ಪುತ್ತೂರು: ಕಟ್ಟಡ ನಿರ್ಮಾಣವಾದ ಬಳಿಕ, ಯಶಸ್ಸಾದ ಬಳಿಕ ಅನೇಕರು ಶಹಬ್ಬಾಶ್ ಹೇಳ್ತಾರೆ. ಆದರೆ ಏನೂ ಇಲ್ಲದೇ ಇದ್ದಾಗ ಪುತ್ತೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೀರಲ್ಲವೇ. ಆ ಕೊಡುಗೆಗೆ ನಿಮಗೆ ಅಭಿನಂದನೆ. ನಿರ್ಮಾಣದ ಸಂದರ್ಭ ಮನಸ್ತಾಪ ಸಹಜ. ಆದರೆ ಇಲ್ಲಿ ಕಟ್ಟಡ ನಿರ್ಮಾಣವಾದ ಬಳಿಕವೂ ಉತ್ತಮ ಬಾಂಧವ್ಯ ಹೊಂದಿದ್ದೀರಿ. ನಿಮ್ಮ ಬೆಳಗಾವಿಯ ಯೋಜನೆಗೆ ಪುತ್ತೂರಿನ ಈ ಯೋಜನೆ ಮಾರ್ಗದರ್ಶಿ ಆಗಿದೆ ಎನ್ನುವುದು ಖುಶಿಯ ವಿಚಾರ ಎಂದು ಶಾಸಕ ಅಶೋಕ್ ಕುಮಾರ್ ರೈರವರು ಹೇಳಿದರು.
2016, ಜನವರಿ 9ರಂದು ಹಿಂದುಸ್ಥಾನ್ ಪ್ರಮೋಟರ್ಸ್ ಮತ್ತು ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್, ಹಿಂದೂಸ್ತಾನ್ ಗ್ರೂಪ್ ಆಫ್ ಕಂಪೆನಿ ಇದರ ಚೇರ್ಮನ್ ಡಾ.ಮುಹಮ್ಮದ್ ಇಬ್ರಾಹಿಂರವರ ನೇತೃತ್ವದಲ್ಲಿ ಪ್ರೈವೇಟ್ ಪಬ್ಲಿಕ್ ಪ್ರಾಜೆಕ್ಟ್(ಪಿಪಿಪಿ)ನಡಿ ಪುತ್ತೂರಿನ ಹೃದಯಭಾಗದಲ್ಲಿ 280 ವಾಣಿಜ್ಯ ಸಂಕೀರ್ಣ, ಸುಸಜ್ಜಿತ ಲಾಡ್ಜ್, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣವನ್ನೊಳಗೊಂಡ ಸುಸಜ್ಜಿತ ಹೈಟೆಕ್ ಪುತ್ತೂರು `ಕೋಟಿ-ಚೆನ್ನಯ’ ಬಸ್ಸು ನಿಲ್ದಾಣಕ್ಕೆ ದಶಮಾನೋತ್ಸವದ ವಾರ್ಷಿಕೋತ್ಸವದ ಸಂಭ್ರಮವಾಗಿದ್ದು, ಜ. 17ರಂದು ಬಸ್ಸು ನಿಲ್ದಾಣದ ಆವರಣದಲ್ಲಿ ನಡೆದ ದಶಮಾನೋತ್ಸವ ಸಂಭ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಯೋಜನೆ ಜಾರಿಗೆ ಬರುವಾಗ ಸಹಜವಾಗಿ ಮನಸ್ತಾಪ ಬೆಳೆಯುತ್ತದೆ. ಆದರೆ ಇಲ್ಲಿ ಕಟ್ಟಡ ನಿರ್ಮಾನವಾಗುವಾಗ ಅಥವಾ ನಂತರವೂ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದೀರಿ. ಇಂದು ಕೂಡ ಎಲ್ಲರನ್ನು ಜೊತೆಗೆ ಸೇರಿಸಿಕೊಂಡು, ಪುತ್ತೂರಿಗೆ ಮಾದರಿ ಕಾರ್ಯಕ್ರಮವನ್ನು ಹಾಕಿಕೊಟ್ಟಿದ್ದೀರಿ ಎಂದರು.
