ಮಂಗಳೂರು: ಭಕ್ತಿಪೂರ್ಣ ಮಂತ್ರಘೋಷಗಳು, ಸಾಂಪ್ರದಾಯಿಕ ಸಂಗೀತ ಮತ್ತು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಭಾನುವಾರ ಶಾರದಾ ಮಾತೆ ಮತ್ತು ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ, ಐತಿಹಾಸಿಕ ಮಂಗಳೂರು ದಸರಾ ಹಿನ್ನೆಲೆಯ ನವರಾತ್ರಿ ಸಂಭ್ರಮಕ್ಕೆ ವೈಭವದ ಚಾಲನೆ ದೊರೆಯಿತು.
ಕೇಂದ್ರದ ಮಾಜಿ ಸಚಿವ ಹಾಗೂ ಕುದ್ರೋಳಿ ದೇವಾಲಯದ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ, ಕೊರಗಪ್ಪ ಸಭಾಭವನದ ಭವ್ಯ ದರ್ಬಾರ್ ಮಂಟಪದಲ್ಲಿ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು ಹಾಗೂ ವಿದ್ಯಾದೇವತೆ ಶ್ರೀ ಶಾರದಾ ಮಾತೆಯ ಆಕರ್ಷಕ ಮೂರ್ತಿಗಳ ಪ್ರತಿಷ್ಠಾಪನೆಯು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಕಳೆದ 35 ವರ್ಷಗಳ ಇತಿಹಾಸದಲ್ಲಿ ವಿನೂತನ ಅರಮನೆ ವಿನ್ಯಾಸದ ದರ್ಬಾರ್ ಮಂಟಪದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗಿದ್ದು, ಭಕ್ತರ ಆಕರ್ಷಣೆಗೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಶಾಸಕ ಡಿ, ವೇದವ್ಯಾಸಕಾಮತ್ ಅವರು ದೀಪ ಪ್ರಜ್ವಲನೆ ಮಾಡಿದರು. ಸಹಸ್ರಾರು ಮಂದಿ ಭಕ್ತರು ಪ್ರತಿಷ್ಠಾಪನಾ ಪ್ರಕ್ರಿಯೆಗೆ ಸಾಕ್ಷಿಯಾಗಿ ದೇವರ ದರ್ಶನ ಪಡೆದರು.
ಮಂಗಳೂರು ದಸರಾದಲ್ಲಿ ಹಲವು ವಿಶೇಷತೆ:
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ ಅವರು, ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ, ಆಡಳಿತ ಹಾಗೂ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಈ ಬಾರಿಯ ಮಂಗಳೂರು ದಸರಾ ಆರಂಭವಾಗಿದೆ. ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಇದರಲ್ಲಿ ಜೋಡಿಸಿಕೊಂಡಿದ್ದೇವೆ. ಕಳೆದ ಬಾರಿ ಆರಂಭಿಸಿದ ಮಕ್ಕಳ ದಸರಾ ಮತ್ತು ಕಿನ್ನಿಪಿಲಿ ಕಾರ್ಯಕ್ರಮವನ್ನು ಈ ಬಾರಿಯೂ ಮುಂದುವರಿಸಲಾಗುತ್ತಿದೆ. ಮೊದಲ ಬಾರಿಗೆ ಮಹಿಳಾ ದಸರಾ ಆಯೋಜಿಸಲಾಗುತ್ತಿದ್ದು, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳನ್ನು ನಡೆಸಲಾಗುವುದು. ಭಕ್ತರ ಬೇಡಿಕೆಯಂತೆ ಈ ಬಾರಿ ಅ.20ರಂದು ಅಕ್ಷರಾಭ್ಯಾಸ ಕಾರ್ಯಕ್ರಮವೂ ಜರುಗಲಿದೆ ಎಂದರು.
ಸಿಎಂ ಭೇಟಿ ನಿರೀಕ್ಷೆ:
ಪೂರ್ವ ನಿಗದಿಯಾದಂತೆ ಅ.12ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳೂರು ದಸರಾ ಉದ್ಘಾಟಿಸಬೇಕಿತ ಆದರೆ ತುರ್ತು ಕಾರಣಗಳಿಗಾಗಿ ದೆಹಲಿ ಭೇಟಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಕರಾವಳಿ ಪ್ರವಾಸ ರದ್ದಾಗಿದೆ. ಅ.15 ಅಥವಾ 16ರಂದು ಸಿಎಂ ಆಗಮಿಸುವ ನಿರೀಕ್ಷೆಯಿದೆ. ಈ ವೇಳೆ ವಿವಿಧ ಸಚಿವರು, ಧಾರ್ಮಿಕ-ಸಾಮಾಜಿಕ ಮುಖಂಡರೂ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ಪದ್ಮರಾಜ್ ಆರ್. ಪೂಜಾರಿ ತಿಳಿಸಿದರು.
ಅ. 21ರಂದು ವೈಭವದ ಶೋಭಾಯಾತ್ರೆ:
ಅಕ್ಟೋಬರ್ 21ರಂದು ಸಂಜೆ ವಿಸರ್ಜನಾ ಪೂಜೆ ನಡೆಯಲಿದ್ದು, ಬಳಿಕ ಆಕರ್ಷಕ ಸ್ತಬ್ಧ ಚಿತ್ರಗಳು, ಸಾಂಸ್ಕೃತಿಕ ಕಲಾತಂಡಗಳು ಮತ್ತು ಹುಲಿವೇಷಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ವೈಭವದ ದಸರಾ ಶೋಭಾಯಾತ್ರೆ ನಡೆಯಲಿದೆ. ಮರುದಿನ ಅ.22ರಂದು ಬೆಳಗ್ಗೆ ದೇವಸ್ಥಾನದ ಕಲ್ಯಾಣಿಯಲ್ಲಿ ಎಲ್ಲ ಮೂರ್ತಿಗಳನ್ನು ಸಂಪ್ರದಾಯ ಬದ್ಧವಾಗಿ ಜಲಸ್ತಂಭನ ಮಾಡಲಾಗುತ್ತದೆ.
























