ಆರೋಗ್ಯ

ಬಿಸ್ಲೆರಿ ನೀರಿನಲ್ಲಿ ರಾಸಾಯನಿಕ ಪತ್ತೆ – ಬಿಸ್ಲೆರಿ ಸಹಿತ ಇತರ ನಾಲ್ಕು ಆಹಾರ ಕಂಪೆನಿ ವಿರುದ್ಧ ಕಾನೂನು ಕ್ರಮ!!

ಈ ಸುದ್ದಿಯನ್ನು ಶೇರ್ ಮಾಡಿ

ದೇಶದ ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್‌ಗಳಲ್ಲಿ ಒಂದಾದ ಬಿಸ್ಲೆರಿ ಇದೀಗ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆರೋಪ ಎದುರಿಸುತ್ತಿದೆ. ಕಂಪನಿಯ ಆವರಣದಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ ರಾಸಾಯನಿಕ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅನುಮತಿ ನೀಡಿದೆ.

ಈ ಪ್ರಕರಣದಲ್ಲಿ ನಡೆದ ಮೊದಲ ಹಂತದ ಪ್ರಯೋಗಾಲಯ ಪರೀಕ್ಷೆಯಲ್ಲಿ ನೀರಿನ ಮಾದರಿಯಲ್ಲಿ ಅನುಮತಿಸಲಾದ ಪ್ರಮಾಣಕ್ಕಿಂತ ಹೆಚ್ಚಿನ ಬ್ರೋಮೇಟ್ ಅಂಶ ಪತ್ತೆಯಾಗಿತ್ತು. ಇದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅನ್ವಯ ಮಾದರಿಯನ್ನು ಅಸುರಕ್ಷಿತ ಎಂದು ಪರಿಗಣಿಸಲಾಗಿತ್ತು.

ಆದರೆ, ಪ್ರಾಥಮಿಕ ಪರೀಕ್ಷೆಯ ಫಲಿತಾಂಶವನ್ನು ಒಪ್ಪದ ಕಂಪನಿ ಮರುಪರಿಶೀಲನೆಗೆ ಮನವಿ ಸಲ್ಲಿಸಿತ್ತು. ಅದರಂತೆ ಮಾದರಿಯನ್ನು ರೆಫರಲ್ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಯಲ್ಲಿಯೂ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAH) ಪತ್ತೆಯಾಗಿದ್ದು, ನೀರಿನ ಮಾದರಿಯನ್ನು ಎರಡನೇ ಬಾರಿಯೂ ಅಸುರಕ್ಷಿತ ಎಂದು ಘೋಷಿಸಲಾಗಿದೆ.

ಆರೋಗ್ಯದ ಮೇಲೆ ಪರಿಣಾಮ ಬೀರುವ ರಾಸಾಯನಿಕಗಳು

ನೀರಿನ ಮಾದರಿಯಲ್ಲಿ ಪತ್ತೆಯಾಗಿರುವ ಬ್ರೋಮೇಟ್, ಓಝೋನ್ ಬಳಸಿ ನೀರನ್ನು ಶುದ್ಧೀಕರಿಸುವ ಪ್ರಕ್ರಿಯೆಯಲ್ಲಿ ರೂಪುಗೊಳ್ಳಬಹುದಾದ ರಾಸಾಯನಿಕ ಸಂಯುಕ್ತವಾಗಿದೆ. ಇದು ಸಂಭವನೀಯ ಕ್ಯಾನ್ಸರ್ ಕಾರಕ ಅಂಶವೆಂದು ಪರಿಗಣಿಸಲಾಗಿದೆ. ಅದೇ ರೀತಿ, PAH ಗುಂಪಿಗೆ ಸೇರಿದ ಕೆಲವು ರಾಸಾಯನಿಕಗಳು ಕ್ಯಾನ್ಸರ್ ಅಪಾಯದೊಂದಿಗೆ ಸಂಬಂಧ ಹೊಂದಿವೆ. ಇವು ನಿಗದಿತ ಸುರಕ್ಷತಾ ಮಿತಿಯನ್ನು ಮೀರಿದರೆ ಮಾನವನ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿದೆ.

ಎರಡೂ ಪ್ರಯೋಗಾಲಯಗಳ ಪರೀಕ್ಷಾ ವರದಿಗಳನ್ನು ಆಧರಿಸಿ ಬಿಸ್ಲೆರಿ ವಿರುದ್ಧ ಕಾನೂನು ಕ್ರಮಕ್ಕೆ ಪ್ರಾಧಿಕಾರ ಹಸಿರು ನಿಶಾನೆ ತೋರಿಸಿದೆ. ಆದರೆ, ಮಾದರಿಯಲ್ಲಿ ಪತ್ತೆಯಾದ ರಾಸಾಯನಿಕಗಳ ನಿಖರ ಪ್ರಮಾಣ, ಮಾದರಿ ಸಂಗ್ರಹಿಸಿದ ಉತ್ಪಾದನಾ ಘಟಕ ಹಾಗೂ ಸಂಬಂಧಪಟ್ಟ ಉತ್ಪನ್ನದ ಬ್ಯಾಚ್ ವಿವರಗಳನ್ನು FSSAI ಇನ್ನೂ ಬಹಿರಂಗಪಡಿಸಿಲ್ಲ.

ಇತರ ನಾಲ್ಕು ಕಂಪನಿಗಳಿಗೂ ಕಾನೂನು ಸಂಕಷ್ಟ

ಬಿಸ್ಲೆರಿ ಮಾತ್ರವಲ್ಲದೆ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಡಿ ಇನ್ನೂ ನಾಲ್ಕು ಕಂಪನಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು FSSAI ಅನುಮೋದನೆ ನೀಡಿದೆ.

  • ವಸಂತ್ ಮಸಾಲಾ: ಮೆಣಸಿನ ಪುಡಿಯಲ್ಲಿ ಅನುಮತಿತ ಮಿತಿಗಿಂತ ಹೆಚ್ಚಿನ ಡೈಫಿನೊಕೊನಜೋಲ್ ಸೇರಿದಂತೆ ಕೀಟನಾಶಕಗಳ ಅವಶೇಷ ಪತ್ತೆ.
  • ಟಿಟ್-ಬಿಟ್ ಫುಡ್ಸ್ ಇಂಡಿಯಾ: ಪ್ಯಾಕೆಟ್ ಮೆಣಸಿನ ಪುಡಿಯಲ್ಲಿ ಕೀಟನಾಶಕಗಳ ಹೆಚ್ಚುವರಿ ಅಂಶ ಹಾಗೂ ಅರಿಶಿನ ಪುಡಿಯಲ್ಲಿ ಮಿತಿಗಿಂತ ಹೆಚ್ಚಿನ ಟಿನ್ ಪತ್ತೆ.
  • ಮಿಮಾನ್ಸಾ ಇಂಡಸ್ಟ್ರೀಸ್: ವಾಲ್‌ನಟ್ ಕಾಳುಗಳಲ್ಲಿ ಹೆಚ್ಚಿನ ತೇವಾಂಶ, ಹಾನಿಗೊಳಗಾದ ಕಾಳುಗಳು ಮತ್ತು ಗುಣಮಟ್ಟದ ಲೋಪಗಳು ಕಂಡುಬಂದಿವೆ.
  • ಆಶಾ ಕನ್ಫೆಕ್ಷನರಿ: ಚಾಕೊಲೇಟ್ ತುಂಬಿದ ಕುಕೀಗಳ ತಪ್ಪು ಲೇಬಲಿಂಗ್ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆರೋಪ ಎದುರಿಸುತ್ತಿದೆ.

ಇದಲ್ಲದೆ, ನೈರ್ಮಲ್ಯ ನಿರ್ವಹಣೆ ಮತ್ತು ಮರುಪ್ಯಾಕೇಜಿಂಗ್ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಉರ್ಮಿ ಲೈಫ್‌ಸೈನ್ಸಸ್ ಎಲ್‌ಎಲ್‌ಪಿ ಹಾಗೂ ಗೌರ್ ಆಯುರ್ವೇದಿಕ್ ಸ್ಟೋರ್‌ಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.

ಈ ಹಿಂದೆಯೂ ಬಿಸ್ಲೆರಿ ವಿರುದ್ಧ ವೈರಲ್ ಆಗಿದ್ದ ಆರೋಪ

ಬಿಸ್ಲೆರಿ ನೀರಿನ ಗುಣಮಟ್ಟದ ಕುರಿತು ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. 2026ರ ಅಕ್ಟೋಬರ್‌ನಲ್ಲಿ ಚರಂಡಿ ನೀರನ್ನು ಶುದ್ಧೀಕರಿಸಿ ಬಿಸ್ಲೆರಿ ಹೆಸರಿನ ಬಾಟಲಿಗಳಲ್ಲಿ ತುಂಬಲಾಗುತ್ತಿದೆ ಎಂಬ ಆರೋಪದ ವಿಡಿಯೋವೊಂದು ವೈರಲ್ ಆಗಿತ್ತು. ಈ ಆರೋಪವನ್ನು ತಳ್ಳಿಹಾಕಿದ್ದ ಕಂಪನಿ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸ್ಥಳ ತನ್ನ ಉತ್ಪಾದನಾ ಘಟಕವಲ್ಲ ಹಾಗೂ ಆ ಘಟಕಕ್ಕೂ ಬಿಸ್ಲೆರಿ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿತ್ತು.

ಆದರೆ, ಇದೀಗ FSSAI ನಡೆಸಿರುವ ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶಗಳು ಪ್ರತ್ಯೇಕ ನಿಯಂತ್ರಕ ಪರಿಶೀಲನೆಗೆ ಸಂಬಂಧಿಸಿವೆ. ಹೀಗಾಗಿ ಈ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಕಂಪನಿಯ ವಿರುದ್ಧದ ಮುಂದಿನ ಕಾನೂನು ಪ್ರಕ್ರಿಯೆಗಳ ಮೇಲೆ ಸಾರ್ವಜನಿಕರ ಗಮನ ನೆಟ್ಟಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts