ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನ ಬಾಲವನದಲ್ಲಿ ನೀಡಲಾಗುವ ಪ್ರತಿಷ್ಠಿತ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ಗೆ ಪುತ್ತೂರಿನ ಶ್ರೇಷ್ಠ ಸಿವಿಲ್ ಇಂಜಿನಿಯರಿಂಗ್ ಸಾಧಕ, ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಮುಖ್ಯಸ್ಥ ಶ್ರೀ ಎಸ್. ಕೆ. ಆನಂದ್ ಅವರು ಆಯ್ಕೆಯಾಗಿದ್ದಾರೆ.
ಡಾ. ಶಿವರಾಮ ಕಾರಂತರು ತಮ್ಮ ಜೀವಿತಾವಧಿಯಲ್ಲಿ ಪ್ರತಿಪಾದಿಸಿದ ವೈಜ್ಞಾನಿಕ ಮನೋಭಾವ, ಪ್ರಾಯೋಗಿಕ ಪರಿಸರ ಕಾಳಜಿ ಮತ್ತು ಸುಸ್ಥಿರ ಜೀವನ ಶೈಲಿಯನ್ನು ತಮ್ಮ ವೃತ್ತಿಬದುಕಿನಲ್ಲಿ ಅಕ್ಷರಶಃ ಸಾಕಾರಗೊಳಿಸಿದ ವಿಶಿಷ್ಟ ಸಾಧಕ ಎಸ್. ಕೆ. ಆನಂದ್. ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೂಲಕ ‘ಕಾಂಕೂಡ್’ ಎಂಬ ಪರ್ಯಾಯ ವಸ್ತುವನ್ನು ಆವಿಷ್ಕರಿಸಿ, ದೇಶದಲ್ಲೇ ಬೃಹತ್ ವೃಕ್ಷ ರಕ್ಷಣಾ ಕ್ರಾಂತಿ ನಡೆಸಿದ ಅಪೂರ್ವ ಕೊಡುಗೆಗಾಗಿ ಈ ಅತ್ಯುನ್ನತ ರಾಜ್ಯ ಪ್ರಶಸ್ತಿ ಇವರನ್ನು ಅರಸಿ ಬಂದಿದೆ.
1951ರಲ್ಲಿ ಪುತ್ತೂರಿನಲ್ಲಿ ಜನಿಸಿದ ಎಸ್. ಕೆ. ಆನಂದ್ ಅವರು ಕರಾವಳಿಯ ಇಂಜಿನಿಯರಿಂಗ್ ಕ್ಷೇತ್ರದ ಹಿರಿಯ ಚೇತನ ದಿವಂಗತ ಎಸ್. ಕೆ. ಈಶ್ವರ ಭಟ್ ಮತ್ತು ಶ್ರೀಮತಿ ಶಾರದಾ ಭಟ್ ದಂಪತಿಯ ಪುತ್ರ. ಮಂಗಳೂರಿನ ಪ್ರತಿಷ್ಠಿತ ಕೆ.ಆರ್.ಇ.ಸಿ (ಪ್ರಸ್ತುತ NITK, ಸುರತ್ಕಲ್) ಸಂಸ್ಥೆಯಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಎಂಟೆಕ್ (M.Tech) ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದರು. ಶಿಕ್ಷಣ ಮುಗಿದ ತಕ್ಷಣವೇ ಉನ್ನತ ಅವಕಾಶಗಳಿದ್ದರೂ ದೊಡ್ಡ ನಗರಗಳ ಕಡೆಗೆ ಮುಖ ಮಾಡದೆ, ತವರೂರು ಪುತ್ತೂರಿನಲ್ಲೇ ನೆಲೆಸಿ, ತಂದೆಯವರು ಸ್ಥಾಪಿಸಿದ್ದ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಜವಾಬ್ದಾರಿಯನ್ನು 1975ರಲ್ಲಿ ವಹಿಸಿಕೊಂಡರು. ಪ್ರಸ್ತುತ 76ನೇ ವಯಸ್ಸಿನಲ್ಲೂ ಸುಸ್ಥಿರ ನಿರ್ಮಾಣ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಮನೆ, ಕಚೇರಿ, ಶಾಲಾ-ಕಾಲೇಜುಗಳ ನಿರ್ಮಾಣದಲ್ಲಿ ದಾರಂದಗಳು, ಕಿಟಕಿಗಳು, ಮೇಲ್ಛಾವಣಿಯ ತೊಲೆಗಳು ಹಾಗೂ ಬೆಂಚ್-ಡೆಸ್ಕ್‌ಗಳಿಗಾಗಿ ಕಾಡಿನ ಅಪಾರ ಪ್ರಮಾಣದ ಬೆಲೆಬಾಳುವ ಮರಮುಟ್ಟುಗಳನ್ನು ಕಡಿಯಲಾಗುತ್ತಿತ್ತು. ಕೆಲವೇ ವರ್ಷಗಳಲ್ಲಿ ಮರ ಕೊಳೆತು ಗೆದ್ದಲು ಹಿಡಿಯುವುದರಿಂದ ಮತ್ತೆ ಮರಗಳನ್ನು ಕಡಿಯುವ ಚಕ್ರ ನಿರಂತರವಾಗಿ ನಡೆಯುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಹಾಗೂ ಪರಿಸರಸ್ನೇಹಿ ಪರಿಹಾರ ಕಂಡುಕೊಳ್ಳಲು ಆನಂದ್ ಅವರು ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೇಲೆ ಸುದೀರ್ಘ ಸಂಶೋಧನೆ ನಡೆಸಿ, ಮರದ ಬಲದಲ್ಲೇ ರೂಪುಗೊಳ್ಳುವ ಕಾಂಕ್ರೀಟ್ ಉತ್ಪನ್ನಗಳನ್ನು ರೂಪಿಸಿದರು.
