ಪುತ್ತೂರು: ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೃಷ್ಣನಗರದ ಚೇತನ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
2023ರ ನವೆಂಬರ್ 6ರಂದು ರಾತ್ರಿ ಪುತ್ತೂರಿನ ನೆಹರುನಗರದಲ್ಲಿ ಅಕ್ಷಯ್ ಕಲ್ಲೇಗ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕೃಷ್ಣನಗರದ ಚೇತನ್, ಪಡೀಲು ನಿವಾಸಿ ಮನೀಷ್, ಬನ್ನೂರಿನ ಮಂಜುನಾಥ್ ಶೆಣೈ ಅಲಿಯಾಸ್ ಹರಿ ಹಾಗೂ ಕೇಶವ ಪಡೀಲ್ ಅವರನ್ನು ಪೊಲೀಸರು ಬಂಧಿಸಿದ್ದರು.
ಪ್ರಕರಣದ ಮೂರನೇ ಆರೋಪಿ ಮಂಜುನಾಥ್ ಶೆಣೈ ಹಾಗೂ ನಾಲ್ಕನೇ ಆರೋಪಿ ಕೇಶವ ಅವರಿಗೆ ಪುತ್ತೂರು ನ್ಯಾಯಾಲಯ ಈ ಹಿಂದೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಬಳಿಕ ಎರಡನೇ ಆರೋಪಿ ಮನೀಷ್‌ಗೂ ಹೈಕೋರ್ಟ್ ಜಾಮೀನು ನೀಡಿತ್ತು.
ಇದೀಗ ಪ್ರಕರಣದ ಪ್ರಥಮ ಆರೋಪಿ ಚೇತನ್‌ಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಾಲ್ವರು ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.

































