ಪುತ್ತೂರು: ಮಹಿಳೆಗೆ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ಎ.ಎಸ್.ಸಿ.ಜೆ & ಜೆ.ಎಂ.ಎಫ್.ಸಿ. ನ್ಯಾಯಾಲಯ ಮೂವರು ಆರೋಪಿಗಳಿಗೆ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ.
2022ರ ಡಿಸೆಂಬರ್ 27ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾಗದ ತಕರಾರು ವಿಚಾರದಲ್ಲಿ ಘಟನೆ ನಡೆದಿತ್ತು. ಘಟನೆಯಲ್ಲಿ ಮಹಿಳೆಯ ಮೇಲೆ ಮೂವರು ಆರೋಪಿಗಳು ಹಲ್ಲೆ ನಡೆಸಿ ದೌರ್ಜನ್ಯವೆಸಗಿದ ಘಟನೆಗೆ ಸಂಬಂಧಿಸಿದಂತೆ ಅ. ಕ್ರ : 113/2022, ಕಲಂ : 447,504,506,323,354 r/w 34 IPC ರಂತೆ ಪ್ರಕರಣ ದಾಖಲಿಸಲಾಗಿತ್ತು.
ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಆರೋಪಿಗಳಾದ ಅರುಣ್ ಕುಮಾರ್, ವಿನಯ ಕುಮಾರ್ ಜಿ ಹಾಗೂ ಸುಂದರ ಪಿ ಎಂ ಎಂಬವರುಗಳ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ASCJ & JMFC ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರಾದ ದೇವರಾಜ್ ವೈ ಹೆಚ್ ರವರು ಆರೋಪಿಗಳ ವಿರುದ್ದ ಶಿಕ್ಷೆ ಪ್ರಕಟಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 323ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ, 1ನೇ ಆರೋಪಿ ಅರುಣ್ ಕುಮಾರ್ ಗೆ ಆರು ತಿಂಗಳ ಸರಳ ಕಾರಾಗೃಹ ಶಿಕ್ಷೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ, 1ನೇ ಆರೋಪಿ ಅರುಣ್ ಕುಮಾರ್ ಗೆ ಎರಡು ವರ್ಷಗಳ ಸರಳ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೆ, ಅವರು 10,000 ರೂಪಾಯಿಗಳ ದಂಡವನ್ನು ಪಾವತಿಸಬೇಕೆಂದು ಆದೇಶಿಸಿದೆ, ದಂಡವನ್ನು ಪಾವತಿಸಲು ವಿಫಲರಾದರೆ, ಅವರು ಹೆಚ್ಚುವರಿಯಾಗಿ 3 ತಿಂಗಳ ಸರಳ ಕಾರಾಗೃಹ ಶಿಕ್ಷೆ.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 506ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ, ಮೂವರೂ ಆರೋಪಿಗಳಿಗೆ ತಲಾ ಒಂದು ವರ್ಷದ ಸರಳ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ. ಜೊತೆಗೆ, ಪ್ರತಿಯೊಬ್ಬರೂ 5,000 ರೂಪಾಯಿಗಳ ದಂಡವನ್ನು ಪಾವತಿಸಬೇಕಾಗಿದ್ದು, ದಂಡವನ್ನು ಪಾವತಿಸಲು ವಿಫಲರಾದಲ್ಲಿ, ಅವರು ಹೆಚ್ಚುವರಿಯಾಗಿ 3 ತಿಂಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.
ಸಹಾಯಕ ಸರ್ಕಾರಿ ಅಭಿಯೋಜಕ ಚೇತನಾದೇವಿ ವಾದಮಂಡಿಸಿದ್ದಾರೆ.
























