ಸ್ಥಳೀಯ

ಭಾರೀ ಗಾಳಿ ಮಳೆಗೆ ಕಾವು ಬಳಿ ಅವಾಂತರ; ಮಾಣಿ–ಮೈಸೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

gl

ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಯ ವೇಳೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಉರುಳಿಬಿದ್ದಿವೆ. ಪರಿಣಾಮ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ಅಡಚಣೆ ಉಂಟಾಗಿದೆ.

ಇದಲ್ಲದೆ, ಮಡ್ಯಂಗಳ, ಮದ್ದ ಹಾಗೂ ಪೆರಿಗೇರಿ ರಸ್ತೆಗಳಲ್ಲಿಯೂ ಮರಗಳು ಧರೆಗುರುಳಿದ್ದು, ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿವೆ. ಇದರಿಂದ ಈ ಭಾಗದ ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರಗಳು, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಣ ಮಾಡುತ್ತಿದ್ದಾರೆ.

ಪರ್ಯಾಯ ಮಾರ್ಗ ಬಳಸಲು ಸೂಚನೆ

ತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದೆ. ಹೀಗಾಗಿ ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪುತ್ತೂರಿನಿಂದ ಬೆಳ್ಳಾರೆ ಮಾರ್ಗವಾಗಿ ಸುಳ್ಯ ತಲುಪಿ, ಅಲ್ಲಿಂದ ಮೈಸೂರು ಕಡೆಗೆ ಪ್ರಯಾಣಿಸುವಂತೆ ಸೂಚಿಸಲಾಗಿದೆ.

ಗಾಳಿ ಮಳೆಯ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 138