ಪುತ್ತೂರು, ಆಗಸ್ಟ್ 20: ಕುಟುಂಬದ ಆಸರೆಯಿಲ್ಲದೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 52 ವರ್ಷದ ಅನಾಥ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ರಕ್ಷಿಸಿ, ಮಂಗಳೂರಿನ ಕೈಕಂಬದಲ್ಲಿರುವ ‘ಜೀವದಾನ ಚಾರಿಟೇಬಲ್ ಟ್ರಸ್ಟ್’ ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆಗೊಳಿಸುವ ಮಾನವೀಯ ಕಾರ್ಯವನ್ನು ರೋಟರಿ ಕ್ಲಬ್ ಪುತ್ತೂರು ಯುವದ ಎಕ್ಸಿಕ್ಯೂಟಿವ್ ಸೆಕ್ರೆಟರಿ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ನೆರವೇರಿಸಲಾಗಿದೆ.
ಆಸ್ಪತ್ರೆ ಸಿಬ್ಬಂದಿಯ ಮಾನವೀಯ ಸ್ಪಂದನೆ
ಕಳೆದ 20 ದಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆಯ ಸರ್ವ ಸಿಬ್ಬಂದಿ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ನೀಡಿದ್ದು, ಪುನರ್ವಸತಿ ಕಲ್ಪಿಸುವಲ್ಲಿಯೂ ಮುತುವರ್ಜಿ ವಹಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವಧಿಯಲ್ಲಿ ಮಹಿಳೆಯು ಇತರ ಒಳರೋಗಿಗಳೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿದ್ದರು. ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಆಸ್ಪತ್ರೆಯ ಒಳರೋಗಿಗಳು ಹಾಗೂ ಸಿಬ್ಬಂದಿ ಭಾವುಕರಾಗಿ ಬೀಳ್ಕೊಟ್ಟರು.
ಈ ವೇಳೆ ರೋಟರಿ ಕ್ಲಬ್ ಪುತ್ತೂರು ಯುವದ ಸಮುದಾಯ ಸೇವಾ ವಿಭಾಗದ ಮುಖ್ಯಸ್ಥ ಅಭಿಷಯ ಅವರು ಸಿಹಿತಿಂಡಿ ವಿತರಿಸಿ, ವಿದಾಯದ ಕ್ಷಣವನ್ನು ಮತ್ತಷ್ಟು ಆತ್ಮೀಯವಾಗಿಸಿದರು.
‘ನಿರ್ಗತಿಕರ ಆಪದ್ಬಾಂಧವ’ ಉಮೇಶ್ ನಾಯಕ್
ಈ ಕಾರ್ಯಾಚರಣೆ ಕುರಿತು ಮಾತನಾಡಿದ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ವಚನ ಜಯರಾಮ್, “ನಮ್ಮ ಸಂಸ್ಥೆಯ ಎಕ್ಸಿಕ್ಯೂಟಿವ್ ಸೆಕ್ರೆಟರಿ ಪುತ್ತೂರು ಉಮೇಶ್ ನಾಯಕ್ ಅವರು ಅನಾಥರು ಹಾಗೂ ನಿರ್ಗತಿಕರ ಪಾಲಿನ ನಿಜವಾದ ಆಪದ್ಬಾಂಧವರು. ಸಂಕಷ್ಟದಲ್ಲಿರುವವರನ್ನು ಕಂಡಾಗ ತಕ್ಷಣ ಸ್ಪಂದಿಸುವ ಅವರ ನಿಸ್ವಾರ್ಥ ಸೇವಾ ಕಳಕಳಿ ಸಮಾಜಕ್ಕೆ ಮಾದರಿಯಾಗಿದೆ” ಎಂದು ಶ್ಲಾಘಿಸಿದರು.
2021ರಲ್ಲಿಯೂ ಉಮೇಶ್ ನಾಯಕ್ ಅವರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಹಾಗೂ ಆಕೆಯ ಮೂವರು ಅಪ್ರಾಪ್ತ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಹಿಳಾ ಪೊಲೀಸ್ ಠಾಣೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಹಕಾರದಿಂದ ಮಕ್ಕಳಿಗೆ ಸೂಕ್ತ ಆಶ್ರಯ ಮತ್ತು ಉಚಿತ ವಿದ್ಯಾಭ್ಯಾಸ ಕಲ್ಪಿಸುವ ಕಾರ್ಯದಲ್ಲೂ ಅವರು ನೆರವಾಗಿದ್ದರು ಎಂದು ವಚನ ಜಯರಾಮ್ ತಿಳಿಸಿದರು.
