ಪುತ್ತೂರು: ದೇಶದ ಶೇ.54 ಭೂಮಿ ಕೇವಲ ಶೇ.7 ಜನರ ಕೈಯ್ಯಲ್ಲಿದೆ. ಭೂಮಿಯೇ ಇಲ್ಲದ 10 ಕೋಟಿ ಜನ ದೇಶದಲ್ಲಿದ್ದಾರೆ. ಈಗಲೂ ಕಾರಂತರ ತುಡಿತ ಜೀವಂತವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಶನಿವಾರ ಪುತ್ತೂರು ಬಾಲವನದಲ್ಲಿ ನಡೆದ ಹಿರಿಯ ಸಾಹಿತಿ ಡಾ. ಕೆ. ಶಿವರಾಮ ಕಾರಂತರ 125ನೇ ಜನ್ಮ ದಿನಾಚಣೆ ಮತ್ತು ಡಾ.ಶಿವರಾಮ ಕಾರಂತರ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ನೆಲದ ಸಮಸ್ಯೆ, ಪರಿಸರ, ಮಹಿಳಾವಾದ ಮತ್ತು ದಲಿತಪರ ಚಿಂತನೆ ಈ 4 ಅಂಶಗಳಲ್ಲಿ ಕಾರಂತರು ಪ್ರತಿಪಾದಿಸಿದ ಅಂಶಗಳು ಈಗ ಮಾತ್ರವಲ್ಲ ಇನ್ನು ನೂರು ವರ್ಷಕ್ಕೂ ಚರ್ಚೆಯ ವಸ್ತುವಾಗಿ ಕೊಂಡೊಯ್ಯಬಲ್ಲಷ್ಟು ಶಕ್ತಿಶಾಲಿಯಾಗಿವೆ. ಪರಿಸರ ಎಂದರೆ ಕೇವರ ಮರಗಿಡಗಳ ಸಂಖ್ಯೆಯಲ್ಲ, ಅದು ಜೈವಿಕ ಅನುಭೂತಿಯಾಗಿದೆ ಎಂದು ಕಾರಂತರು ಹೇಳಿದ್ದರು. ಈ ಮಣ್ಣಿನ ಮೂಲ ಗುರಿಕಾರರಿಂದ ನೆಲವನ್ನು ಕಸಿದುಕೊಂಡ ಬಗ್ಗೆ ಕಾರಂತರು ಪರಿಣಾಮಕಾರಿಯಾಗಿ ಚಿತ್ರಿಸಿದ್ದರು. ಭೂಸುಧಾರಣೆ ಕಾನೂನಿನ ಮೂಲಕ ಉಳುವವರು ಭೂಮಿ ಪಡೆದರೆ ಈಗ ಮತ್ತೆ ಬಹುರಾಷ್ಟ್ರೀಯ ಕಂಪನಿಗಳು ಬಡವರ ಜಮೀನುಗಳನ್ನು ಆಪೋಷಣ ಮಾಡುತ್ತಿವೆ. ನೆಲದ ಸಮಸ್ಯೆ ಜೀವಂತವಾಗಿದೆ ಎಂದರು.
70ರ ದಶಕದಲ್ಲಿ ಹುಟ್ಟಿಕೊಂಡ ದಲಿತಪರ ಮತ್ತು ಮಹಿಳಾ ಪರ ಚಿಂತನೆಯ ಮೂಲವೂ ಕಾರಂತರದಲ್ಲಿದೆ. ಕಾರಂತರು ಸಮಾಜಕ್ಕೆ ನೀಡುತ್ತಿದ್ದ ಸ್ಪಂದನೆ ಅದ್ಭುತವಾದುದು ಎಂದ ಅವರು, ಮುಂದಿನ ನೂರು ವರ್ಷಕ್ಕೆ ಬೇಕಾಗುವಷ್ಟು ಗಟ್ಟಿಯಾದ ತಳಹದಿ ಡಾ.ಕೆ. ಶಿವರಾಮ ಕಾರಂತರ ಸಾಹಿತ್ಯ ಮತ್ತು ಚಿಂತನೆಗಳಲ್ಲಿ ಅಡಗಿದೆ. ಕುವೆಂಪು ಮತ್ತು ಕಾರಂತರು ಎರಡು ಕಣ್ಣುಗಳಿದ್ದಂತೆ ಎಂದರು.
