tamanvi
ಅಪರಾಧ

ಮಂಗಳೂರು: ಗಂಗಾಧರ ಪಾಂಗಳ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: 2014ರಲ್ಲಿ ನಡೆದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮೊಗವೀರ ಸಮುದಾಯದ ಮುಖಂಡ ಗಂಗಾಧರ ಪಾಂಗಳ ಅವರ ಹತ್ಯೆ ಪ್ರಕರಣದಲ್ಲಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

maithri

ಜೀವಾವಧಿ ಶಿಕ್ಷೆಗೆ ಗುರಿಯಾದವರು ಸತೀಶ್ ಬೈಕಂಪಾಡಿ (58), ಹರೀಶ್ ಬೈಕಂಪಾಡಿ (60), ಭಾಸ್ಕರ್ ಬೈಕಂಪಾಡಿ (61) ಹಾಗೂ ಪುಷ್ಪರಾಜ್ (47).

ಪ್ರಕರಣದ ವಿವರದಂತೆ, ಬೈಕಂಪಾಡಿ ಮೊಗವೀರ ಮಹಾಸಭೆಯ ಸದಸ್ಯತ್ವದಿಂದ ಮೊದಲ ಆರೋಪಿ ಸತೀಶ್ ಬೈಕಂಪಾಡಿಯನ್ನು ಅಮಾನತುಪಡಿಸಲು ಗಂಗಾಧರ ಪಾಂಗಳ ಕಾರಣರಾಗಿದ್ದರು ಎಂಬ ದ್ವೇಷದಿಂದ ಆರೋಪಿಗಳು ಪೂರ್ವನಿಯೋಜಿತ ಸಂಚು ರೂಪಿಸಿದ್ದರು. ಬಳಿಕ ಬೊಲೆರೋ ವಾಹನದಲ್ಲಿ ಗಂಗಾಧರ ಪಾಂಗಳ ಅವರ ಸ್ಕೂಟರ್‌ಗೆ ಉದ್ದೇಶಪೂರ್ವಕವಾಗಿ ಹಿಂದಿನಿಂದ ಡಿಕ್ಕಿ ಹೊಡೆದು, ಅವರು ಕೆಳಗೆ ಬಿದ್ದ ಬಳಿಕ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು, ಸತೀಶ್ ಬೈಕಂಪಾಡಿ, ಹರೀಶ್ ಬೈಕಂಪಾಡಿ ಹಾಗೂ ಭಾಸ್ಕರ್ ಬೈಕಂಪಾಡಿಗೆ ಭಾರತೀಯ ದಂಡ ಸಂಹಿತೆಯ (IPC) ಕಲಂ 302, 120ಬಿ, 109 ಹಾಗೂ 34ರಡಿ ಜೀವಾವಧಿ ಶಿಕ್ಷೆ ಮತ್ತು ತಲಾ ₹15,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷದ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಿದೆ.

ಆರೋಪಿ ಪುಷ್ಪರಾಜ್‌ಗೆ IPC ಕಲಂ 302, 120ಬಿ ಹಾಗೂ 34ರಡಿ ಜೀವಾವಧಿ ಶಿಕ್ಷೆ ಮತ್ತು ₹15,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ ಒಂದು ವರ್ಷದ ಹೆಚ್ಚುವರಿ ಸಾದಾ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, IPC ಕಲಂ 201 ಜೊತೆಗೆ 34ರಡಿ ಎಲ್ಲಾ ಆರೋಪಿಗಳಿಗೆ ಎರಡು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ತಲಾ ₹1,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಒಂದು ತಿಂಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆ ಅನುಭವಿಸಬೇಕಿದೆ.

ನ್ಯಾಯಾಲಯವು ಒಟ್ಟು ₹60,000 ದಂಡದ ಪೈಕಿ ₹50,000 ಅನ್ನು ಮೃತ ಗಂಗಾಧರ ಪಾಂಗಳ ಅವರ ಪುತ್ರಿಗೆ ಪರಿಹಾರವಾಗಿ ನೀಡುವಂತೆ ಹಾಗೂ ಉಳಿದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸುವಂತೆ ಆದೇಶಿಸಿದೆ. ಪ್ರಕರಣದಲ್ಲಿ ಬಳಸಿದ್ದ ಬೊಲೆರೋ, ರಿಟ್ಜ್ ಹಾಗೂ ಮಾರುತಿ ಕಾರುಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ನಿರ್ದೇಶಿಸಿದೆ. ನ್ಯಾಯಾಲಯದ ಆದೇಶದಂತೆ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕರಾದ ಎನ್.ಆರ್. ಮುಕ್ರಿ, ಭಾಸ್ಕರ್ ರೈ ಹಾಗೂ ರವೀಶ್ ನಾಯಕ್ ಭಾಗಶಃ ನಡೆಸಿದ್ದು, ಬಳಿಕ ಲೋಕೇಶ್ ಎ.ಸಿ. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಾದ ಮಂಡಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

1 of 117