tamanvi
ಕರಾವಳಿ

ವ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಲೋಕ ಅದಾಲತ್: ಕಾನೂನು ಸಾಕ್ಷರತೆ, ಉಚಿತ ಕಾನೂನು ನೆರವಿನ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣದ ಉದ್ದೇಶದಿಂದ ಕಾನೂನು ಸಾಕ್ಷರತೆ, ಉಚಿತ ಕಾನೂನು ನೆರವು ಹಾಗೂ ಲೋಕ ಅದಾಲತ್ ಕುರಿತು ಜನಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಲಾಗಿದೆ ಎಂದು 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಹಾಗೂ ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಸದಾನಂದ ನಾಗಪ್ಪ ನಾಯಕ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಬೀರಿಗ ಅಂಗನವಾಡಿ, ಬನ್ನೂರು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜನ ಶಿಕ್ಷಣ ಟ್ರಸ್ಟ್‌ಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸಾಕ್ಷರತಾ ದಿನಾಚರಣೆ, ಪೋಷಣಾ ಅಭಿಯಾನ ಹಾಗೂ ಖಾಯಂ ಅದಾಲತ್ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಪೂರ್ಣ ಸಾಕ್ಷರತೆ, ಉತ್ತಮ ಸಂಸ್ಕಾರ ಹಾಗೂ ಕಾನೂನಿನ ಅರಿವಿನ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಸದಾನಂದ ನಾಗಪ್ಪ ನಾಯಕ್ ತಿಳಿಸಿದರು.

ಇನ್ನೋರ್ವ ನ್ಯಾಯಾಧೀಶರಾದ ಕು. ರಮ್ಯಾ ಆರ್. ಅವರು ಮಕ್ಕಳ ಶಿಕ್ಷಣ, ಮಹಿಳಾ ಜಾಗೃತಿ ಹಾಗೂ ಪೌಷ್ಟಿಕ ಆಹಾರ ಪದ್ಧತಿ ಕುರಿತು ಮಾಹಿತಿ ನೀಡಿದರು. ನರೇಗಾ ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ ಅವರು ಸಂವಿಧಾನ ಓದು ಪುಸ್ತಕಗಳನ್ನು ವಿತರಿಸಿ, ಸಂವಿಧಾನ ಹಾಗೂ ಕಾನೂನು ಸಾಕ್ಷರತಾ ಅಭಿಯಾನದ ಕುರಿತು ಮಾಹಿತಿ ನೀಡಿದರು.

ಪುತ್ತೂರು ವಕೀಲರ ಸಂಘದ ಕೋಶಾಧಿಕಾರಿ ಹಾಗೂ ನೋಟರಿ ವಕೀಲರಾದ ಶ್ರೀಮತಿ ಭಾರತಿ ಎ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಕ್ಕಳ ಹಾಗೂ ಮಹಿಳೆಯರ ಕಾನೂನು ಹಕ್ಕುಗಳು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಿದರು.

ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಯಶೋಧ ಅವರು ಪೋಷಣಾ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಸಪ್ತಾಹದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಜತೆ ಕಾರ್ಯದರ್ಶಿ ಉದಯಚಂದ್ರ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಶೃತಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕಿ ಬೀರಿಗ ಅಂಗನವಾಡಿ ಕಾರ್ಯಕರ್ತೆ ಕುಮಾರಿ ಅರುಣಾ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಗಣೇಶ್ ಸ್ವಾಗತಿಸಿದರು. ಅಂಗನವಾಡಿ ಪುಟಾಣಿಗಳ ಆಶಯ ಗೀತೆ, ನಾಡಗೀತೆ ಹಾಗೂ ಜಾಗೃತಿ ಘೋಷಣೆಗಳೊಂದಿಗೆ ಕಾರ್ಯಕ್ರಮ ವಿನೂತನವಾಗಿ ಆರಂಭವಾಯಿತು.

ಸ್ತ್ರೀಶಕ್ತಿ ಸಂಜೀವಿನಿ ಒಕ್ಕೂಟದ ಸದಸ್ಯರು ತಮ್ಮ ಮನೆಗಳಿಂದ ತಯಾರಿಸಿ ತಂದಿದ್ದ ವಿವಿಧ ಪೌಷ್ಟಿಕ ಆಹಾರಗಳ ಪ್ರದರ್ಶನದೊಂದಿಗೆ ಸಾಮೂಹಿಕ ಸಹಭೋಜನವೂ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮಂಗಳೂರು, ಪುತ್ತೂರು, ಸುಳ್ಯದಲ್ಲಿ ಕೋರ್‌ ಮೆಗಾ ಸೇಲ್‌.. ರಿಫರ್ಬಿಶ್ಡ್ ಲ್ಯಾಪ್’ಟಾಪ್ ಖರೀದಿಗೆ ಸಿಗಲಿದೆ ಭರ್ಜರಿ ಆಫರ್ಸ್!!

ಮಂಗಳೂರು: ಪುತ್ತೂರು, ಸುಳ್ಯ ಹಾಗೂ ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿರುವ ಕೋರ್ ಟೆಕ್ನಾಲಜೀಸ್…