ಡಾ.ಕಾರಂತರ ಪುತ್ರಿ ಕ್ಷಮಾ ರಾವ್ ಮಾತನಾಡಿ, ತಮ್ಮ ಸಮಕಾಲೀನ ಚಿಂತಕರು, ಸಾಹಿತಿಗಳಿಗಿಂತ ಕಾರಂತರು 50 ವರ್ಷ ಮುಂದಿದ್ದರು. ದೀರ್ಘಕಾಲೀನ ಚಿಂತನೆ ಅವರದಾಗಿತ್ತು. ನಮ್ಮನ್ನು ಕಾರಂತರು 6ನೇ ತರಗತಿಗೆ ಶಾಲೆಗೆ ಸೇರಿಸಿದ್ದರು. ಅಲ್ಲಿಯವರೆಗೆ ನಾವು ಬಾಲವನದಲ್ಲಿ ಪ್ರಕೃತಿಯ ಮಧ್ಯೆ ಕಾರಂತರಿಂದ ಜೀವನ ಪಾಠ ಕಲಿತಿದ್ದೆವು. ಅವರ ಜೆತಗಿನ ಪ್ರವಾಸವೂ ನಮಗೆ ಶಿಕ್ಷಣವಾಗಿತ್ತು ಎಂದರು.
ಪ್ರಶಸ್ತಿ ಪ್ರದಾನ:
ಡಾ.ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿಯನ್ನು ಪರಿಸರ ಸಂರಕ್ಷöಣೆಗೆ ಕೊಡುಗೆ ನೀಡಿದ ಪುತ್ತೂರು ಮಾಸ್ಟರ್ ಪ್ಲಾನರಿ ಸಂಸ್ಥೆಯ ಎಸ್.ಕೆ. ಆನಂದ ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು.
ಕೃತಜ್ಞತೆ ಸಲ್ಲಿಸಿದ ಆನಂದ ಕುಮಾರ್, ನುಡಿದಂತೆ ನಡೆದ ಮತ್ತು ನಡೆದಂತೆ ನುಡಿದ ಅದ್ಭುತ ಶಕ್ತಿ ಡಾ.ಕಾರಂತರು. ಮರಗಳನ್ನು ನಾಶ ಮಾಡುವುದು ಕಾರಂತರಿಗೆ ಇಷ್ಟವಿರಲಿಲ್ಲ. ಇದರಿಂದ ಪ್ರೇರಿತನಾಗಿ ನಾನು ಕಾಂಕೂಡ್ ಮಾದರಿ ಆವಿಷ್ಕಾರ ಮಾಡಿದೆ. ಕಾಂಕೂಡ್ ಪೀಠೋಪಕರಣ ಮತ್ತು ಕಟ್ಟಡ ಸಲಕರಣೆಗಳು ಪ್ರಸಿದ್ಧಿಗೊಂಡ ಕಾರಣ ಲಕ್ಷಾಂತರ ಮರಳನ್ನು ಉಳಿಸಿದಂತಾಗಿದೆ. ಬಡವನಾಗಿ ಹುಟ್ಟುವುದು ವ್ಯಕ್ತಿಯ ತಪ್ಪಲ್ಲ. ಆದರೆ ಬಡವನಾಗಿಯೇ ಸಾಯುವುದು ಮಾತ್ರ ಆತನ ತಪ್ಪು ಎಂದರು.