ಪುತ್ತೂರು ದುಬೈ ಆಗಬೇಕು ಅನ್ನುವ ಕಲ್ಪನೆ-ಸಂಜೀವ ಮಠಂದೂರು
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, 15 ವರ್ಷದ ಹಿಂದೆ ಇಲ್ಲಿ ಬಸ್ ಡಿಪೋ ಹಾಗೂ ಬಸ್ಸು ತಂಗುದಾಣವಿತ್ತು. ಅಂದಿನ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಸಾರಿಗೆ ಸಚಿವ ಆರ್.ಅಶೋಕ್, ನಗರಸಭಾ ಸದಸ್ಯೆ ಮಲ್ಲಿಕಾ ಪ್ರಸಾದ್‌ರವರ ಮುತುವರ್ಜಿಯಿಂದ ಪಿಪಿಪಿ ಯೋಜನೆಯಡಿಯಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಪುತ್ತೂರು ಅಭಿವೃದ್ಧಿ ಆಗಬೇಕು, ಪುತ್ತೂರು ದುಬೈ ಆಗಬೇಕು ಅನ್ನುವ ಕಲ್ಪನೆ ಹಿಂದೂಸ್ಥಾನ್ ಪ್ರಮೋರ‍್ಸ್ ಗ್ರೂಪ್‌ನ ಎಂ.ಡಿ ಮುಹಮ್ಮದ್ ಇಬ್ರಾಹಿಂರವರಲ್ಲಿತ್ತು. ಅನ್ಯಾಯದ ವಿರುದ್ಧ ಹೋರಾಡಿದ ಕೋಟಿ-ಚೆನ್ನಯರ ಹೆಸರನ್ನು ಈ ಬಸ್ಸು ನಿಲ್ದಾಣಕ್ಕೆ ನೀಡಿರುವುದು ಉತ್ತಮ ನಡೆಯಾಗಿದೆ ಎಂದರು.
ಬೆಳೆಯುತ್ತಿರುವ ಪುತ್ತೂರಿನ ಮುಕುಟಕ್ಕೆ ಹೈಟೆಕ್ ಬಸ್ಸು ನಿಲ್ದಾಣ ಗರಿ ಪೋಣಿಸಿದೆ-ಶಕುಂತಳಾ ಶೆಟ್ಟಿ
ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿನ ಮುಕುಟಕ್ಕೆ ಈ ಹೈಟೆಕ್ ಬಸ್ಸು ನಿಲ್ದಾಣ ಗರಿ ಪೋಣಿಸಿದೆ ಎಂದರೆ ತಪ್ಪಾಗದು. ಪುತ್ತೂರಿನ ಹೃದಯಭಾಗದಲ್ಲಿನ ವಿಸ್ತಾರವಾದ ಜಾಗದಲ್ಲಿ ಹಿಂದೂಸ್ಥಾನ್ ಪ್ರಮೋರ‍್ಸ್ ಸಂಸ್ಥೆಯ ಎಂ.ಡಿ ಡಾ.ಮುಹಮದ್ ಇಬ್ರಾಹಿಂರವರು ಕಾಸರಗೋಡಿನಿಂದ ಬಂದು ಕೋಟಿ ಕೋಟಿ ಹಣ ಸುರಿದು ಸುಂದರವಾದ ಬಸ್ಸು ನಿಲ್ದಾಣವನ್ನು ನಿರ್ಮಿಸಿಕೊಟ್ಟಿರುವುದು ಪುತ್ತೂರಿನ ಜನತೆಗೆ ಹೆಮ್ಮೆಯ ವಿಚಾರವಾಗಿದೆ. ಈಗಾಗಲೇ ಈ ಬಸ್ಸು ನಿಲ್ದಾಣಕ್ಕೆ 10 ವರ್ಷ ಪೂರೈಸಿದ್ದು ಇದು ಮುಂದೆ ಐವತ್ತು ವರ್ಷವನ್ನು ಪೂರೈಸಲಿ ಎಂದರು.