‘ಕಾಂಕೂಡ್’ (Concood™) ಅಂದರೆ ಅರ್ಥಾತ್ ಮರಕ್ಕೆ ಸಂಪೂರ್ಣ ಪರ್ಯಾಯವಾದ ಕಾಂಕ್ರೀಟ್ ಉತ್ಪನ್ನಗಳು. ಬಹುಶಃ ಮರಕ್ಕೆ ಪರ್ಯಾಯವಾದ ಇಂತಹ ಕಾಂಪೋಸಿಟ್ ಕಲ್ಪನೆಯು ಭಾರತದಲ್ಲೇ ಪ್ರಥಮ ಬಾರಿಗೆ ಇವರ ಸಂಸ್ಥೆಯಿಂದಲೇ ಆರಂಭವಾಯಿತು ಎಂದು ಹೆಮ್ಮೆಯಿಂದ ಹೇಳಬಹುದು. ತಮ್ಮ ಈ ವಿನೂತನ ಸಂಶೋಧನೆ ‘ಕಾಂಕೊಡ್’ ಪದಕ್ಕೆ 2007ರಲ್ಲೇ ಭಾರತ ಸರ್ಕಾರದಿಂದ ಅಧಿಕೃತ ಟ್ರೇಡ್‌ಮಾರ್ಕ್ ನೋಂದಣಿಯನ್ನೂ ಪಡೆದಿದ್ದಾರೆ.
ಅಪಾರ ವೃಕ್ಷ ಸಂರಕ್ಷಣೆಯ ಮಹಾ ಲೆಕ್ಕಾಚಾರ:
ಜಾಗತಿಕ ಪರಿಸರ ವಿಜ್ಞಾನದ ತತ್ವದಂತೆ ಕಾಡಿನ ಮರಗಳನ್ನು ನೆಟ್ಟು ಬೆಳೆಸುವುದು (Afforestation) ಎಷ್ಟು ಮಹತ್ವದ್ದೋ, ಬೆಳೆದ ಅತ್ಯಂತ ಬೆಲೆಬಾಳುವ ವೃಕ್ಷಗಳು ಕೊಡಲಿಗೆ ಬಲಿಯಾಗದಂತೆ ತಡೆ ಒಡ್ಡುವುದು (Avoided Deforestation) ಅಷ್ಟೇ ಶ್ರೇಷ್ಠ ಹಾಗೂ ಪ್ರಭಾವಶಾಲಿ ಪರಿಸರ ಸೇವೆಯಾಗಿದೆ.
ಸಾಮಾನ್ಯವಾಗಿ ಒಂದು ಬೆಳೆದ ಮರವು ನಿರ್ಮಾಣ ಕಾರ್ಯಗಳಿಗೆ ಸುಮಾರು 10 ಸಿ.ಎಫ್.ಟಿ (CFT) ಯೋಗ್ಯ ಉತ್ಪನ್ನಗಳನ್ನು ನೀಡುತ್ತದೆ. ಎಸ್. ಕೆ. ಆನಂದ್ ಅವರ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯಲ್ಲಿ ಪ್ರತಿದಿನ ಸರಾಸರಿ ಸುಮಾರು 200 CFT ಗೂ ಅಧಿಕ ಕಾಂಕ್ರೀಟ್ ಪರಿಕರಗಳು ಉತ್ಪಾದನೆಯಾಗುತ್ತವೆ. ಈ ಲೆಕ್ಕಾಚಾರದಂತೆ ಪ್ರತಿದಿನ ಸುಮಾರು 20 ಬೆಳೆದ ದೊಡ್ಡ ಮರಗಳು ಕಡಿಯುವುದು ತಪ್ಪುತ್ತದೆ. ಈ ಕಾರ್ಯವನ್ನು ಕಳೆದ 50 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ಆನಂದ್ ಅವರ ಸಂಸ್ಥೆಯು, ಈವರೆಗೆ ಸುಮಾರು 36,50,000 (36.5 ಲಕ್ಷ) ಕ್ಕೂ ಅಧಿಕ ಬೃಹತ್ ಮರಗಳನ್ನು ಕೊಡಲಿಗೆ ಬಲಿಯಾಗದಂತೆ ಕಾಪಾಡಿ ಬೃಹತ್ ಅರಣ್ಯವನ್ನೇ ರಕ್ಷಿಸಿದ ಐತಿಹಾಸಿಕ ಸಾಧನೆ ಮಾಡಿದೆ.
