ಕೇರಳಕ್ಕೆ ಇಂದು (ಜೂ.4) ಮುಂಗಾರು ಪ್ರವೇಶಿಸಿದೆ. ವಾಡಿಕೆಗಿಂತ ಮೂರು ದಿನ ತಡವಾಗಿ ಮುಂಗಾರು ಶುರುವಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಇನ್ನೆರೆಡು ದಿನದಲ್ಲಿ ಮಳೆಯ ಅರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಮುಂಗಾರು ಅಧಿಕೃತವಾಗಿ ಯಾವ ದಿನ ಪ್ರವೇಶಿಸಲಿದೆ ಎಂಬುದನ್ನು ಗುರುವಾರ ಮುಂಗಾರು ಗಾಳಿಯಯನ್ನು ಪರಿಶೀಲಿಸಿದ ಬಳಿಕ ಘೋಷಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಇದರ ನಡುವೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಮುಂದಿನ ಐದು ದಿನಗಳ ಕಾಲ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಗುಡುಗು, ಮಿಂಚು, ಬಿರುಗಾಳಿ ಹಾಗೂ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಎಚ್ಚರಿಕೆ ನೀಡಿದೆ. ನೈರುತ್ಯ ಮುಂಗಾರು ಅರಬ್ಬಿ ಸಮುದ್ರದ ನೈರುತ್ಯ ಮತ್ತು ಆಗ್ನೇಯ ಭಾಗಗಳು, ಲಕ್ಷದ್ವೀಪ, ಕೇರಳ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳು ಹಾಗೂ ಬಂಗಾಳ ಕೊಲ್ಲಿಯ ಹಲವು ಭಾಗಗಳತ್ತ ಮುಂದುವರಿಯಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಹವಾಮಾನ ಇಲಾಖೆ ಈ ಹಿಂದೆ ಮೇ 26 ಅಥವಾ 27ರ ವೇಳೆಗೆ ಮುಂಗಾರು ಕೇರಳ ಪ್ರವೇಶಿಸಬಹುದು ಎಂದು ಅಂದಾಜಿಸಿತ್ತು. ಹವಾಮಾನದ ಕಾರಣಗಳಿಂದಾಗಿ ತಡವಾಗಿದೆ.






















