ಕರಾವಳಿ

ಡಿ.12ರಂದು ಪುತ್ತೂರಿನಲ್ಲಿ ಈ ವರ್ಷದ ಕೊನೆಯ ರಾಷ್ಟ್ರೀಯ ಲೋಕ ಅದಾಲತ್ | 1,261 ಪ್ರಕರಣಗಳ ರಾಜಿ ಇತ್ಯರ್ಥಕ್ಕೆ ಗುರುತು; ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಡಿಸೆಂಬರ್ 12ರಂದು ಈ ವರ್ಷದ ಕೊನೆಯ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಪುತ್ತೂರು ನ್ಯಾಯಾಲಯ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಮೂರು ಲೋಕ ಅದಾಲತ್‌ಗಳಲ್ಲಿ ಒಟ್ಟು 1,696 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, ಈ ಬಾರಿಯೂ ಹೆಚ್ಚಿನ ಪ್ರಕರಣಗಳನ್ನು ಪರಿಹರಿಸುವ ಗುರಿಯನ್ನು ನ್ಯಾಯಾಂಗ ಇಲಾಖೆ ಹೊಂದಿದೆ.

ಪುತ್ತೂರಿನ ಆನೆಮಜಲಿನಲ್ಲಿರುವ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು, ಲೋಕ ಅದಾಲತ್‌ನ ಸಿದ್ಧತೆ ಹಾಗೂ ಪ್ರಕರಣಗಳ ಇತ್ಯರ್ಥದ ಗುರಿಯ ಕುರಿತು ಮಾಹಿತಿ ನೀಡಿದರು.

ಕಳೆದ ಲೋಕ ಅದಾಲತ್ ಸಂದರ್ಭದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ಸುಮಾರು 9,200 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 897 ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದ್ದು, 515 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದವು. ಪ್ರಸ್ತುತ ನ್ಯಾಯಾಲಯದಲ್ಲಿ ಸುಮಾರು 8,850 ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳಲ್ಲಿ 1,261 ಪ್ರಕರಣಗಳನ್ನು ಈ ಬಾರಿಯ ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಲು ಗುರುತಿಸಲಾಗಿದೆ. ಈಗಾಗಲೇ ಸುಮಾರು 272 ಪ್ರಕರಣಗಳನ್ನು ಅದಾಲತ್‌ಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ವಾಹನ ಅಪಘಾತ ಪರಿಹಾರ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ

ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶೆ ಹಾಗೂ ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಕೃತಿ ಕಲ್ಯಾಣಪುರ ಮಾತನಾಡಿ, ವಾಹನ ಅಪಘಾತಗಳಿಂದ ಸಂಭವಿಸುವ ಸಾವು-ನೋವುಗಳಿಗೆ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ರಾಜಿ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದರು.

ಪುತ್ತೂರು ನ್ಯಾಯಾಲಯದಲ್ಲಿ ಇಂತಹ ಸುಮಾರು ಒಂದು ಸಾವಿರ ಪ್ರಕರಣಗಳು ಬಾಕಿ ಉಳಿದಿವೆ. ಈ ಬಾರಿ ವಿಮಾ ಕಂಪೆನಿಗಳ ಪ್ರತಿನಿಧಿಗಳನ್ನು ನ್ಯಾಯಾಲಯಕ್ಕೆ ಆಹ್ವಾನಿಸಿ, ಪರಿಹಾರದ ಮೊತ್ತದ ಕುರಿತು ಚರ್ಚೆ ನಡೆಸುವ ಮೂಲಕ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಶೇಷ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ದಂಪತಿಗಳ ನಡುವಿನ ವೈಮನಸ್ಸಿನಿಂದ ದಾಖಲಾಗಿರುವ ವಿಚ್ಛೇದನ ಪ್ರಕರಣಗಳನ್ನು ಸಾಮಾನ್ಯವಾಗಿ ಲೋಕ ಅದಾಲತ್‌ನಲ್ಲಿ ಕೈಗೆತ್ತಿಕೊಳ್ಳುವುದಿಲ್ಲ. ಆದರೆ, ದಂಪತಿಗಳು ಪುನಃ ಒಂದಾಗಿ ಜೀವನ ನಡೆಸಲು ಸಿದ್ಧರಿದ್ದರೆ ಅಂತಹ ಪ್ರಕರಣಗಳನ್ನು ಪರಿಗಣಿಸಿ ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗುತ್ತದೆ. ಹಿಂದಿನ ಲೋಕ ಅದಾಲತ್‌ನಲ್ಲಿ ಈ ರೀತಿಯ ಮೂರು ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಮಾಹಿತಿ ನೀಡಿದರು.