ರಾಜ್ಯದ ಹಲವಾರು ಪ್ರತಿಷ್ಠಿತ ಶಾಲಾ-ಕಾಲೇಜುಗಳು ಮರದ ಬೆಂಚ್ ಬದಲು ಇವರ ‘ಕಾಂಕೂಡ್’ ಬೆಂಚ್‌ಗಳನ್ನು ಅಳವಡಿಸಿಕೊಂಡಿವೆ. ‘ಪದ್ಮಶ್ರೀ’ ಗಿರೀಶ್ ಭಾರದ್ವಾಜ್ ಅವರು ದೇಶಾದ್ಯಂತ ನಿರ್ಮಿಸಿದ 30ಕ್ಕೂ ಹೆಚ್ಚು ತೂಗು ಸೇತುವೆಗಳಿಗೆ ಮರದ ಹಲಗೆಗಳ ಬದಲಿಗೆ ಆನಂದ್ ಅವರ ‘ಕಾಂಕೂಡ್’ ಪರಿಕರಗಳನ್ನೇ ಬಳಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ,ಕರ್ನಾಟಕ ಅರಣ್ಯ ಇಲಾಖೆ ಹಾಗೂ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಿಗೂ ಈ ತಂತ್ರಜ್ಞಾನ ವಿಸ್ತರಿಸಿದ್ದು, ಇಂದು ಇವರ ಬಳಿ 250ಕ್ಕೂ ಅಧಿಕ ಕಾಂಕ್ರೀಟ್ ಪರಿಕರಗಳು ಲಭ್ಯವಿವೆ.
50 ಎಕರೆಗೂ ಅಧಿಕ ಹಸಿರು ಕಾಡು ಹಾಗೂ ಅಪೂರ್ವ ಸಾಮಾಜಿಕ ಕಾಳಜಿ:
ಕೇವಲ ಮರಗಳನ್ನು ರಕ್ಷಿಸುವುದಷ್ಟೇ ಅಲ್ಲದೆ, ವೈಯಕ್ತಿಕವಾಗಿ ಸೊರಕೆಯಲ್ಲಿ ಹಾಗೂ ಕುಡಿಪಾಡಿಯಲ್ಲಿ ಕುಡಿಕಾಡು ಎಂಬ ಹೆಸರಿನಲ್ಲಿ 50 ಎಕರೆಗೂ ಹೆಚ್ಚು ವಿಸ್ತೀರ್ಣದ ಸ್ಥಳದಲ್ಲಿ ಸಾವಿರಾರು ಅತ್ಯಮೂಲ್ಯ ಗಿಡ-ಮರಗಳನ್ನು ಬೆಳೆಸಿ ಕಣ್ಣು ತಣ್ಣಗಾಗಿಸುವ ಹಸಿರು ಕಾಡನ್ನು ಸೃಷ್ಟಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯಡಿ 9 ಕೇಂದ್ರಗಳಲ್ಲಿ 24 ಸಂಸ್ಥೆಗಳ ಮೂಲಕ 800ಕ್ಕೂ ಅಧಿಕ ಸ್ಥಳೀಯರಿಗೆ (ಇದರಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಹಾಗೂ 20 ಕ್ಕೂ ಅಧಿಕ ಭಿನ್ನಸಾಮರ್ಥ್ಯ ಹೊಂದಿದವರು) ನೇರ ಉದ್ಯೋಗ ನೀಡಿದ್ದಾರೆ. ಪರೋಕ್ಷವಾಗಿ 3000ಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿದ್ದಾರೆ. ವಿಶೇಷವೆಂದರೆ, ತಮ್ಮ ಸಂಸ್ಥೆಯ ಆವರಣದಲ್ಲೇ ಕೆಲಸ ಮಾಡುವ ಸಿಬ್ಬಂದಿಗಳ ಮಕ್ಕಳ ಪಾಲನೆಗಾಗಿ ‘ಅಂಗನವಾಡಿ’ ಮಾದರಿಯ ವಿಶಿಷ್ಟ ಪ್ಲೇ ಸ್ಕೂಲ್ (Play School) ಪ್ರಾರಂಭಿಸಿ, ಕಾರ್ಮಿಕರ ಮಕ್ಕಳ ಆರೈಕೆ ಹಾಗೂ ಉಚಿತ ಶಿಕ್ಷಣಕ್ಕೆ ನಾಂದಿ ಹಾಡಿರುವುದು ಇವರ ಅಪೂರ್ವ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ.
