tamanvi
ಆರೋಗ್ಯ

ಆಗಸ್ಟ್ 10: ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆ ಉಚಿತ ವಿತರಣೆ!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆ ಸುಧಾರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 10ರಂದು 1ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆ ಉಚಿತವಾಗಿ ನೀಡಲಾಗುತ್ತದೆ.

ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ-ಕಾಲೇಜುಗಳು ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ಮಾತ್ರೆ ವಿತರಿಸಲಾಗುತ್ತದೆ. ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಬಳಿಕ ಶಿಕ್ಷಕರ ಸಮ್ಮುಖದಲ್ಲಿ ಹಾಗೂ ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರ ಉಪಸ್ಥಿತಿಯಲ್ಲಿ ಮಾತ್ರೆ ನೀಡಲಾಗುತ್ತದೆ.

1ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 2ರಿಂದ 19 ವರ್ಷದೊಳಗಿನ ಮಕ್ಕಳಿಗೆ ಒಂದು ಮಾತ್ರೆ ನೀಡಲಾಗುತ್ತದೆ. ಜಂತುಹುಳ ನಿವಾರಣೆಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಿಸಿದ ಆಲ್ಬೆಂಡಝೋಲ್ 400 ಮಿ.ಗ್ರಾಂ ಮಾತ್ರೆಯನ್ನು ಬಳಸಲಾಗುತ್ತದೆ.

ಆ.10ರಂದು ಮಾತ್ರೆ ಪಡೆಯದೆ ಬಾಕಿ ಉಳಿದ ಮಕ್ಕಳಿಗೆ ಆ.17ರಂದು ಮಾಪ್-ಅಪ್ ದಿನದಂದು ಮಾತ್ರೆ ನೀಡಲಾಗುತ್ತದೆ. ಅಂಗನವಾಡಿಗೆ ದಾಖಲಾಗದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕರ ಮೂಲಕ ಮಾತ್ರೆ ನೀಡಲಾಗುತ್ತದೆ.

ಜಂತುಹುಳ ಸೋಂಕಿನಿಂದ ರಕ್ತಹೀನತೆ, ಅಪೌಷ್ಟಿಕತೆ, ಬೆಳವಣಿಗೆ ಕುಂಠಿತವಾಗುವುದು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಮಕ್ಕಳಿಗೆ ತಪ್ಪದೇ ಜಂತುಹುಳ ನಿವಾರಣಾ ಮಾತ್ರೆ ಕೊಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮನವಿ ಮಾಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts