tamanvi
ಶಿಕ್ಷಣ

ಜ್ಞಾನ, ಪ್ರೀತಿಯ ಬೆಸುಗೆಯೇ ವಿವೇಕ | ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪದವೀಧರರ ಸಮಾರಂಭದಲ್ಲಿ ಡಾ| ಪೀಟರ್ ಪಾವ್ಲ್ ಸಲ್ದಾನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ; ಬದಲಾಗಿ ನಿಮ್ಮ ಜ್ಞಾನದ ದಿಗಂತಗಳು ಮತ್ತಷ್ಟು ವಿಸ್ತಾರಗೊಳ್ಳಬೇಕು. ನೀವು ಗಳಿಸಿರುವ ಜ್ಞಾನವೇ ಸಾಕು ಎಂದು ಎಂದಿಗೂ ತೃಪ್ತರಾಗಬೇಡಿ. ವಿಶ್ವವಿದ್ಯಾಲಯದಿಂದ ಹೊರಬರುವ ಹೊತ್ತಿಗೆ ನೀವು ಕಲಿತಿರುವ ಅನೇಕ ವಿಷಯಗಳು ಕಾಲಕ್ರಮೇಣ ಹಳೆಯದಾಗಬಹುದು. ಆದ್ದರಿಂದ ನಿರಂತರ ಕಲಿಕೆ ಮತ್ತು ಹೊಸ ಜ್ಞಾನವನ್ನು ಅರಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರೂ ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷರೂ ಆದ ಪರಮಪೂಜ್ಯ ಡಾ| ಪೀಟರ್‌ ಪಾವ್ಲ್‌ ಸಲ್ದಾನ ಹೇಳಿದರು.

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಶೈಕ್ಷಣಿಕ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿರುವ ಪ್ರಥಮ   ಪದವೀಧರರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಶೋಧನೆಯ ಮಹತ್ವವನ್ನು ಒತ್ತಿಹೇಳಿದ ಅವರು, ಸ್ಕೋಪಸ್ (Scopus) ಮುಂತಾದ ಪ್ರತಿಷ್ಠಿತ ಸೂಚ್ಯಂಕಗಳಲ್ಲಿ ಪ್ರಕಟವಾಗುವ ಸಂಶೋಧನಾ ಲೇಖನಗಳು ಸಮಾಜಕ್ಕೆ ಮಹತ್ವದ ಕೊಡುಗೆ ನೀಡುವಂತಿರಬೇಕು ಎಂದು ತಿಳಿಸಿದರು. ಸಂಶೋಧನೆ ಮತ್ತು ಜ್ಞಾನವು ಕೇವಲ ವೈಯಕ್ತಿಕ ಸಾಧನೆಗೆ ಸೀಮಿತವಾಗದೆ, ಸಮಾಜದ ಒಳಿತಿಗೆ ದಾರಿಯಾಗಬೇಕು “ ಎಂಬ ಸಂದೇಶವನ್ನು ನೀಡಿದರು.

