ಪುತ್ತೂರು: ಮೈಸೂರು ನಾಡದಸರಾದಲ್ಲಿ ನಡೆಯಲಿರುವ ವಿಜಯ – ದಶಮಿ ಜೋಡುಕರೆ ಕಂಬಳಕ್ಕೆ ಪುತ್ತೂರಿನಿಂದ ಶನಿವಾರ ಬೆಳಿಗ್ಗೆ ಕೋಣಗಳು ಹೊರಟವು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮೈಸೂರಿನಲ್ಲಿ ಭಾನುವಾರ ಬೆಳಿಗ್ಗೆ ಆರಂಭವಾಗಲಿರುವ ಕಂಬಳಕ್ಕೆ ಪುತ್ತೂರಿನಿಂದ ಕೋಣಗಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆಗೆ ಚಾಲನೆ ನೀಡಿದ್ದೇವೆ. ಈಗಾಗಲೇ ಕೆಲವು ಕೋಣಗಳು ಮೈಸೂರು ತಲುಪಿವೆ. ಈಗ ತೆರಳುತ್ತಿರುವ ಕೋಣಗಳಿಗೆ ಮಡಿಕೇರಿಯಲ್ಲೂ ಕೋಣಗಳಿಗೆ ಸ್ವಾಗತ ನೀಡಲಿದ್ದಾರೆ. ಕರಾವಳಿಯವರು ಪದ್ಧತಿಯುಳ್ಳವರು ಎನ್ನುವ ನಂಬಿಕೆಯಿಂದ ಸಾಕಷ್ಟು ಮಂದಿ ಮಡಿಕೇರಿಯಲ್ಲಿ ಕಾಯುತ್ತಿದ್ದಾರೆ. ಅವರಿಟ್ಟ ನಂಬಿಕೆಗೆ ಚ್ಯುತಿ ಬಾರದಂತೆ ಸಾಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಬೆಳಿಗ್ಗೆ ಮೈಸೂರು ಐಜಿಪಿ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಆ ಸಂದರ್ಭ ಅವರು ಹೇಳುತ್ತಾರೆ, ಕೋಣಗಳನ್ನು ನೋಡಲು ಇಂದು ಬೆಳಿಗ್ಗೆಯೇ ಜನ ಸೇರುತ್ತಿದ್ದಾರೆ. ಅವರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ ಎಂದು. ಹಾಗಾಗಿ ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬರು ಜವಾಬ್ದಾರಿಯನ್ನು ಕೆಲಸ ನಿರ್ವಹಿಸಿ, ಕಂಬಳಕ್ಕೆ ಉತ್ತಮ ಮನ್ನಣೆ ಸಿಗುವಂತೆ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಮೈಸೂರು ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಬಳಕ್ಕೂ ಕೃಷಿಗೂ ಹತ್ತಿರದ ನಂಟು. ಇದು ಮೈಸೂರಿನಲ್ಲೂ ಈಗಾಗಲೇ ವೇದ್ಯವಾಗಿದೆ. ಕಂಬಳಕ್ಕೆ ಕುದಿ ಇಟ್ಟು, ಕೋಣಗಳು ಮೈಸೂರು ತಲುಪುತ್ತಿದ್ದಂತೆ ಮೈಸೂರಿನಲ್ಲಿ ಉತ್ತಮ ಮಳೆಯಾಗಿದೆ. ಮೊದಮೊದಲು ನೀರಿನ ಕೊರತೆಯ ಕಾರಣಕ್ಕೆ ಕಂಬಳವನ್ನು ವಿರೋಧಿಸುತ್ತಿದ್ದರು. ಕರಾವಳಿಯಲ್ಲಿ ಕಂಬಳ ನಡೆಯುತ್ತಿದ್ದು, ಹಾಗಾಗಿ ಸಮೃದ್ಧವಾಗಿದೆ. ಅದೇ ರೀತಿ ಮೈಸೂರಿನಲ್ಲೂ ಸಮೃದ್ಧ ಕೃಷಿ ಉಂಟಾಗುತ್ತದೆ. ಮಳೆ – ಬೆಳೆ ಚೆನ್ನಾಗಿ ಆಗುತ್ತದೆ ಎಂದರು.
ಸುಮಾರು 150 ಜೋಡಿ ಕೋಣಗಳು ತೆರಳಿವೆ. ವಿಶ್ವವಿಖ್ಯಾತ ಆಗಬೇಕು. ವೀರ ಕ್ರೀಡೆಯಾಗಿ ಬಿಂಬಿತವಾಗಿದೆ. ಶಾಸಕ ಅಶೋಕ್ ಕುಮಾರ್ ರೈ ಅವರ ವಿಶೇಷ ಮುತುವರ್ಜಿಯಿಂದಾಗಿ ಮೈಸೂರು ದಸರಾದಲ್ಲಿ ಕಂಬಳ. ಇದಕ್ಕೆ ಮುಖ್ಯಮಂತ್ರಿಗಳೂ ವಿಶೇಷ ಒತ್ತು ನೀಡಿದ್ದಾರೆ. ಜನ ಮೆಚ್ಚುಗೆಯ ಮಾತು ಆಡುವಂತಾಗಬೇಕು.
ಶಾಸಕ ಅಶೋಕ್ ಕುಮಾರ್ ರೈ, ಮೈಸೂರು ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮುರಳೀಧರ್ ರೈ ಮಠಂತಬೆಟ್ಟು ಮೊದಲಾದವರು ತೆಂಗಿನಕಾಯಿ ಒಡೆದರು.
















