ಪುತ್ತೂರು: ಮಾಡ್ನೂರು ಗ್ರಾಮದ ಕಾವು ಎಂಬಲ್ಲಿಂದ ಕಳ್ಳತನ ಮಾಡಿದ ಆಮ್ನಿ ಕಾರನ್ನು ತಮಿಳುನಾಡಿನಲ್ಲಿ ಆ್ಯಂಬುಲೆನ್ಸ್ ಆಗಿ ಪರಿವರ್ತಿಸುವ ಸಂದರ್ಭ ಸಂಪ್ಯ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ನಾಲ್ವರು ಆರೋಪಿಗಳ ಸಹಿತ ಸುಮಾರು 2.5 ಲಕ್ಷ ರೂ. ಮೌಲ್ಯದ ಆಮ್ನಿ ಕಾರು, ಕಳ್ಳತನಕ್ಕೆ ಬಳಸಿದ ಸುಮಾರು 1 ಲಕ್ಷ ರೂ. ಮೌಲ್ಯದ ಕೆಟಿಎಂ ಬೈಕನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಾಯಾರ್ ಚಿಪ್ಪಾರಿನ ಅಬ್ದುಲ್ ಸಾಯಿಲ್ ಜೆ., ಮಂಜೇಶ್ವರ ಹೊಸಂಗಡಿಯ ಮೊಹಮ್ಮದ್ ಆಸೀಕ್, ಉಪ್ಪಳ ಪೇರಿಂಗಡಿಯ ಮೊಹಮ್ಮದ್ ಸಿರಾಜ್, ತಮಿಳುನಾಡಿನ ಅರಿಜನ ತೇರಿನ ಶಕ್ತಿವೇಲು ಬಂಧಿತರು.
ಅ.ಕ್ರ ನಂಬರ್ 94/2026 303(2)BNS ಅಡಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪುತ್ತೂರು ನ್ಯಾಯಾಲಯಕ್ಕೆ, ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೇರಳದಿಂದ ತಮಿಳುನಾಡಿಗೆ…:
ಕಾವಿನಿಂದ ಕದ್ದ ಆಮ್ನಿ ಕಾರನ್ನು ಆರೋಪಿಗಳು ಕೇರಳ ರಾಜ್ಯಕ್ಕೆ ಕೊಂಡೊಯ್ದು, ಅಲ್ಲಿಂದ ತಮಿಳುನಾಡಿಗೆ ಮಾರಾಟ ಮಾಡಿದ್ದರು. ಕಳ್ಳತನದ ಜಾಡು ಬೆನ್ನಟ್ಟಿದ ಪೊಲೀಸರು, ತಮಿಳುನಾಡಿನಲ್ಲಿ ಆಮ್ನಿ ಕಾರನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸುತ್ತಿದ್ದ ಸಂದರ್ಭ ಪತ್ತೆ ಹಚ್ಚಿದ್ದಾರೆ.
ಆರೋಪಿಗಳ ಮೇಲೆ ಬದಿಯಡ್ಕ ಪೊಲೀಸ್ ಠಾಣೆ, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಕಳ್ಳತನ ಪ್ರಕರಣ, ಮನೆ ದರೋಡೆ, ಅಡಿಕೆ ಕಳ್ಳತನ, ಆಮ್ನಿ ಕಾರ್ ಕಳ್ಳತನ ಮೊದಲಾದ ಪ್ರಕರಣ ದಾಖಲಾಗಿವೆ.
ಎಸ್ಪಿ ಅರುಣ್ ಕೆ., ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಅವರ ಆದೇಶದಂತೆ ಡಿವೈಎಸ್ಪಿ ಪ್ರಮೋದ್ ಕುಮಾರ್ ನಿರ್ದೇಶನದಂತೆ ಸರ್ಕಲ್ ಇನ್ಸ್’ಪೆಕ್ಟರ್ ತಿಮ್ಮಪ್ಪ ನಾಯ್ಕ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಗುಣಪಾಲ ಜೆ ಹಾಗೂ ಸುಷ್ಮಾ.ಜಿ ಭಂಡಾರಿ ಅವರ ಸಾರಥ್ಯದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರೋಬೆಷನರಿ ಪಿಎಸ್ಐ ಅರುಣ್, ಹೆಚ್ ಸಿಗಳಾದ ರಮೇಶ್, ಸುಬ್ರಹ್ಮಣ್ಯ, ನಾಗರಾಜ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಪಿಸಿಗಳಾದ ಶರಣಪ್ಪ ಪಾಟೀಲ್, ಈರಣ್ಣ, ಅವಿನಾಶ್, ಮಹಿಳಾ ಸಿಬ್ಬಂದಿ ದ್ರಾಕ್ಷಾಯಣಿ, ಹೋಮ್ ಗಾರ್ಡ್ ಸಿಬ್ಬಂದಿ ಹರಿಪ್ರಸಾದ್ ಕಾರ್ಯಾಚರಣೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಿಡಿಆರ್ ವಿಭಾಗದ ಸಂಪತ್ ಮತ್ತು ದಿವಾಕರ್ ಸಹಕರಿಸಿದ್ದಾರೆ.


