ತಂತ್ರಜ್ಞಾನವು ಕ್ಷಿಪ್ರ ಗತಿಯಲ್ಲಿ ಮುಂದುವರಿಯುತ್ತಿರುವ  ಕಾಲಘಟ್ಟದಲ್ಲಿ   ಮಾನವೀಯತೆಯ ಮೌಲ್ಯವನ್ನು ಕಳೆದುಕೊಳ್ಳಬಾರದು. ಮಾನವೀಯತೆಯೇ ದೇವರ ಮಹಾನ್ ಕನಸು. ಸಮಸ್ತ ಸೃಷ್ಟಿಯ ಶಿಖರದಲ್ಲಿ ಮಾನವನಿಗೆ ಉನ್ನತ ಸ್ಥಾನವಿದೆ. ಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಮಾನವೀಯ ಮೌಲ್ಯಗಳು, ಪ್ರೀತಿ ಮತ್ತು ಕರುಣೆಗಳು ಇನ್ನಷ್ಟು ಬಲಗೊಳ್ಳಬೇಕು. ಪ್ರೀತಿಯಿಲ್ಲದ ಜ್ಞಾನ ಕೇವಲ ಮಾಹಿತಿಯಾಗುತ್ತದೆ; ಪ್ರೀತಿಯೊಂದಿಗೆ ಬೆಸೆದ ಜ್ಞಾನ ವಿವೇಕವಾಗುತ್ತದೆ. ಪದವೀಧರರು ತಮ್ಮ ಶೈಕ್ಷಣಿಕ ಸಾಧನೆಯ ಹಿಂದೆ ಇರುವ ಪೋಷಕರ ಶ್ರಮ, ತ್ಯಾಗ ಮತ್ತು ನಿರಂತರ ಬೆಂಬಲವನ್ನು ಮರೆಯಬಾರದು ಪೋಷಕರ ಪರಿಶ್ರಮ ಮತ್ತು ತ್ಯಾಗದ ಫಲವಾಗಿ ತಾವು ಗಳಿಸಿರುವ ಜ್ಞಾನವನ್ನು ಜೀವನದಲ್ಲಿ ಸಾರ್ಥಕವಾಗಿ ಬಳಸುವ ಮೂಲಕ ಅದನ್ನು ನಿಜವಾದ ವಿವೇಕವಾಗಿ ಪರಿವರ್ತಿಸಬೇಕು. ಪದವೀಧರರು ತಮ್ಮ ಶಿಕ್ಷಣವನ್ನು ನಿರಂತರ ಜ್ಞಾನಾರ್ಜನೆ, ಸಂಶೋಧನೆ, ಮಾನವೀಯತೆ, ಆತ್ಮವಿಮರ್ಶೆ ಹಾಗೂ ಪರಿಸರ ಕಾಳಜಿಯೊಂದಿಗೆ ಬೆಸೆದುಕೊಂಡು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಗಳಾದ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ಹಾಗೂ ನಿರ್ದೇಶಕ ಡಾ. ಗಣೇಶ್ ಸಂಜೀವ್ ಮಾತನಾಡಿ, ಇಲ್ಲಿಯವರೆಗೆ ನೀವು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಯ ರಕ್ಷಣಾತ್ಮಕ ವಾತಾವರಣದಲ್ಲಿ ಬೆಳೆದಿದ್ದೀರಿ. ಆದರೆ ಪದವಿ ಪೂರ್ಣಗೊಳಿಸಿ ಹೊರಬಂದ ನಂತರ, ವೈವಿಧ್ಯಮಯ ಸವಾಲುಗಳು ಮತ್ತು ಸಂಕೀರ್ಣತೆಗಳಿಂದ ಕೂಡಿದ ವಿಶಾಲ ಸಮಾಜವನ್ನು ಎದುರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ನಿಮ್ಮ ಶಿಕ್ಷಣದ ನಿಜವಾದ ಅರ್ಥ ಅನಾವರಣಗೊಳ್ಳುತ್ತದೆ. ತರಗತಿಯಲ್ಲಿ ಕಲಿತ ಸಿದ್ಧಾಂತಗಳು, ಪರಿಕಲ್ಪನೆಗಳು ಮತ್ತು ಜ್ಞಾನವು ಕೇವಲ ಪರೀಕ್ಷೆಗಳನ್ನು ಎದುರಿಸುವುದಕ್ಕಾಗಿ ಅಲ್ಲ; ಜೀವನದ ನೈಜ ಸವಾಲುಗಳನ್ನು ಅರ್ಥಮಾಡಿಕೊಳ್ಳಲು, ಸಮಸ್ಯೆಗಳನ್ನು ವಿಶ್ಲೇಷಿಸಲು, ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ಮತ್ತು ಸಮಾಜದಲ್ಲಿ ಜವಾಬ್ದಾರಿಯುತವಾಗಿ ಮುನ್ನಡೆಯಲು ಅವು ನಿಮಗೆ ದಾರಿದೀಪವಾಗಬೇಕು. ಇಲ್ಲಿಯವರೆಗೆ ನಿಮ್ಮನ್ನು ರಕ್ಷಿಸಿದ್ದ ಶಿಕ್ಷಣದ ವಾತಾವರಣದಿಂದ, ಇನ್ನು ಮುಂದೆ ನಿಮ್ಮನ್ನು ಮುನ್ನಡೆಸುವ ಜ್ಞಾನ, ವಿವೇಕ ಮತ್ತು ಆತ್ಮವಿಶ್ವಾಸವನ್ನು ನಿಮ್ಮೊಳಗೆ ಬೆಳೆಸಿಕೊಂಡು ಸಮಾಜವನ್ನು ಎದುರಿಸುವ ಕಾಲ ಬಂದಿದೆ ಎಂದು ನುಡಿದರು.

ಕ್ಯಾಥೋಲಿಕ್‌ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಪ್ರವೀಣ್‌ ಲಿಯೋ ಲಸ್ರಾದೋ ಮಾತನಾಡಿ, ಕನಸುಗಳೇ ನಮ್ಮ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತವೆ. ನಿಮ್ಮ ಸಾಮರ್ಥ್ಯವನ್ನು ನಂಬಿ, ಉನ್ನತ ಗುರಿಗಳನ್ನು ಹೊಂದಿ, ಆ ಕನಸುಗಳನ್ನು ನನಸಾಗಿಸಲು ನಿರಂತರ ಪರಿಶ್ರಮಿಸಿ. ಸ್ನಾತಕೋತ್ತರ ಪದವಿ ನಿಮ್ಮ ಪಯಣದ ಅಂತ್ಯವಲ್ಲ. ಅದು ಹೊಸ ಕನಸುಗಳನ್ನು ಕಾಣುವ ಮತ್ತು ಅವುಗಳನ್ನು ಸಾಕಾರಗೊಳಿಸುವ ಹೊಸ ಅಧ್ಯಾಯದ ಆರಂಭ” ಎಂದು ನುಡಿದರು

