ಪುತ್ತೂರು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಘ-ಸಂಸ್ಥೆಗಳ ಸಭೆ-ಸಮಾರಂಭಗಳ ಆಮಂತ್ರಣ ಪತ್ರಿಕೆ, ವೇದಿಕೆಯ ಹಿಂಭಾಗದ ಫಲಕ ಹಾಗೂ ಶಾಶ್ವತ ಯೋಜನಾ ಫಲಕಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಕಡ್ಡಾಯಗೊಳಿಸುವಂತೆ ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿನೆಲೆ ಅವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಈ ಕುರಿತು ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 3,745ಕ್ಕೂ ಅಧಿಕ ಕ್ಲಬ್‌ಗಳು, 1.28 ಲಕ್ಷಕ್ಕೂ ಹೆಚ್ಚು ಸದಸ್ಯರು
ಕರ್ನಾಟಕದಲ್ಲಿ ರೋಟರಿ, ಲಯನ್ಸ್, ಜೆಸಿಐ, ಬಿಎನ್‌ಐ, ಇನ್ನರ್ ವೀಲ್, ಟೋಸ್ಟ್‌ಮಾಸ್ಟರ್ಸ್, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸೇರಿದಂತೆ ಹಲವು ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದ ಸೇವಾ ಮತ್ತು ವೃತ್ತಿಪರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಮನವಿಯಲ್ಲಿ ಉಲ್ಲೇಖಿಸಿರುವ ಅಂಕಿ-ಅಂಶಗಳ ಪ್ರಕಾರ, ರಾಜ್ಯಾದ್ಯಂತ ಇಂತಹ ಸಂಸ್ಥೆಗಳ 3,745ಕ್ಕೂ ಹೆಚ್ಚು ಸಕ್ರಿಯ ಕ್ಲಬ್‌ಗಳು ಹಾಗೂ 1.28 ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ.
ಈ ಸಂಸ್ಥೆಗಳು ಸ್ಥಳೀಯ ಭಾಷೆಗಳ ಬಳಕೆಗೆ ಅವಕಾಶ ನೀಡಿದ್ದರೂ, ಕರ್ನಾಟಕದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು, ವೇದಿಕೆಯ ಹಿಂಭಾಗದ ಬ್ಯಾನರ್‌ಗಳು ಹಾಗೂ ಪ್ರಕಟಣೆಗಳನ್ನು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲಿ ಪ್ರಕಟಿಸಲಾಗುತ್ತಿದೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.ಕನ್ನಡದ ಬಳಕೆಗೆ ಆದ್ಯತೆ ನೀಡಲು ಒತ್ತಾಯ
ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಹಾಗೂ ಸ್ಥಳೀಯ ಸಾರ್ವಜನಿಕರಿಗಾಗಿ ಆಯೋಜಿಸುವ ಕಾರ್ಯಕ್ರಮಗಳಲ್ಲೂ ಆಂಗ್ಲ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಕಳವಳಕಾರಿ ಸಂಗತಿ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇಂತಹ ಪದ್ಧತಿಗಳು ಮುಂದುವರಿದರೆ ಯುವಜನತೆಯಲ್ಲೂ ಕನ್ನಡದ ಬಳಕೆ ಕುಂಠಿತವಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಕನ್ನಡದ ಹಿತರಕ್ಷಣೆಗಾಗಿ ಕಾರ್ಯನಿರ್ವಹಿಸುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಲಾಗಿದೆ.ಆಮಂತ್ರಣ ಪತ್ರಿಕೆ, ವೇದಿಕೆ ಬ್ಯಾನರ್‌ಗಳಲ್ಲೂ ಕನ್ನಡ ಕಡ್ಡಾಯವಾಗಲಿ
ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಮುದ್ರಿಸುವಂತೆ ನಿಯಮ ರೂಪಿಸಬೇಕು. ಆಂಗ್ಲ ಭಾಷೆಯಲ್ಲೂ ಆಮಂತ್ರಣ ಪತ್ರಿಕೆ ಮುದ್ರಿಸುವ ಅನಿವಾರ್ಯತೆ ಇದ್ದಲ್ಲಿ, ಅದರ ಜೊತೆಗೆ ಸಮಾನ ಪ್ರಾಮುಖ್ಯತೆಯ ಕನ್ನಡ ಆಮಂತ್ರಣ ಪತ್ರಿಕೆಯನ್ನು ಒದಗಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಅದೇ ರೀತಿ, ಸಭೆ-ಸಮಾರಂಭಗಳ ವೇದಿಕೆಯ ಹಿಂಭಾಗದ ಬ್ಯಾನರ್‌ಗಳು ಹಾಗೂ ಸಂಸ್ಥೆಗಳು ಸ್ಥಾಪಿಸುವ ಶಾಶ್ವತ ಯೋಜನಾ ಫಲಕಗಳಲ್ಲಿಯೂ ಕನ್ನಡ ಭಾಷೆಯ ಬಳಕೆಯನ್ನು ಕಡ್ಡಾಯಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಯಿಸಿದೆ.ಈ ಕುರಿತು ಸರ್ಕಾರಕ್ಕೆ ಪ್ರಬಲ ಶಿಫಾರಸು ಮಾಡಿ, ರಾಜ್ಯಾದ್ಯಂತ ಸೂಕ್ತ ನಿಯಮ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಲ್ಲಿ ಪುತ್ತೂರು ಉಮೇಶ್ ನಾಯಕ್ ಮನವಿ ಮಾಡಿದ್ದಾರೆ.






