ಹೊರಭಾಗದಲ್ಲಿ ರಸ್ತೆ ಇನ್ನಷ್ಟು ವಿಸ್ತಾರವಾಗಿದ್ದಲ್ಲಿ ನಿಲ್ದಾಣಕ್ಕೆ ಸಹಕಾರಿ-ಮಹಮದ್ ಆಲಿ
ದ.ಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಮಹಮ್ಮದ್ ಅಲಿ ಮಾತನಾಡಿ, 1970ನೇ ವರ್ಷದಲ್ಲಿ ಮಾರ್ಗದ ಮಟ್ಟದಲ್ಲಿ ಸಣ್ಣ ಕಟ್ಟಡದ ಬಸ್ಸು ನಿಲ್ದಾಣವಿತ್ತು. ವಿನಯಕುಮಾರ್ ಸೊರಕೆ ಶಾಸಕರಾಗಿದ್ದ ಸಂದರ್ಭದಲ್ಲಿ ಇಲ್ಲಿ ಸುಸಜ್ಜಿತ ಬಸ್ಸುನಿಲ್ದಾಣ ನಿರ್ಮಾಣವಾಗಿತ್ತು. ಕಳೆದ ಹತ್ತು ವರ್ಷದ ಹಿಂದೆ ಹಿಂದೂಸ್ಥಾನ್ ಡೆವಲಪರ್ಸ್ ಸಂಸ್ಥೆಯಿAದ ಪಿಪಿಟಿ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣವುಳ್ಳ ಸುಸಜ್ಜಿತ ಬಸ್ಸುನಿಲ್ದಾಣದ ನಿರ್ಮಾಣಗೊಂಡಿತು. ನಿರ್ಮಾಣ ಸಂದರ್ಭದಲ್ಲಿ ಹಲವು ಅಡ್ಡಿ, ಆತಂಕಗಳಿದ್ದರೂ ಅವೆಲ್ಲವನ್ನು ಮೆಟ್ಟಿ ನಿಂತು ಕಟ್ಟಡದ ನಿರ್ಮಾಣವಾಗಿದೆ. ಬಸ್ ನಿಲ್ದಾಣದಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ. ಹೊರಭಾಗದಲ್ಲಿ ರಸ್ತೆ ಇನ್ನಷ್ಟು ವಿಸ್ತಾರ ಆದರೆ, ಬಸ್ ನಿಲ್ದಾಣಕ್ಕೆ ಸಹಕಾರಿ ಆಗಲಿದೆ ಎಂದರು.
ಕೆಲಸ ಮಾಡುವುದು ಮುಖ್ಯವಲ್ಲ, ಕೆಲಸದಲ್ಲಿ ಗುಣಮಟ್ಟ ಬಹಳ ಮುಖ್ಯ-ಚಂದ್ರಹಾಸ ಶೆಟ್ಟಿ
ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿ ಹತ್ತು ವರ್ಷ ಹೇಗೆ ಕಳೆದು ಹೋಯಿತು ಎಂಬುದೇ ಗೊತ್ತಾಗುತ್ತಿಲ್ಲ. ಸರಳ, ಸಜ್ಜನಿಕೆಯ, ನಗುಮುಖದ ಡಾ.ಮುಹಮದ್ ಇಬ್ರಾಹಿಂರವರ ಗುಣಮಟ್ಟದ ಸೇವೆಯನ್ನು ಮೆಚ್ಚುವಂತಹುದು. ಕೆಲಸ ಮಾಡುವುದು ಮುಖ್ಯವಲ್ಲ, ಕೆಲಸದಲ್ಲಿ ಗುಣಮಟ್ಟತೆ ಬಹಳ ಮುಖ್ಯ. ಮುಂದಿನ ದಿನಗಳಲ್ಲಿ ಇಂತಹ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸುವ ಅವಕಾಶಗಳು ಸದಾ ಸಿಗಲಿ ಎಂದರು.
