ಐತಿಹಾಸಿಕ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 1-0 ಗೋಲುಗಳಿಂದ ಮಣಿಸಿ ಸ್ಪೈನ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ನ್ಯೂಜೆರ್ಸಿಯ ಪೂರ್ವ ರದರ್’ಫೋರ್ಡ್’ನಲ್ಲಿನ ಮೆಟ್’ಲೈಫ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಹೈ-ವೋಲ್ಟೇಜ್ ಪಂದ್ಯದ ನಿಗದಿತ 90 ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದಾಗ, ಪಂದ್ಯವು ಹೆಚ್ಚುವರಿ ಸಮಯಕ್ಕೆ (Extra Time) ಜಾರಿತು. ಹೆಚ್ಚುವರಿ ಸಮಯದ ದ್ವಿತೀಯಾರ್ಧದ ಆರಂಭದಲ್ಲೇ, ಅಂದರೆ ಪಂದ್ಯದ 106ನೇ ನಿಮಿಷದಲ್ಲಿ ಸ್ಪೇನ್ ತಂಡದ ಬದಲಿ ಆಟಗಾರ ಫೆರಾನ್ ಟೊರೆಸ್ ಪಂದ್ಯದ ಏಕೈಕ ಹಾಗೂ ನಿರ್ಣಾಯಕ ಗೋಲು ಬಾರಿಸಿದರು. ಬಾಕ್ಸ್ ಒಳಗೆ ಪುಟಿದು ಬಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಟೊರೆಸ್, ಎಡಗಾಲಿನಿಂದ ಚೆಂಡನ್ನು ಗೋಲು ಪೆಟ್ಟಿಗೆಯ ಮೇಲ್ಭಾಗಕ್ಕೆ ತಳ್ಳುವ ಮೂಲಕ ಸ್ಪೇನ್‌ಗೆ ಐತಿಹಾಸಿಕ ಜಯ ತಂದುಕೊಟ್ಟರು.
ಪಂದ್ಯದ ದ್ವಿತೀಯಾರ್ಧದ ಇಂಜುರಿ ಟೈಮ್‌ನಲ್ಲಿ (Stoppage Time) ಅರ್ಜೆಂಟೀನಾದ ಎಂಜೊ ಫೆರ್ನಾಂಡಿಸ್ ಅವರು ಸ್ಪೇನ್‌ನ ಡಿಫೆಂಡರ್ ಪಾವು ಕುಬಾರ್ಸಿ ಅವರ ವಿರುದ್ಧ ಅಪಾಯಕಾರಿ ಫೌಲ್ ಮಾಡಿದ್ದಕ್ಕಾಗಿ ಎರಡನೇ ಹಳದಿ ಕಾರ್ಡ್ ಪಡೆದು ಮೈದಾನದಿಂದ ಹೊರನಡೆದರು. ಇದರಿಂದಾಗಿ ಅರ್ಜೆಂಟೀನಾ ಪಂದ್ಯದ ಕೊನೆಯ ಹಂತದಲ್ಲಿ ಕೇವಲ 10 ಆಟಗಾರರೊಂದಿಗೆ ಆಡಬೇಕಾಯಿತು.
ಪಂದ್ಯದ 90 ನಿಮಿಷಗಳ ಅವಧಿಯಲ್ಲಿ ಸ್ಪೇನ್ ಬರೋಬ್ಬರಿ 15 ಬಾರಿ ಗೋಲು ಬಾರಿಸಲು ಯತ್ನಿಸಿದರೆ, ಅರ್ಜೆಂಟೀನಾ ಒಂದು ಬಾರಿಯೂ ಯತ್ನಿಸಲಿಲ್ಲ. ಆದರೆ ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಗೋಡೆಗಿಂತ ಗಟ್ಟಿಯಾಗಿ ನಿಂತು ಸ್ಪೇನ್‌ನ 10 ಗೋಲುಗಳ ಯತ್ನವನ್ನು ತಡೆದರು. ಇದು ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಗೋಲ್‌ಕೀಪರ್ ಒಬ್ಬರು ಮಾಡಿದ ಅತಿ ಹೆಚ್ಚು ಗೋಲುಗಳ ರಕ್ಷಣೆಯಾಗಿದೆ. ವಿಶೇಷವಾಗಿ ಇಂಜುರಿ ಟೈಮ್‌ನಲ್ಲಿ ಲ್ಯಾಮೈನ್ ಯಮಾಲ್ ಅವರ ಅದ್ಭುತ ಫ್ರೀ-ಕಿಕ್ ಅನ್ನು ಮಾರ್ಟಿನೆಜ್ ತಡೆದ ರೀತಿ ಅಮೋಘವಾಗಿತ್ತು.
ಈ ಐತಿಹಾಸಿಕ ಜಯದೊಂದಿಗೆ ಸ್ಪೇನ್ ಜಗತ್ತಿನ ಫುಟ್‌ಬಾಲ್ ಇತಿಹಾಸದಲ್ಲೇ ಪುರುಷರ ಹಾಗೂ ಮಹಿಳೆಯರ ಫಿಫಾ ವಿಶ್ವಕಪ್ ಎರಡೂ ಟ್ರೋಫಿಗಳನ್ನು ಏಕಕಾಲದಲ್ಲಿ ಹೊಂದಿರುವ ಮೊದಲ ದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ.
ಮಹಾ ಫೈನಲ್ ಪಂದ್ಯವನ್ನು ವೀಕ್ಷಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾಲಿವುಡ್ ತಾರೆಗಳಾದ ಬ್ರಾಡ್ ಪಿಟ್, ಟಾಮ್ ಕ್ರೂಸ್, ಮ್ಯಾಟ್ ಡಾಮನ್, ಟೆನ್ನಿಸ್ ದಂತಕಥೆ ಸೆರೆನಾ ವಿಲಿಯಮ್ಸ್, ಫುಟ್‌ಬಾಲ್ ದಿಗ್ಗಜರಾದ ಡೇವಿಡ್ ಬೆಕ್ಹ್ಯಾಮ್, ಜಿನೆದಿನ್ ಜಿಡಾನೆ ಹಾಗೂ ಸೇರಿದಂತೆ ಹಲವು ಗಣ್ಯರು ಕ್ರೀಡಾಂಗಣದಲ್ಲಿ ನೆರೆದಿದ್ದರು.






