2 ಕೋಟಿಯಲ್ಲಿ ಅಭಿವೃದ್ಧಿ:
ಸಮಾರಂಭದ ಅಧ್ಯಕ್ಷöತೆ ವಹಿಸಿದ್ದ ಶಾಸಕ ಅಶೋಕ್ ರೈ ಮಾತನಾಡಿ, 2 ಕೋಟಿ ರೂ. ವೆಚ್ಚದಲ್ಲಿ ಬಾಲವನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಯೋಗ, ಸಾಹಿತ್ಯ ರಚನೆ ಮತ್ತು ಧ್ಯಾನಕ್ಕೆ ಪೂರಕವಾಗಿ ಧ್ಯಾನ ಮಂದಿರ ನಿರ್ಮಿಸಲಾಗುವುದು. ಪ್ರತ್ಯೇಕ 50 ಲಕ್ಷö ವೆಚ್ಚದಲ್ಲಿ ವಾಕಿಂಗ್ ಪಥ ಮತ್ತು ದೀಪಾಲಂಕಾರ ಮಾಡಲಾಗುವುದು. ಬಾಲವನ ಅಭಿವೃದ್ಧಿ ವೇಳೆ ಇಲ್ಲಿನ ಪರಿಸರಕ್ಕೆ ಧಕ್ಕೆ ಉಂಟು ಮಾಡುವುದಿಲ್ಲ ಎಂದರು.
ಪ್ರಶಸ್ತಿ ಪುರಸ್ಕೃತ ಎಸ್.ಕೆ. ಆನಂದ ಕುಮಾರ್ ಬಗ್ಗೆ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನಾರಾಯಣ ಭಟ್ ಮಾತನಾಡಿದರು.
ಕಾರಂತ ವೃತ್ತಕ್ಕೆ ಪುತ್ತೂರು ಉಮೇಶ್ ನಾಯಕ್ ಒತ್ತಾಯ:
ಪುತ್ತೂರಿನ ಪ್ರಧಾನ ಪ್ರವೇಶ ಭಾಗದಲ್ಲಿ ಶಿವರಾಮ ಕಾರಂತರ ಹೆಸರಿನಲ್ಲಿ ಸುಂದರ ವೃತ್ತ ನಿರ್ಮಿಸಿ ಕಾರಂತರ ಪ್ರತಿಮೆ ಸ್ಥಾಪಿಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಒತ್ತಾಯಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷö ತಾರಾನಾಥ ಗಟ್ಟಿ ಕಾಪಿಕಾಡ್, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷö ಟಿ.ಎಂ. ಶಹೀದ್ ತೆಕ್ಕಿಲ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷö ಉಮಾನಾಥ ಶೆಟ್ಟಿ, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ, ಸುದಾನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರೆ. ವಿಜಯ ಹಾರ್ವಿನ್, ಬಾಲವನ ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರತಿಮಾ ಹೆಗ್ಡೆ, ದತ್ತಾತ್ರೇಯ ರಾವ್, ಸ್ವಾತಿ ಜೆ. ರೈ, ಶಿವಪ್ರಸಾದ್ ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಸಹಾಯಕ ಕಮಿಷನರ್ ಸ್ಟೆಲ್ಲ ವರ್ಗೀಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಡಾ.ಹರಿಪ್ರಸಾದï ಕಾರ್ಯಕ್ರಮ ನಿರ್ವಹಿಸಿದರು. ಪವಿತ್ರ ರೂಪೇಶ್ ತಂಡದವರು ನಾಡಗೀತೆ ಹಾಡಿದರು. ಬಾಲವನ ಕಾರ್ಯಕ್ರಮ ಸಂಯೋಜಕರಾದ ರಮೇಶ್ ಉಳಯ ಮತ್ತು ಜಗನ್ನಾಥ್ ಅರಿಯಡ್ಕ ಸಹಕರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಡಾ.ಶಿವರಾಮ ಕಾರಂತರ ಬಾಲವನ ಅಭಿವೃದ್ಧಿ ಸಮಿತಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.






