ಮುಂದಿನ ಕನಸಿನ ಪುತ್ತೂರಿಗೆ ಮೆಡಿಕಲ್ ಕಾಲೇಜು ಸ್ಥಾಪನೆ ಸಾಕ್ಷಿ-ಹೇಮನಾಥ ಶೆಟ್ಟಿ
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ವಾಣಿಜ್ಯ ಸಂಕೀರ್ಣವನ್ನೊಳಗೊAಡ ಈ ಬಸ್ಸು ನಿಲ್ದಾಣ ಒಳ್ಳೆಯ ವ್ಯವಹಾರ ಉದ್ದಿಮೆಯನ್ನು ಜನರಿಗೆ ಕಲ್ಪಿಸಿಕೊಟ್ಟಿದೆ. ಬಹಳಷ್ಟು ಊರುಗಳಿಗೆ ಈ ಬಸ್ಸು ನಿಲ್ದಾಣದಿಂದ ಹೊರಡುವುದು, ಬರುವುದು ಆಗಿದ್ದು ಇದು ಪುತ್ತೂರಿಗೆ ಮಾತ್ರ ಸೀಮಿತವಾಗದೆ ಇತರ ಭಾಗಗಳಲ್ಲೂ ಈ ಸಂಕೀರ್ಣ ಹೆಸರು ಗಳಿಸಿದೆ. ಈ ಕೋಟಿ-ಚೆನ್ನಯ ಬಸ್ಸು ನಿಲ್ದಾಣದಿಂದ ಪುತ್ತೂರಿಗೆ ಹೆಸರು ತಂದು ಕೊಟ್ಟಿದೆ ನಿಜ. ಮುಂದಿನ ಕನಸಿನ ಪುತ್ತೂರಿಗೆ ಮೆಡಿಕಲ್ ಕಾಲೇಜು ಸ್ಥಾಪನೆ ಸಾಕ್ಷಿಯಾಗಲಿದೆ ಎಂದರು.
ಮುಹಮ್ಮದ್ ಇಬ್ರಾಹಿಂರವರು ಉದ್ಯಮಿ ಮಾತ್ರವಲ್ಲ, ಕೊಡುಗೈ ದಾನಿ-ಅಶ್ರಫ್ ಕಲ್ಲೇಗ
ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ, ಪುತ್ತೂರಿನ ಹೃದಯಭಾಗದಲ್ಲಿ ಸುಸಜ್ಜಿತ ಕೋಟಿ ಚೆನ್ನಯ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿದ ಕೀರ್ತಿ ಹಿಂದೂಸ್ತಾನ್ ಡೆವಲಪರ್ಸ್ ಮಾಲಕ ಮುಹಮ್ಮದ್ ಇಬ್ರಾಹಿಂರವರಿಗೆ ಸಲ್ಲುತ್ತದೆ. ಮುಹಮ್ಮದ್ ಇಬ್ರಾಹಿಂರವರು ಉದ್ಯಮಿ ಮಾತ್ರವಲ್ಲ, ಕೊಡುಗೈ ದಾನಿ ಕೂಡ. ಅವರತ್ರ ಯಾರೇ ಸಹಾಯ ಕೇಳಿ ಬಂದರೂ ಅವರನ್ನು ಖಾಲಿ ಕೈಯಲ್ಲಿ ಕಳುಹಿಸೋದಿಲ್ಲ. ಪುತ್ತೂರಿಗೆ ದೊಡ್ಡ ಕಾಂಪ್ಲೆಕ್ಸ್ ನೀಡಿ ಇಲ್ಲಿನ ಜನತೆಗೆ ದೊಡ್ಡದಾದ ಅವಕಾಶವನ್ನು ತೆರೆದಿಟ್ಟಿದ್ದು ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದರು.
ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿರುವುದು ಪುತ್ತೂರಿಗೆ ಬೆಂಚ್‌ಮಾರ್ಕ್-ಕೃಷ್ಣಪ್ರಸಾದ್ ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಈ ಭಾಗದಲ್ಲಿನ ಕಟ್ಟಡ ಪ್ರಾಋಂಭವಾದಾಗಿನಿAದ ತಾನು ಇಲ್ಲಿ ತೊಡಗಿಸಿಕೊಂಡಿರುವೆ. ಕಟ್ಟಡದ ಭೂಮಿಪೂಜೆ ಆದ ಸಂದರ್ಭದಲ್ಲಿ ತಂತ್ರಿಗಳಿಂದ ಪ್ರಥಮವಾಗಿ ಪ್ರಸಾದ ತೆಗೆದುಕೊಂಡಿರುವುದು ಹೆಮ್ಮೆ ಎನಿಸಿದೆ. ಡಾ.ಮುಹಮದ್ ಇಬ್ರಾಹಿಂರವರು ಎಲ್ಲರೊಂದಿಗೆ ಆತ್ಮೀಯವಾಗಿ ಗುರುತಿಸಿಕೊಂಡು ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿರುವುದು ಪುತ್ತೂರಿಗೆ ಬೆಂಚ್‌ಮಾರ್ಕ್ ಎನಿಸಿದೆ ಎಂದರು.
ಮಂಗಳೂರೋ, ಬೆಂಗಳೂರೋ ಎಂಬ ಫೀಲ್ ಬರುವಂತಿದೆ-ಅಶ್ರಫ್ ಬಾವ
ತಾಲೂಕು ಎಸ್.ಡಿ.ಪಿ.ಐ ಅಧ್ಯಕ್ಷ ಅಶ್ರಫ್ ಬಾವಾ ಮಾತನಾಡಿ, ನೋಡ ನೋಡುತ್ತಿದ್ದಂತೆ ಹತ್ತು ವರ್ಷ ಹೇಗೆ ಕಳೆದು ಹೋಯಿತು ಎಂಬುದೇ ಗೊತ್ತಾಗದು. ಒಂದು ಉತ್ತಮ ಕಟ್ಟಡ ಇದಾಗಿದ್ದು ಒಳಗೆ ಹೋದರೆ ಮಂಗಳೂರೋ, ಬೆಂಗಳೂರೋ ಎಂಬ ಫೀಲ್ ಬರುವಂತಿದೆ ಎಂದರು.
ಕೇAದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಜಾದ್ ಅಬ್ದುಲ್ ರಹಿಮಾನ್ ಹಾಜಿ, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ, ಪೆನಿಸ್ಯುವೆಲ್ ಡೆವಲರ‍್ಸ್ ಸಂಸ್ಥೆಯ ಅಝೀಮ್ ಬೆಳಗಾವಿ, ಅಹಮ್ಮದ್ ಅಶ್ರಫ್ ಉಪ್ಪಳ ಸಹಿತ ಹಲವರು ಗಣ್ಯರು ಉಪಸ್ಥಿತರಿದ್ದರು. ಹಿಂದುಸ್ಥಾನ್ ಪ್ರಮೋಟರ್ಸ್ ಮತ್ತು ಡೆವಲಪರ್ಸ್ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಡಾ.ಶೇಖ್ ಬಾವಾ ಹಾಜಿ ಮಂಗಳೂರು ಸ್ವಾಗತಿಸಿ, ರಫೀಕ್ ಎಂ.ಕೆ ಮುಕ್ರಂಪಾಡಿ ವಂದಿಸಿದರು. ಹಿಂದೂಸ್ಥಾನ್ ಪ್ರಮೋರ‍್ಸ್ ಮತ್ತು ಡೆವಲರ‍್ಸ್ ಸಂಸ್ಥೆಯ ಮೊಹ್ಸಿನ್, ಹರೀಶ್ ನಾಯಕ್, ಝುಬೈರ್ ಕಬಕ, ಶರೀಫ್ ಬಲ್ನಾಡು, ಮುದಸ್ಸಿರ್, ಇಬ್ರಾಹಿಂ ಕನ್ಯಾನ, ಮೋನು ಬಪ್ಪಳಿಗೆ, ಬಶೀರ್ ಪರ್ಲಡ್ಕರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಫರ್ವಿಜ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರಿನ ಜನರ ಸಹಕಾರಕ್ಕೆ ಋಣಿಯಾಗಿದ್ದೇನೆ: ಡಾ.ಮುಹಮ್ಮದ್ ಇಬ್ರಾಹಿಂ
