ಪುತ್ತೂರು: ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಬಂಧಿಸಿದಂತೆ ₹574.79 ಕೋಟಿ ಅನುದಾನಕ್ಕೆ ಇಂದು ಆಡಳಿತಾತ್ಮಕ ಅನುಮೋದನೆ ದೊರೆಯುವ ನಿರೀಕ್ಷೆಯಿದೆ.
ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತರೆ, ಮೆಡಿಕಲ್ ಕಾಲೇಜು ನಿರ್ಮಾಣದ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.
ಆಡಳಿತಾತ್ಮಕ ಅನುಮೋದನೆ ಕೋರಿ ಶಾಸಕ ಅಶೋಕ್ ರೈ ಅವರು ಕಳೆದ ವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಈ ಕುರಿತು ಅನುಮೋದನೆ ದೊರೆಯಲಿದೆ ಎಂದು ತಿಳಿದುಬಂದಿದೆ.
ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಯೇ ಸಿದ್ಧ ಎಂಬುದು ಶಾಸಕ ಅಶೋಕ್ ರೈ ಅವರ ಚುನಾವಣಾ ಪೂರ್ವ ಭರವಸೆಯಾಗಿತ್ತು. ಕಳೆದ ಬಜೆಟ್ ಅಧಿವೇಶನದಲ್ಲಿ ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆಯಾಗುವ ಮೂಲಕ ಭರವಸೆ ಈಡೇರಿತ್ತು.
ಇದೀಗ ₹574.79 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತರೆ, ಕಾಮಗಾರಿ ಆರಂಭಕ್ಕೆ ಅಗತ್ಯ ಪ್ರಕ್ರಿಯೆಗಳು ಮತ್ತಷ್ಟು ಚುರುಕುಗೊಳ್ಳಲಿವೆ. ಇದರೊಂದಿಗೆ ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹುವರ್ಷಗಳ ಸರ್ಕಾರಿ ಮೆಡಿಕಲ್ ಕಾಲೇಜಿನ ಕನಸು ನನಸಾಗುವ ನಿರೀಕ್ಷೆ ಮೂಡಿದೆ.

