ಚಾಮರಾಜನಗರ, ನಾಗರಹೊಳೆ ಭಾಗದ ಅರಣ್ಯವಾಸಿ ಗಿರಿಜನರಿಗೆ 8,000ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿರುವುದಲ್ಲದೆ, ಸುಳ್ಯದಲ್ಲಿ ಕಳೆದ 20 ವರ್ಷಗಳಿಂದ ‘ಸ್ನೇಹ ಶಿಕ್ಷಣ ಸಂಸ್ಥೆ’ (ಕನ್ನಡ ಮಾಧ್ಯಮ) ನಡೆಸಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಇವರು ಸ್ವತಹ ಓರ್ವ ಸಾಹಿತಿಯಾಗಿದ್ದು, ‘ಭಾವಲೋಕ’ ಎಂಬ ಕವನ ಸಂಕಲನವನ್ನೂ ಹಲವಾರು ಭಾವಗೀತೆಯನ್ನು ರಚಿಸಿ ಪ್ರಕಟಿಸಿದ್ದಾರೆ.
ಎಸ್. ಕೆ. ಆನಂದ್ – ಶ್ರೀಮತಿ ರೇಖಾ ಆನಂದ್ ದಂಪತಿಯ ನಾಲ್ವರೂ ಮಕ್ಕಳು — ಅಕ್ಷಯ್, ಅರ್ಜುನ್, ಆಕಾಶ್ ಹಾಗೂ ಪುತ್ರಿ ಆರತಿ — ನಾಲ್ವರೂ ಸಿವಿಲ್ ಇಂಜಿನಿಯರಿಂಗ್ ಪದವೀಧರರು ಎಂಬುದು ಭಾರತೀಯ ಇಂಜಿನಿಯರಿಂಗ್ ಕ್ಷೇತ್ರದಲ್ಲೇ ವಿಶಿಷ್ಟ ದಾಖಲೆ. ಇಡೀ ಕುಟುಂಬವೇ ಸಂಸ್ಥೆಯ ಸುಸ್ಥಿರ ಹಾಗೂ ಪರಿಸರಸ್ನೇಹಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ಪ್ರಶಸ್ತಿಗಳು
ಇವರ ಸೇವೆಯನ್ನು ಗುರುತಿಸಿ ‘ಪರಿಸರಪ್ರೇಮಿ’ (2003), ‘ಕರ್ನಾಟಕದ ಅತ್ಯುತ್ತಮ ಕಾಂಕ್ರೀಟ್ ಇಂಜಿನಿಯರ್’ (2008 – ICI), ರಾಷ್ಟ್ರೀಯ ಜೆಸಿಐ ‘TOBIP’ ಹಾಗೂ ACCE-UltraTech ಪ್ರಶಸ್ತಿಗಳು ಲಭಿಸಿವೆ.
ಬಾಲವನ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಶಾಸಕ ಅಶೋಕ್ ಕುಮಾರ್ ರೈ ಇವರ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಬಾಲವನ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಸ್ಟೆಲ್ಲಾ ವರ್ಗೀಸ್ ಹಾಗೂ ಆಯ್ಕೆ ಸಮಿತಿಯ ಸದಸ್ಯರಾದ ತಾಲೂಕು ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿಗಳಾದ ವಿ. ಬಿ. ಆರ್ತಿಕಜೆ ಹಾಗೂ ರೆ. ವಿಜಯ್ ಹಾರ್ವಿನ್ ಅವರನ್ನೊಳಗೊಂಡ ಪ್ರಶಸ್ತಿ ಆಯ್ಕೆ ಸಮಿತಿಯು ಈ ಸಾಧಕನನ್ನು ಆಯ್ಕೆ ಮಾಡಿದ್ದು, ಅಕ್ಟೋಬರ್ 10, 2026 ರಂದು ಪುತ್ತೂರಿನ ಐತಿಹಾಸಿಕ ಬಾಲವನದಲ್ಲಿ ನಡೆಯಲಿರುವ ವೈಭವದ ಸಮಾರಂಭದಲ್ಲಿ ಅಧಿಕೃತವಾಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
























