ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಮತ್ತು ಶ್ರವಣರಂಗ ಪ್ರತಿಷ್ಠಾನ ಸವಣೂರು ಇದರ ಆಶ್ರಯದಲ್ಲಿ ಹಮ್ಮಿಕೊಂಡ ಅಧಿಕಮಾಸದ ವಿಶಿಷ್ಟ ಕಾರ್ಯಕ್ರಮ ಯಕ್ಷ ಪುರುಷೋತ್ತಮ ತಾಳಮದ್ದಳೆ ಸರಣಿಯ ಏಳನೇ ಹಾಗೂ ಕೊನೆಯ ಕೂಟ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಮಹಾವಿಷ್ಣು ದೇವರಿಗೆ ಫಲನ್ಯಾಸವಿಟ್ಟು ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ದೇವಳದ ಆಡಳಿತ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಪೈ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವರ್ಣಲತಾ ಬಾರ್ಯ ನಾರಾಯಣ ಗೌಡ, ಪ್ರಶಾಂತ್ ಪೈ, ವಿಜಯಲಕ್ಷ್ಮಿ ರೈ, ಶಿವರಾಮ್ ನಾಯ್ಕ, ವಿದ್ಯಾಪ್ರಭಾಕರ್, ಮನೋಹರ ಶೆಟ್ಟಿ, ಶೇಸಪ್ಪ ಸಾಲಿಯಾನ್, ಪ್ರವೀಣ್ ಮೂರುಗೋಳಿ, ಅರುಣ್ ಬಂಗೇರ ಕಲಾವಿದರನ್ನು ಗೌರವಿಸಿದರು. ಅರ್ಚಕ ಗುರುಪ್ರಸಾದ್ ನೂರಿತ್ತಾಯ ಸಹಕರಿಸಿದರು.
ಶ್ರೀ ದೇವಳದ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಟ್ರಸ್ಟಿ ಮನೋಹರ ಶೆಟ್ಟಿ ವಂದಿಸಿದರು. ಮುಗೇರು, ಶಾಂತಿಗೋಡು, ವೀರಮಂಗಲ, ಪುತ್ತೂರು, ಸವಣೂರು, ಕುರಿಯ ಶ್ರೀ ದೇವಳಗಳಲ್ಲಿ ನಡೆದ ಯಕ್ಷ ಪುರುಷೋತ್ತಮ ಸರಣಿಯ ಮೊದಲ ಆರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಕಲಾವಿದರನ್ನು ಶ್ರವಣ ರಂಗ ಸವಣೂರು ಇದರ ಸಂಚಾಲಕ ತಾರಾನಾಥ ಸವಣೂರು ಅಭಿನಂದಿಸಿದರು.
ಶ್ರೀ ಹರಿ ದರ್ಶನ – ತ್ರಿವಳಿ ತಾಳಮದ್ದಳೆಗಳ ಸಾಕ್ಷಾತ್ಕಾರ ಎಂಬ ವಿಶೇಷ ಪರಿಕಲ್ಪನೆಯಲ್ಲಿ, ಮೇದಿನೀ ನಿರ್ಮಾಣ , ತುಳುನಾಡ ಬಲಿಯೇಂದ್ರೆ ಮತ್ತು ಭಕ್ತ ಪ್ರಹ್ಲಾದ ಎಂಬ ಆಖ್ಯಾನಗಳ ಪ್ರಸ್ತುತಿಯೊಂದಿಗೆ ಸಂಪನ್ನಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೇನೇರಂಕಿ, ಸತೀಶ್ ಇರ್ದೆ, ಆನಂದ ಸವಣೂರು,ನಿತೀಶ್ ಎಂಕಣ್ಣ ಮೂಲೆ, ಹಾಗೂ ಚೆಂಡೆ ಮದ್ದಳೆಗಳಲ್ಲಿ ಶ್ರೀ ಹರಿ, ಅಚ್ಯುತ ಪಾಂಗಣ್ಣಾಯ, ತಾರಾನಾಥ ಸವಣೂರು ,ಸಮರ್ಥ ವಿಷ್ಣು ಕಡಂಬಳಿಕೆ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು.
ಭಕ್ತ ಪ್ರಹ್ಲಾದ ಪ್ರಸಂಗದ ಮುಮ್ಮೇಳದಲ್ಲಿ, ಗುಂಡ್ಯಡ್ಕ ಈಶ್ವರ ಭಟ್ (ಹಿರಣ್ಯಕಶ್ಯಪ), ಭಾಸ್ಕರ ಬಾರ್ಯ (ಕಯಾದು), ದಿವಾಕರ ಆಚಾರ್ಯ ಗೇರುಕಟ್ಟೆ (ಗುರುಗಳು), ದುಗ್ಗಪ್ಪ ನಡುಗಲ್ಲು (ನರಸಿಂಹ) ಶುಭಾ ಅಡಿಗ (ಪ್ರಹ್ಲಾದ) ಹಾಗೂ ಮೇದಿನೀ ನಿರ್ಮಾಣದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಮಹಾ ವಿಷ್ಣು) ಭಾರತಿ ರೈ ಅರಿಯಡ್ಕ (ಮಧು), ಶಾರದಾ ಅರಸ್ (ಕೈಟಭ), ಮತ್ತು ತುಳುನಾಡ ಬಲಿಯೇಂದ್ರೆ ಪ್ರಸಂಗದಲ್ಲಿ ಗುಡ್ಡಪ್ಪ ಬಲ್ಯ (ವಾಮನ) ತಾರಾನಾಥ ಸವಣೂರು ( ಬಲಿ) ಹರಿಣಾಕ್ಷಿ ಜೆ ಶೆಟ್ಟಿ (ಶುಕ್ರಾಚಾರ್ಯ), ಅಚ್ಯುತ ಪಾಂಗಣ್ಣಾಯ (ವಿಂದ್ಯಾವಳಿ) ಸಹಕರಿಸಿದರು.






















