ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ, ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಹೋರಾಟಗಾರರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅ.10ರಂದು ಬೆಳ್ತಂಗಡಿಯಲ್ಲಿ ಬೃಹತ್ ಮೌನ ಮೆರವಣಿಗೆ ಹಾಗೂ ಗೌರವ ಅಭಿನಂದನಾ ಸಭೆ ನಡೆಯಿತು.
ಬೆಳಗ್ಗೆ 11 ಗಂಟೆಗೆ ಉಜಿರೆಯ ಕುಂಜರ್ಪದಿಂದ ಆರಂಭಗೊಂಡ ‘ನ್ಯಾಯದ ನಡಿಗೆ’ ಮೌನ ಮೆರವಣಿಗೆಯು ಬೆಳ್ತಂಗಡಿ ಮುಖ್ಯ ರಸ್ತೆಯ ಮೂಲಕ ಸಾಗಿ ತಾಲೂಕು ಕ್ರೀಡಾಂಗಣವನ್ನು ತಲುಪಿತು. ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತಿದ ಹೋರಾಟಗಾರರು, ನ್ಯಾಯವಾದಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಗೌರವ ಅಭಿನಂದನಾ ಸಭೆಯಲ್ಲಿ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಮಹಿಳಾ ಹೋರಾಟಗಾರ್ತಿ ಪ್ರಸನ್ನ ರವಿ, ಹೈಕೋರ್ಟ್ ನ್ಯಾಯವಾದಿ ಮೋಹಿತ್ ಕುಮಾರ್, ದೈವ ಚಿಂತಕ ತಮ್ಮಣ್ಣ ಶೆಟ್ಟಿ ಹಾಗೂ ಸೌಜನ್ಯಳ ತಾಯಿ ಕುಸುಮಾವತಿ ಮಾತನಾಡಿ, ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ನ್ಯಾಯವಾದಿಗಳಾದ ವಿಜಯ ವಾಸು ಪೂಜಾರಿ, ನವೀನ್ ಕುಮಾರ್, ದಿನೇಶ್ ಗಾಣಿಗ ಕುಂದಾಪುರ, ನೀತಿ ತಂಡದ ಜಯಂತ್ ಟಿ., ಅಹೋರಾತ್ರ, ಸುಪ್ರೀಂಕೋರ್ಟ್ ನ್ಯಾಯವಾದಿ ಶೇಖರ್ ಜಿ. ದೇವಸ್ಯ ಅವರ ಸಹೋದರ ಕೃಷ್ಣಪ್ಪ ಗೌಡ ದೇವಸ್ಯ ಹಾಗೂ ಮುಂಬೈನಲ್ಲಿ ಸೌಜನ್ಯ ಪರ ಜನರನ್ನು ಒಗ್ಗೂಡಿಸಿದ ಸುರೇಶ್ ಎಯ್ಯಾಡಿ ಉಪಸ್ಥಿತರಿದ್ದರು.
ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.






















