಯ ಯಾಗ ಶಾಲೆವರೆಗೆ ಶಾಶ್ವತ ಬೀದಿ ದೀಪದ ವ್ಯವಸ್ಥೆ ಆಗಬೇಕಾಗಿದೆ. ಸರ್ಪ ಸಂಸ್ಕಾರ ಸೇವಾರ್ತಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಯಾವ ಶಾಲೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ.
ಶ್ರೀ ದೇವಳದ ಆಸುಪಾಸಿನ ದೇವಳಕ್ಕೆ ಸೇರಿದ ಸ್ಥಳಗಳು ಅಥವಾ ಟ್ರಸ್ಟ್ ಗಳ ಜಾಗ ಕ್ಷೇತ್ರದ ಅಭಿವೃದ್ಧಿಗೆ ಅತಿ ಅಗತ್ಯವಿದ್ದು ಸರಕಾರದ ಸಂಪುಟ ಸಭೆಯಲ್ಲಿ ವಿಚಾರ ವಿನಿಮಯ ನಡೆಸಿ ಈ ಮಹಾಕ್ಷೇತ್ರದ ಪೂರ್ಣ ಅಭಿವೃದ್ಧಿಗಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಳ ಬೆಳಗಲು ಹಾಗೂ ಮುಂದಿನ 50 ವರ್ಷಗಳ ಗುರಿಯಾಗಿರಿಸಿ ಅಭಿವೃದ್ಧಿ ಪಡಿಸಲು ತಾವು ಮುತುವರ್ಜಿ ವಹಿಸಬೇಕಾಗಿ ಮನವಿ ಮಾಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅತಿ ದೂರದಿಂದ ಭಕ್ತರು ಬರುವ ಕಾರಣ ಸಾರಿಗೆ ವ್ಯವಸ್ಥೆಯ ಸುಧಾರಿಸಬೇಕಾಗಿದೆ ಕುಕ್ಕೆಯಲ್ಲಿ ಬಸ್ ಡಿಪೋ ಹಾಗೂ ಉತ್ತಮ ಸೌಲಭ್ಯಗಳನ್ನ ಒಳಗೊಂಡ ಬಸ್ ನಿಲ್ದಾಣ ಅಭಿವೃದ್ಧಿಯಾಗಬೇಕಾಗಿದೆ. ಶ್ರೀ ಕ್ಷೇತ್ರಕ್ಕೆ ವಿಶೇಷ ಭಕ್ತರು ಬರುವ ಸಂದರ್ಭ ಆರೋಗ್ಯ ಸಮಸ್ಯೆ ಆಗಾಗ ಸ್ಥಳೀಯವಾಗಿ ತುರ್ತು ಆರೋಗ್ಯ ಕೇಂದ್ರದ ಕೊರತೆ ಇದೆ ಅಲ್ಲದೆ 24*7 ಆರೋಗ್ಯ ಸೇವೆ ಆಗಬೇಕಾಗಿದೆ. ಸಾಧ್ಯವಿದ್ದಲ್ಲಿ ಕುಕ್ಕೆಶಿ ಸುಬ್ರಹ್ಮಣ್ಯ ದೇವಳದ ವತಿಯಿಂದಲೇ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಂತೆ ಭಕ್ತರಿಗೆ ಆರೋಗ್ಯ ಸೇವೆ ನೀಡುವಲ್ಲಿ ವಿಶೇಷ ಗಮನ ಹರಿಸಬೇಕಾಗಿ ಮನವಿಯಲ್ಲಿ ತಿಳಿಸಲಾಗಿದ್ದು ಪ್ರತಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಕುಕ್ಕೆ ಶ್ರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವಗೂ ನೀಡಿರುತ್ತಾರೆ.






















