ಪುತ್ತೂರು: ಮನ್ಸ ಜನಾಂಗ ಸರ್ಕಾರದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಆಗದೇ ಇರುವುದರಿಂದ, ಸಾಂವಿಧಾನಿಕ ಹಕ್ಕಿನಿಂದ ವಂಚಿತರಾಗಿದ್ದಾರೆ. ಆದ್ದರಿಂದ ಪರಿಶೀಲಿಸಿ, ಮನ್ಸ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಶಿಫಾರಸ್ಸು ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ನೀಡಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇರುವ ಪರಿಶಿಷ್ಟ ಜಾತಿಗಳಲ್ಲಿ ಅತ್ಯಧಿಕ ಜನಸಂಖ್ಯೆ (5.00 ಲಕ್ಷಕ್ಕೂ ಮಿಕ್ಕಿ) ಇರುವ ಅಸ್ಪೃಶ್ಯರಲ್ಲೇ ಅಸ್ಪೃಶ್ಯರಾಗಿರುವ “ಮನ್ಸ ಜಾತಿಯಾಗಿರುತ್ತದೆ. ಈ ಎರಡೂ ಜಿಲ್ಲೆಗಳಲ್ಲಿರುವ ಪರಿಶಿಷ್ಟ ಜಾತಿಗಳಾದ ಮುಂಡಾಲ, ಮುಗೇರ, ನಲಿಕೆ, ಪರವ, ಪಂಬದ, ಬಾಕುಡ, ಕೂಸಳ (ಉಡುಪಿ ಜಿಲ್ಲೆ) ಇತ್ಯಾದಿ ಜಾತಿಗಳ ಪೈಕಿ ಅತ್ಯಧಿಕ ಸಂಖ್ಯೆಯಲ್ಲಿ ಇರುವ ಈ “ಮನ್ಸ” ಜಾತಿಯ ಹೆಸರು ಸರ್ಕಾರದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರದೇ ಬಿಟ್ಟು ಹೋಗಿರುವ ಕಾರಣದಿಂದಾಗಿ ಸದರಿ ಜಾತಿಯವರು ಎಲ್ಲಾ ಸಾಂವಿಧಾನಿಕ ಹಕ್ಕುಗಳಿಂದ ವಂಚಿತಗೊಂಡಿರುವ ಬಗ್ಗೆ ಸದರಿ ಸಮಾಜದವರು ಮನವಿ ಮಾಡಿರುತ್ತಾರೆ. ಆದುದರಿಂದ, ತಾವುಗಳು ಸಂಬಂಧಪಟ್ಟ ಇಲಾಖೆಗೆ ಪರಿಶೀಲಿಸಿ ಕ್ರಮವಹಿಸಲು ಹಾಗೂ ಸದರಿ ಜಾತಿಯನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಇಲಾಖೆಗೆ ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿಗೆ ನೀಡಿದ ಮನವಿಯಲ್ಲಿ ವಿನಂತಿಸಿದ್ದಾರೆ.
ಮನ್ಸ ಜಾತಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕಿದೆ:
ಮನ್ಸ ಜಾತಿ ಪ.ಜಾತಿ ಪಟ್ಟಿಯಿಂದ ಬಿಟ್ಟು ಹೋಗಿರುವ ಕಾರಣ ಆ ಸಮುದಾಯದ ಮಂದಿ ಸರಕಾರದಿಂದ ಸಿಗುವ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಆ ಸಮುದಾಯದ ಪ್ರಮುಖರು ನನ್ನನ್ನು ಭೇಟಿಯಾಗಿ ಈ ವಿಚಾರವನ್ನು ತಿಳಿಸಿದ್ದರು. ದ ಕ ಉಡುಪಿ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಮನ್ಸ ಸಮುದಾಯದ ಮಂದಿ ಇದ್ದು ಅವರಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕಿದೆ.
ಅಶೋಕ್ ರೈ, ಶಾಸಕರು ಪುತ್ತೂರು























