ಮಂಗಳೂರು: ಸಾಂಬಾರ್‌ನಲ್ಲಿ ಜಿರಳೆ ಪತ್ತೆಯಾಗಿದೆ ಎಂಬ ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ನಿಯೋಜಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರು ಉಳ್ಳಾಲದ ತೊಕ್ಕೊಟ್ಟಿನಲ್ಲಿರುವ ವೃಂದಾವನ್ ಹೋಟೆಲ್‌ಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯಾಹ್ನ ಸುಮಾರು 1.30ಕ್ಕೆ ಹೋಟೆಲ್‌ಗೆ ತೆರಳಿದ ಅಧಿಕಾರಿಗಳು ಅಡುಗೆಮನೆ ಸೇರಿದಂತೆ ವಿವಿಧೆಡೆ ಕೂಲಂಕಷ ತಪಾಸಣೆ ನಡೆಸಿದರು.
ತಪಾಸಣೆ ವೇಳೆ ಹೋಟೆಲ್‌ನಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಪ್ರತ್ಯೇಕ ಶೇಖರಣಾ ಕೊಠಡಿ ಇಲ್ಲದಿರುವುದು ಹಾಗೂ ಅಡುಗೆಮನೆಯಾದ್ಯಂತ ಆಹಾರ ಪದಾರ್ಥಗಳನ್ನು ಅಸಮರ್ಪಕವಾಗಿ ರಾಶಿ ಹಾಕಿರುವುದು ಕಂಡುಬಂದಿದೆ ಎಂದು ಡಾ. ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಸರಿಯಾಗಿ ಸಂಗ್ರಹಿಸದ ಆಹಾರ ಪದಾರ್ಥಗಳನ್ನು ತೆರವುಗೊಳಿಸಿ, ಅಡುಗೆಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಸೂಚಿಸಲಾಯಿತು. ಅಲ್ಲದೆ, ಆಹಾರ ಪದಾರ್ಥಗಳನ್ನು ಪ್ರತ್ಯೇಕ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಿ ಸಂಗ್ರಹಿಸುವಂತೆ ಹೋಟೆಲ್ ಮಾಲೀಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಹೋಟೆಲ್‌ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಹೆಚ್ಚುವರಿ ಉಪ ಆಯುಕ್ತರ (ಎಡಿಸಿ) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಆಹಾರ ಸುರಕ್ಷತಾ ಅಧಿಕಾರಿ ತಿಳಿಸಿದ್ದಾರೆ.

































