ಕರಾವಳಿ

ಲೈನ್’ಮ್ಯಾನ್ ರವಿ ಗೌಡ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ, ನ್ಯಾಯಯುತ ಪರಿಹಾರಕ್ಕೆ ಮುಖ್ಯಮಂತ್ರಿಗೆ ಮನವಿ ನೀಡಿದ ಒಕ್ಕಲಿಗ ಗೌಡ ಸಮುದಾಯ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕೆದಿಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶದಿಂದ ಅಕಾಲಿಕವಾಗಿ ಮೃತಪಟ್ಟ ಕೆಮ್ಮಾಯಿ ನಿವಾಸಿ, ಲೈನ್‌ಮ್ಯಾನ್ ರವಿ ಗೌಡ ಅವರ ಕುಟುಂಬಕ್ಕೆ ನ್ಯಾಯಯುತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸುವಂತೆ ಆಗ್ರಹಿಸಿ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿತು.

ಕರ್ತವ್ಯದ ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದ ರವಿ ಗೌಡ ಅವರು ಗ್ರಾಮಸ್ಥರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ನಿಧನವು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಗ್ರಾಮ ಹಾಗೂ ಒಕ್ಕಲಿಗ ಗೌಡ ಸಮುದಾಯಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.

ಈ ಹಿಂದೆ ಮೃತರ ನಿವಾಸಕ್ಕೆ ಭೇಟಿ ನೀಡಿದ್ದ ಒಕ್ಕಲಿಗ ಗೌಡ ಸಮುದಾಯದ ಪ್ರಮುಖರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಸಮುದಾಯದ ವತಿಯಿಂದ ಚೆಕ್ ಮೂಲಕ ಆರ್ಥಿಕ ನೆರವನ್ನು ಹಸ್ತಾಂತರಿಸಿದ್ದರು.

ಇದೀಗ ಮೃತ ರವಿ ಗೌಡ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡುವಂತೆ ಹಾಗೂ ನ್ಯಾಯಯುತ ಪರಿಹಾರ, ಅಗತ್ಯ ನೆರವು ಒದಗಿಸಬೇಕು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಅಧ್ಯಕ್ಷ ಸುಂದರ ಗೌಡ ನಡುಬೈಲು, ಉಪಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಪಾಣತ್ತಿಲ, ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಕೋಶಾಧಿಕಾರಿ ಶ್ರೀಧರ ಕಣಜಾಲು, ಕಾರ್ಯದರ್ಶಿಗಳಾದ ಯತೀಶ್ ದೇವ ಸಂಟ್ಯಾರು ಮತ್ತು ಮೋಹನ್ ಗೌಡ ಬಾಳುಗೋಡು ಉಪಸ್ಥಿತರಿದ್ದರು.

ನೊಂದ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸವಾಗಲಿ:

ಮೃತ ರವಿ ಗೌಡ ಅವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ದೊರೆಯಲಿ ಮತ್ತು ಕುಟುಂಬವು ಈ ಕಷ್ಟದ ಪರಿಸ್ಥಿತಿಯಿಂದ ಹೊರಬರಲು ಶಕ್ತಿ ದೊರೆಯಲಿ ಎನ್ನುವುದೇ ನಮ್ಮ ಆಶಯ. ಸಮಾಜದ ಸಂಕಷ್ಟದ ಸಂದರ್ಭದಲ್ಲಿ ನೊಂದ ಕುಟುಂಬದ ಬೆನ್ನಿಗೆ ನಿಂತು ಸಾಂತ್ವನ ಹಾಗೂ ಆರ್ಥಿಕ ನೆರವು ನೀಡುವ ಮೂಲಕ ಒಕ್ಕಲಿಗ ಗೌಡ ಸಮುದಾಯ ತನ್ನ ಸಾಮಾಜಿಕ ಬದ್ಧತೆ ಮತ್ತು ಮಾನವೀಯ ಕಾಳಜಿಯನ್ನು ಮೆರೆಯುತ್ತಿದೆ.

ಸುಂದರ ಗೌಡ ನಡುಬೈಲು, ಅಧ್ಯಕ್ಷ, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts