ಪುತ್ತೂರು: ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕ ಕಲೆ ಹುಲಿಕುಣಿತ, ಕಲಾತ್ಮಕ ಆಟವಾಗಿ ಮಾತ್ರವಲ್ಲ ಭಕ್ತಿಯ ಸಂಗಮವಾಗಿ ನವರಾತ್ರಿ ಸಂದರ್ಭ ಕಾಣಸಿಗುತ್ತದೆ. ಸನಾತನ ಧರ್ಮದಲ್ಲಿ ವಿಶೇಷ ಮಹತ್ವ ಪಡೆದಿರುವ ಹುಲಿಕುಣಿತದಂತಹ ಕಲಾತ್ಮಕ ಆಟಗಳು ಸಮಾಜವನ್ನು ಒಗ್ಗೂಡಿಸುವಲ್ಲಿಯೂ ಮಹತ್ವದ ಪಾತ್ರ ವಹಿಸುತ್ತವೆ ಎಂದು ಎಡನೀರು ಶ್ರೀ ಸಚ್ಚಿದಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಶನಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪುತ್ತೂರು ವಿಜಯ ಸಾಮ್ರಾಟ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪುತ್ತೂರುದ ಪಿಲಿಗೊಬ್ಬು 2026 ಸೀಸನ್ 4 ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯಕ್ಷಗಾನ, ಕಂಬಳ, ಹುಲಿಕುಣಿತಗಳ ಮೂಲಕ ತುಳುನಾಡು ಜೀವಂತವಾಗಿದೆ. ಹುಲಿಕುಣಿತ ಗ್ರಾಮೀಣ ಕಲೆಯಾಗಿ ಮಾತ್ರ ನಮ್ಮ ಮುಂದಿಲ್ಲ. ನವರಾತ್ರಿ ಸಂದರ್ಭ ಕಲೆ, ಭಕ್ತಿಯ ಸಂಗಮವಾಗಿ ಗುರುತಿಸಿಕೊಳ್ಳುತ್ತದೆ. ಇಂತಹ ಆಟಗಳು ಸಮಾಜಕ್ಕೆ ಸಂದೇಶವನ್ನು ನೀಡುತ್ತವೆ. ಆ ಸಂದೇಶವನ್ನು ಇಂತಹ ಕಾರ್ಯಕ್ರಮಗಳು ಸಮಾಜದ ಪ್ರತಿಯೋರ್ವರಿಗೂ ರವಾನಿಸುವ ಕೆಲಸವನ್ನು ಮಾಡುತ್ತವೆ ಎಂದರು.
ಸನಾತನ ಧರ್ಮದಲ್ಲಿ ನವರಾತ್ರಿಗೆ ವಿಶೇಷ ಮಹತ್ವ ಇದೆ. ಸನಾತನ ಧರ್ಮದಲ್ಲಿ ಪ್ರಾಣಿ, ಪಕ್ಷಿ, ವೃಕ್ಷಿ, ಪ್ರಕೃತಿಯಲ್ಲಿ ದೇವರನ್ನು ಕಾಣಲಾಗುತ್ತದೆ. ಹೀಗೆ ಪ್ರತಿಯೊಂದು ಆಚರಣೆಗಳು ಸಮಾಜಕ್ಕೆ ಸಂದೇಶವನ್ನು ನೀಡುತ್ತವೆ. ಇದನ್ನು ವೇದಿಕೆಯಲ್ಲಿ ಪ್ರದರ್ಶನಗೊಂಡಾಗ, ಸಮಾಜದ ಭೇದ – ಭಾವಗಳು ದೂರವಾಗಿ ಸಮಾಜವನ್ನು ಒಗ್ಗಟ್ಟಾಗಿ ಮುನ್ನಡೆಸುತ್ತವೆ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಎಲ್ಲಾ ಗ್ರಾಮೀಣ ಕ್ರೀಡೆಗಳಿಗೂ ಧಾರ್ಮಿಕತೆಯ ಆಸರೆ ಇದೆ. ಹುಲಿಕುಣಿತಕ್ಕೆ ನವರಾತ್ರಿ ಹಬ್ಬದ ಬೆಸುಗೆ ಇದೆ. ಹುಲಿಕುಣಿತ ಕ್ರೀಡೆ ಅಲ್ಲದಿದ್ದರೂ, ಸಾಂಸ್ಕೃತಿಕ, ಧಾರ್ಮಿಕ, ಜಾನಪದೀಯ ಹೀಗೆ ಎಲ್ಲಾ ಆಯಾಮಗಳಲ್ಲೂ ಗುರುತಿಸಿಕೊಂಡಿದೆ ಎಂದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಒಂಭತ್ತು ದಿನಗಳ ಕಾಲ ತಾಯಿ ದುರ್ಗೆಯನ್ನು ಸ್ತುತಿಸುವುದೇ ನವರಾತ್ರಿ. ಇದರ ಜೊತೆಗೆ ಹುಲಿಕುಣಿತ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಈ ಹುಲಿಕುಣಿತದಿಂದ ದೇವಿ ಸಂತುಷ್ಟಳಾಗುತ್ತಾಳೆ ಎನ್ನುವ ನಂಬಿಕೆ ಇದೆ. ಇದೇ ಉದ್ದೇಶದಿಂದ ಹಮ್ಮಿಕೊಂಡಿರುವ ಪುತ್ತೂರುದ ಪಿಲಿಗೊಬ್ಬು ಸೀಸನ್ 4 ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.
ಆದರ್ಶ ಆಸ್ಪತ್ರೆಯ ವೈದ್ಯ ಡಾ. ಎಂ.ಕೆ. ಪ್ರಸಾದ್ ಭಂಡಾರಿ, ನಿವೃತ್ತ ಐಎಎಸ್ ಅಧಿಕಾರಿ ಶ್ಯಾಮ್ ಭಟ್, ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ್ ಶೆಟ್ಟಿ ಉಜಿರೆಮಾರು, ಮಾರಪ್ಪ ಶೆಟ್ಟಿ, ವಿನಯ ಸುವರ್ಣ, ಸುದೇಶ್ ಚಿಕ್ಕಪುತ್ತೂರು, ಸುಭಾಶ್ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಸಮಿತಿಯ ಪ್ರಮುಖರಾದ ಉಮೇಶ್ ನಾಯಕ್ ಪುತ್ತೂರು, ರತನ್ ರೈ ಕುಂಬ್ರ, ಶರತ್ ಆಳ್ವ ಕೂರೇಲು ಮೊದಲಾದವರು ಉಪಸ್ಥಿತರಿದ್ದರು.
ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಆರಂಭ. ಜೀವಿಕಾ ಕಜೆ ಪ್ರಾರ್ಥಿಸಿದರು. ವಿಜಯ ಸಾಮ್ರಾಟ್ ಸಂಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ ಸ್ವಾಗತಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.