ಹಿಂದೂಸ್ಥಾನ್ ಪ್ರಮೋಟರ್ಸ್ ಮತ್ತು ಡೆವಲಪರ್ಸ್ ಪ್ರೈ ಲಿ. ವ್ಯವಸ್ಥಾಪಕ ನಿರ್ದೇಶಕ ಡಾ.ಮುಹಮ್ಮದ್ ಇಬ್ರಾಹಿಂ ಪಾವೂರು ಮಾತನಾಡಿ, ಹತ್ತು ವರ್ಷದ ಹಿಂದೆ ಪಿಪಿಪಿ ಮಾದರಿಯಲ್ಲಿ ಈ ಬಸ್ ನಿಲ್ದಾಣ ನಿರ್ಮಿಸುವ ಅವಕಾಶ ಸರಕಾರ ನನಗೆ ಕೊಟ್ಟಿತು. ಈ ಬಸ್ ನಿಲ್ದಾಣ ನಿರ್ಮಾಣ ಮಾಡುವಾಗ ಹಾಗೂ ಇಂದು ಕೂಡ ಪುತ್ತೂರಿನ ಜನರು ಬಹಳ ಸಹಕಾರ ನೀಡಿದ್ದು ಖಂಡಿತಾ ನಾನು ಋಣಿಯಾಗಿದ್ದು ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇನೆ. ಬೆಳಗಾವಿ ಕಾರ್ಪೊರೇಷನ್ ಮತ್ತು ಸ್ಮಾರ್ಟ್ ಸಿಟಿಯಿಂದ ಸುಸಜ್ಜಿತ ಕಟ್ಟಡ ನಿರ್ಮಾಣದ ಹೊಣೆಯಿದ್ದು ಬಹಳ ಸವಾಲು ಇದೆ. ಇದರ ವಿಸ್ತೀರ್ಣ ಸುಮಾರು 5 ಸಾವಿರ ಚದರ ಅಡಿಗಳಿದ್ದು 130 ಕೋಟಿ ರೂ.ನಲ್ಲಿ ನಿರ್ಮಾಣ ಆಗುತ್ತಿದೆ. ಬಳಿಕ ತುಮಕೂರಿನಲ್ಲಿಯೂ ಶೀಘ್ರ ಕಟ್ಟಡದ ನಿರ್ಮಾಣ ಮಾಡಲಿದ್ದೇವೆ.
ಸನ್ಮಾನ:
ಈ ಸಂದರ್ಭದಲ್ಲಿ ಹಿಂದೂಸ್ಥಾನ್ ಪ್ರಮೋಟರ್ಸ್ ಮತ್ತು ಡೆವಲಪರ್ಸ್ ಪ್ರೈ. ಲಿಮಿಟೆಡ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಹಿಂದೂಸ್ಥಾನ್ ಪ್ರಮೋಟರ್ಸ್ ಮತ್ತು ಡೆವಲಪರ್ಸ್ ಪ್ರೈ. ಲಿಮಿಟೆಡ್ ಎಂ.ಡಿ ಡಾ.ಮುಹಮ್ಮದ್ ಇಬ್ರಾಹಿಂ ಪಾವೂರು ಅವರು ಶಾಲು ಹೊದಿಸಿ ಸನ್ಮಾನಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ನಿಹಾದ್ ರೆಹಮಾನ್ ಹಾಗೂ ನಿಜಾಮ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು. ಅಮ್ಮ ಕಲಾವಿದರು ಕುಡ್ಲ ಅಭಿನಯಿಸುವ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ, ರಂಗ್‌ದ ರಾಜೆ ಸುಂದರ್ ರೈ ಮಂದಾರ ನಿರ್ದೆಶಿಸಿ ಅಭಿನಯಿಸಿದ `ಆನ್ ಮಗೆ’ ತುಳು ಹಾಸ್ಯಮಯ ನಾಟಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.