ವೈದ್ಯಾಧಿಕಾರಿ ಡಾ. ಯಧುರಾಜ್ ಅವರ ಕಾಳಜಿ
ಕುಟುಂಬದ ಬೆಂಬಲವಿಲ್ಲದೆ ಅನಾಥರಾಗಿದ್ದ ಮಹಿಳೆಯ ಸ್ಥಿತಿಯನ್ನು ಗಮನಿಸಿದ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಯಧುರಾಜ್ ಅವರು ರೋಗಿಯ ಸೂಕ್ತ ಆರೈಕೆ ಹಾಗೂ ಸುರಕ್ಷಿತ ಆಶ್ರಯಕ್ಕಾಗಿ ಉಮೇಶ್ ನಾಯಕ್ ಅವರನ್ನು ಸಂಪರ್ಕಿಸಿದ್ದರು.
ಆಸ್ಪತ್ರೆಯ ಆಪ್ತ ಸಲಹಾ ಕೇಂದ್ರದ ಸಮಾಲೋಚಕ ತಾರಾನಾಥ್ ಅವರು ಮಹಿಳೆಗೆ ಆಪ್ತ ಸಮಾಲೋಚನೆ ನೀಡಿ, ಪುನರ್ವಸತಿ ಕೇಂದ್ರಕ್ಕೆ ತೆರಳಲು ಮನವರಿಕೆ ಮಾಡಿಕೊಟ್ಟರು. ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿದ್ದ ಸಂದರ್ಭದಲ್ಲಿಯೂ ಸಹಕಾರ ನೀಡಿದರು.
ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮಹಿಳೆಗೆ ಪ್ರೀತಿ ಮತ್ತು ಕಾಳಜಿಯಿಂದ ಆರೈಕೆ ನೀಡಿ ಉತ್ತಮ ಚಿಕಿತ್ಸೆ ಒದಗಿಸಿದ್ದಾರೆ.
ವಿವಿಧ ಇಲಾಖೆಗಳ ಸಹಕಾರ
ಮಹಿಳೆಯ ರಕ್ಷಣಾ ಹಾಗೂ ಪುನರ್ವಸತಿ ಕಾರ್ಯಕ್ಕೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್, ಮಂಗಳ ಕಾಳೆ ಮತ್ತು ಕಚೇರಿ ಸಿಬ್ಬಂದಿ ಕಾನೂನುಬದ್ಧ ದಾಖಲಾತಿ ಸೇರಿದಂತೆ ಅಗತ್ಯ ಸಹಕಾರ ನೀಡಿದ್ದಾರೆ.
ರೋಟರಿ ಕ್ಲಬ್ ಪುತ್ತೂರು ಯುವ, ಆಸ್ಪತ್ರೆ ಆಡಳಿತ ಹಾಗೂ ವಿವಿಧ ಇಲಾಖೆಗಳ ಜಂಟಿ ಮುತುವರ್ಜಿಯಿಂದಾಗಿ ಮಹಿಳೆಗೆ ಮಂಗಳೂರಿನ ಕೈಕಂಬದಲ್ಲಿರುವ ‘ಜೀವದಾನ’ ಪುನರ್ವಸತಿ ಕೇಂದ್ರದಲ್ಲಿ ಸುರಕ್ಷಿತ ವಸತಿ ಮತ್ತು ಆರೈಕೆಯ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವದ ಕಾರ್ಯದರ್ಶಿ ಅನುಪ್, ಸಮುದಾಯ ಸೇವಾ ವಿಭಾಗದ ಮುಖ್ಯಸ್ಥ ಅಭಿಷ್ ಹಾಗೂ ಮಹಿಳಾ ಪೊಲೀಸ್ ಠಾಣೆಯ ಪರವಾಗಿ ಗೃಹರಕ್ಷಕ ದಳದ ಚೈತ್ರ ಉಪಸ್ಥಿತರಿದ್ದು ಸಹಕರಿಸಿದರು.
ಮಾನವೀಯತೆ, ವೈದ್ಯಕೀಯ ಸೇವೆ ಹಾಗೂ ಸಾಮಾಜಿಕ ಕಾಳಜಿ ಒಂದಾಗಿ ಮೂಡಿಬಂದ ಈ ಕಾರ್ಯವು ನಿರ್ಗತಿಕರ ಬದುಕಿಗೆ ಆಸರೆಯಾಗುವ ಮಾದರಿ ಹೆಜ್ಜೆಯಾಗಿದೆ.

