ಕಾಲೇಜಿನ ವಿವಿಧ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗೈದು  ಪ್ರಥಮ ರ್ಯಾಂಕ್ ಪಡೆದ ಐವರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತರಗತಿಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಎಂ.ಎಸ್‌.ಡಬ್ಲ್ಯು. ವಿಭಾಗದ ಸ್ನೇಹಾ ರೋಸ್‌ ಜೇಕಬ್‌, ಎಂ.ಕಾಂ. ನ ಚಸ್ಮಿಕಾ ಟಿ, ಎಂ. ಸ್ಸಿ. ಭೌತಶಾಸ್ತ್ರ ವಿಭಾಗದ ನಿತೀಶ್‌, ಎಂ.ಎಸ್ಸಿ. ಗಣಿತ ಶಾಸ್ತ್ರದ ಅನುಪಮಾ ಹಾಗೂ ಎಂಸಿಎ ವಿಭಾಗದ ನಿರೀಕ್ಷಾ ಆರ್‌ ಇವರುಗಳನ್ನು  ಕಾರ್ಯಕ್ರಮದ ಅಧ್ಯಕ್ಷರಾದ ಡಾ| ಪೀಟರ್‌ ಪಾವ್ಲ್‌ ಸಲ್ದಾನರವರು  ಸ್ಮರಣಿಕೆ ನೀಡಿ ಗೌರವಿಸಿದರು.

ಕಾಲೇಜಿನ ಎಂ.ಎಸ್‌. ಡಬ್ಲ್ಯೂ., ಎಂ.ಕಾಂ., ಸ್ನಾತಕೋತ್ತರ ‍ಭೌತಶಾಸ್ತ್ರ, ಸ್ನಾತಕೋತ್ತರ ‍ಗಣಿತಶಾಸ್ತ್ರ ಹಾಗೂ ಎಂಸಿಎ ವಿಭಾಗಗಳ ಒಟ್ಟು 60 ಪದವೀಧರರು ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮುಖ್ಯ ಅತಿಥಿ ಹಾಗೂ ಕ್ಯಾಥೊಲಿಕ್‌ ಶಿಕ್ಷಣಮಂಡಳಿಯ ಕಾರ್ಯದರ್ಶಿಯವರಿಂದ  ಪ್ರಮಾಣಪತ್ರಗಳನ್ನು      ಸ್ವೀಕರಿಸಿದರು.

ಪದವಿ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ  ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಅವರು ಪದವಿ ಪ್ರಮಾಣ ವಚನವನ್ನು ಬೋಧಿಸಿದರು. ಪದವೀಧರರು ತಮ್ಮ ಶೈಕ್ಷಣಿಕ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸುವ ಹಾಗೂ ತಮ್ಮ ವೃತ್ತಿಜೀವನದಲ್ಲಿ ಮೌಲ್ಯಗಳನ್ನು ಪಾಲಿಸುವ ಸಂಕಲ್ಪವನ್ನು ಕೈಗೊಂಡರು.

ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯಕುಮಾರ್‌ ಎಂ, ಶೈಕ್ಷಣಿಕ ಕುಲಸಚಿವರಾದ ಡಾ| ನಾರ್ಬರ್ಟ್‌ ಮಸ್ಕರೇನಸ್‌, ಹಣಕಾಸು ಅಧಿಕಾರಿ ಡಾ| ಎಡ್ವಿನ್‌ ಎಸ್‌ ಡಿಸೋಜ, ಪುತ್ತೂರು ಮಾಯಿ ದೆ ದೇವುಸ್ ಚರ್ಚ್‌ ಪಾಲನಾ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ರೋಶನ್ ಲಸ್ರಾದೋ, ಪರೀಕ್ಷಾಂಗ ಉಪ ಕುಲಸಚಿವರುಗಳಾದ ಕ್ಯಾಪ್ಟನ್‌ ಜಾನ್ಸನ್‌ ಡೇವಿಡ್‌ ಸಿಕ್ವೇರಾ ಮತ್ತು ಅಭಿಷೇಕ್‌ ಸುವರ್ಣ , ಶೈಕ್ಷಣಿಕ ಉಪಕುಲಸಚಿವರಾದ ವಿಪಿನ್‌ ನಾಯ್ಕ್‌ ಎನ್‌. ಎಸ್‌  ಹಾಗೂ  ಐದು ಸ್ನಾತಕೋತ್ತರ ವಿಭಾಗಗಳ ಸಂಯೋಜಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಸಂಚಾಲಕರಾದ ಜಾನ್‌ ಬಿ. ಸಲ್ದಾನಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪರ್ಫಾರ್ಮಿಂಗ್‌ ಆರ್ಟ್ಸ್‌ ತಂಡದವರು ಪ್ರಾರ್ಥಿಸಿದರು. ಪರೀಕ್ಷಾಂಗ ಕುಲಸಚಿವರಾದ ಡಾ| ವಿನಯಚಂದ್ರ ವಂದಿಸಿದರು.

ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ಪರ್ಲ್‌ ಫಿಯೋನಾ ಪಿರೇರಾ ಹಾಗೂ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್‌ ರೈ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಪರಂಪರೆ ಹಾಗೂ ಶೈಕ್ಷಣಿಕ ಪಯಣವನ್ನು ಬಿಂಬಿಸುವ ಕಾಲೇಜಿನ ಲೆಗಸಿ ವೀಡಿಯೊವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿರು.  ಅತಿಥಿಗಣ್ಯರು, ಕಾಲೇಜಿನ ವಿವಿಧ ಅಧಿಕಾರಿಗಳು, ಪದವಿ ವಿಭಾಗಗಳ ಡೀನ್‌ ಹಾಗೂ ಮುಖ್ಯಸ್ಥರು, ಸ್ನಾತಕೋತ್ತರ ಪದವಿ ವಿಭಾಗಗಳ ಸಂಯೋಜಕರು ಹಾಗೂ   ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನೊಳಗೊಂಡ ಶೈಕ್ಷಣಿಕ ಮೆರವಣಿಗೆಯು ಎನ್‌ ಸಿ ಸಿ ಕೆಡೆಟ್‌ಗಳು ಹಾಗೂ ಬ್ಯಾಂಡ್‌ನೊಂದಿಗೆ ವಿಧ್ಯುಕ್ತವಾಗಿ ಸಭಾಂಗಣಕ್ಕೆ  ಪ್ರವೇಶಿಸಿ ಸಮಾರಂಭಕ್ಕೆ ಮೆರುಗು ನೀಡಿತು. ಆಡಳಿತ ಮಂಡಳಿಯ ಸದಸ್ಯರು, ಶೈಕ್ಷಣಿಕ ಮಂಡಳಿಯ  ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಆಡಳಿತ ಸಿಬ್ಬಿಂದಿ,  ಗಣ್ಯ ಅತಿಥಿಗಳು ,   ಪದವೀಧರರು, ಅವರ ಪೋಷಕರು,  ಶಿಕ್ಷಕವೃಂದ , ಆಡಳಿತ ಸಿಬ್ಬಂದಿವರ್ಗ  ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಬೆಳಾಲು ಧ.ಮಂ. ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ನೆಟ್‌ಬಾಲ್ ಪಂದ್ಯಾಟ: ಆತಿಥೇಯ ಶಾಲೆಗೆ ಬಾಲಕಿಯರ ವಿಭಾಗದಲ್ಲಿ ಪ್ರಥಮ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸೆ. 9ರಂದು ತಾಲೂಕು ಮಟ್ಟದ…

ಪುತ್ತೂರಿನಲ್ಲಿ ಸಂಭ್ರಮದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ;1,250ಕ್ಕೂ ಅಧಿಕ ಪುಟಾಣಿ ಕೃಷ್ಣ-ರಾಧೆಯರಿಂದ ವೈಭವದ ಶೋಭಾಯಾತ್ರೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪರ್ಲಡ್ಕ ಶಿವಪೇಟೆಯ ವಿವೇಕಾನಂದ…

ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಟನ್ ಪಂದ್ಯಾಟ | ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಕಾಣಬೇಕು : ಸುರೇಶ್ ಶೆಟ್ಟಿ

ಪುತ್ತೂರು: ವಿದ್ಯಾರ್ಥಿಗಳು ಗೆಲುವನ್ನು ಮಾತ್ರ ನಿರೀಕ್ಷಿಸುತ್ತಿರಬಾರದ್ಲು. ಸೋತಾಗಲೂ ಅನುಭವ…

ಸೆ. 10 ಮತ್ತು 11ರಂದು ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ‘ಆರೋಹಂ’ ಶೈಕ್ಷಣಿಕ–ಸಾಂಸ್ಕೃತಿಕ ಉತ್ಸವ

ಉಜಿರೆ: ಸ್ಥಳೀಯ ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ಸೆ. 10 ಮತ್ತು 11ರಂದು ರಾಷ್ಟ್ರಮಟ್ಟದ…