ಸಿವಿಲ್ ವ್ಯಾಜ್ಯಗಳು, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ, ವಾಹನ ಅಪಘಾತ ಪರಿಹಾರ, ಕಾರ್ಮಿಕ ವ್ಯಾಜ್ಯಗಳು ಹಾಗೂ ಕೌಟುಂಬಿಕ ಪ್ರಕರಣಗಳನ್ನೂ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಮೇಲ್ಮನವಿ ಹಂತದ ಪ್ರಕರಣಗಳಿಗೂ ಸಂಧಾನದ ಅವಕಾಶ

7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸುಮಂಗಲ ಚಕಲಬ್ಬಿ ಮಾತನಾಡಿ, ಕೆಳಹಂತದ ನ್ಯಾಯಾಲಯದಲ್ಲಿ ಇತ್ಯರ್ಥವಾಗದ ಪ್ರಕರಣಗಳನ್ನು ಮೇಲ್ಮನವಿ ಹಂತದಲ್ಲಿಯೂ ಲೋಕ ಅದಾಲತ್ ಮೂಲಕ ರಾಜಿ ಮಾಡಿಕೊಳ್ಳಬಹುದು. ಎರಡೂ ಕಡೆಯ ಕಕ್ಷಿದಾರರು ಒಪ್ಪಿಗೆ ಸೂಚಿಸಿದರೆ ಅಂತಹ ಪ್ರಕರಣಗಳನ್ನು ಅದಾಲತ್‌ಗೆ ತಂದು ಪರಿಹರಿಸಿಕೊಳ್ಳಲು ಅವಕಾಶವಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ದೇವರಾಜ್ ವೈ.ಎಚ್. ಮಾತನಾಡಿ, ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳುವುದರಿಂದ ಎರಡೂ ಕಡೆಯವರಿಗೆ ಸಮಯ ಮತ್ತು ಹಣದ ಉಳಿತಾಯವಾಗಲಿದೆ. ದೀರ್ಘಕಾಲದ ನ್ಯಾಯಾಲಯದ ವಿಚಾರಣೆಗಳಿಂದ ಮುಕ್ತಿ ದೊರೆಯುವುದರೊಂದಿಗೆ ಕಕ್ಷಿದಾರರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಪಾವತಿಸಿದ ಶುಲ್ಕವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪ್ರಕರಣ ಇತ್ಯರ್ಥಗೊಂಡ ಬಳಿಕ ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ ಎಂದು ತಿಳಿಸಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಮ್ಯಾ ಆರ್. ಅವರು ಈ ಹಿಂದೆ ಮಾರ್ಚ್ 14, ಜುಲೈ 11 ಹಾಗೂ ಸೆಪ್ಟೆಂಬರ್ 19ರಂದು ನಡೆದ ಲೋಕ ಅದಾಲತ್‌ಗಳಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ವಿವರ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ರಾಜಿ ಮೂಲಕ ಇತ್ಯರ್ಥಪಡಿಸಲು ಸಾಧ್ಯವಿರುವ ಪ್ರಕರಣಗಳನ್ನು ಗುರುತಿಸಿ, ಕಕ್ಷಿದಾರರೊಂದಿಗೆ ಸಮಾಲೋಚನೆ ನಡೆಸುವ ಕಾರ್ಯದಲ್ಲಿ ವಕೀಲರು ಸಹಕರಿಸುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶ ವೈ. ಹರಿಹರನ್ ಉಪಸ್ಥಿತರಿದ್ದರು.

ಟ್ರಾಫಿಕ್ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ

ರಾಷ್ಟ್ರೀಯ ಲೋಕ ಅದಾಲತ್‌ನ ಅಂಗವಾಗಿ ವಾಹನ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸೆಪ್ಟೆಂಬರ್ 21ರಿಂದ ಜಾರಿಯಲ್ಲಿರುವ ಈ ಸೌಲಭ್ಯ ಡಿಸೆಂಬರ್ 11ರವರೆಗೆ ಅನ್ವಯವಾಗಲಿದೆ.

ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆಯ ಚಲನ್‌ಗಳಿಗೆ ಈ ರಿಯಾಯಿತಿ ಅನ್ವಯವಾಗಲಿದ್ದು, ವಾಹನ ಸವಾರರು ನಿಗದಿತ ಅವಧಿಯೊಳಗೆ ಬಾಕಿ ದಂಡ ಪಾವತಿಸಿ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣಪುರ ಮನವಿ ಮಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ವಳಾಲು ಟೋಲ್ ಸಂಗ್ರಹಕ್ಕೆ ತೀವ್ರ ವಿರೋಧ: ಗೇಟ್‌ ತೆರೆದು ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಿದ ಪ್ರತಿಭಟನಾಕಾರರು!!

ಉಪ್ಪಿನಂಗಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ವಳಾಲು ಪಡ್ಪು ಸಮೀಪದ ಟೋಲ್…