ಪುತ್ತೂರು: ತಂತ್ರಜ್ಞಾನ ಶಿಕ್ಷಕನ ಸ್ಥಾನದವರೆಗೂ ಬಂದು ನಿಂತಿದೆ. ಆದರೆ ಆ ಎಐ ಶಿಕ್ಷಕ ಕೇಳಿದ್ದಕ್ಕಷ್ಟೇ ಉತ್ತರ ನೀಡಬಲ್ಲ. ಎಲ್ಲವನ್ನೂ ತಂತ್ರಜ್ಞಾನ ಆವರಿಸಿರುವ ಹೊತ್ತಲ್ಲಿ, ತಂತ್ರಜ್ಞಾನದ ಜೊತೆಗೆ ತತ್ವಜ್ಞಾನವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಉಪ್ಪಿನಂಗಡಿ ಸಿಟಿ ಮಾರ್ಕೆಟ್ ಕಟ್ಟಡದ ನೆಲ ಮಹಡಿಯಲ್ಲಿ ಶಿವಂ ಕಂಪ್ಯೂಟರ್ಸ್ & ಸೆಕ್ಯೂರಿಟಿ ಸಿಸ್ಟಮ್ಸ್ ಇದರ 2ನೇ ಮಳಿಗೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪುತ್ತೂರಿನ ದರ್ಬೆಯಲ್ಲಿ ಶಿವಂ ಕಂಪ್ಯೂಟರ್ಸ್ & ಸೆಕ್ಯೂರಿಟಿ ಸಿಸ್ಟಮ್ಸ್ 15 ವರ್ಷ ಪೂರೈಸಿ, 2ನೇ ಮಳಿಗೆಯನ್ನು ಆರಂಭಿಸುತ್ತಿದೆ ಎಂದರೆ ಮೊದಲ ಮಳಿಗೆಯಲ್ಲಿ ಗ್ರಾಹಕರಿಗೆ ನೀಡಿದ ಸೇವೆ ಉತ್ತಮವಾಗಿದೆ ಎಂದೇ ಅರ್ಥ. ಯಾವುದೇ ಸಂಸ್ಥೆಗೆ ಗ್ರಾಹಕರು ಜೀವಾಳ. ಉತ್ತಮ ಸೇವೆ ನೀಡಿದರೆ, ಖಂಡಿತಾ ಗ್ರಾಹಕರು ಬಂದೇ ಬರುತ್ತಾರೆ ಎನ್ನುವುದಕ್ಕೆ ಶಿವಂ ಸಂಸ್ಥೆಯೇ ಉದಾಹರಣೆ ಎಂದರು.

ಕಂಪ್ಯೂಟರ್ ಯುಗ ಮುಂದುವರಿಯುತ್ತಿದ್ದು, ಇದರಲ್ಲಿ ಎಐ ಯುಗಕ್ಕೆ ಬಂದಿದ್ದೇವೆ. ಅನುಕೂಲ – ಅನಾನುಕೂಲದ ನಡುವೆಯೇ ಕುಂದಾಪುರದಲ್ಲೊಂದು ಎಐ ಟೀಚರ್ ಬಂದಿರುವುದು ಸುದ್ದಿಯಾಗಿತ್ತು. ಎಐ ಟೀಚರ್ ಕಿವಿ ಹಿಂಡುವುದಿಲ್ಲ, ಬುದ್ದಿ ಹೇಳುವುದಿಲ್ಲ; ಬದಲಾಗಿ ಕೇಳಿದ ಪ್ರಶ್ನೆಗಷ್ಟೇ ಉತ್ತರ ನೀಡುತ್ತದೆಯಂತೆ. ಎಲ್ಲವೂ ಯಂತ್ರಮಯವಾಗುವ ಹೊತ್ತಿನಲ್ಲಿ ತಂತ್ರಜ್ಞಾನದ ಜೊತೆಗೆ ತತ್ವಜ್ಞಾನವನ್ನು ಸೇರಿಸಿಕೊಳ್ಳಬೇಕಾದ ಅಗತ್ಯ ತುಂಬಾ ಇದೆ ಎಂದರು.
ತಂತ್ರಜ್ಞಾನಗಳೆಂದರೆ ಉಪಯೋಗ – ದುರುಪಯೋಗ ಇರುವುದೇ. ಆದರೆ ಇದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಸರಿಯಾದ ಬಳಕೆಯಿಂದ ಸಮಾಜ, ಸಂಸ್ಥೆ ಇನ್ನಷ್ಟು ಬೆಳವಣಿಗೆಯತ್ತ ಮುಖ ಮಾಡಲು ಸಾಧ್ಯ. ಆದರೆ, ಈ ತಂತ್ರಜ್ಞಾನ ಮಕ್ಕಳ ಕೈಗೆ ಸಿಗದಂತೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಿದರು.
ಸೇವಾ ಹಿ ಪರಮೋ ಧರ್ಮ ಎಂಬ ಮಾತಿದೆ. ಯಶಸ್ಸಿನ ಗುಟ್ಟು ಇರುವುದೇ ಸೇವೆಯಲ್ಲಿ. ಶಿವಂ ಕಂಪ್ಯೂಟರ್ಸ್ & ಸೆಕ್ಯೂರಿಟಿ ಸಿಸ್ಟಮ್ಸ್ ಸರಿಯಾದ ಜಾಗದಲ್ಲಿದೆ. ಪುತ್ತೂರು ಹಾಗೂ ಉಪ್ಪಿನಂಗಡಿ ಎರಡೂ ಶಿವನದ್ದೇ ಜಾಗ. ಇಲ್ಲಿ ಸುದರ್ಶನ್ ರೈ ನೀರ್ಪಾಡಿ ಅವರು ಶಿವಂ ಕಂಪ್ಯೂಟರ್ಸ್ ಆರಂಭಿಸಿದ್ದಾರೆ. ಸುದರ್ಶನ ಎಂದರೆ ಸೇವೆ ಎಂದೇ ಹೇಳಬಹುದು. ಗುಣಮಟ್ಟಕ್ಕೆ ಸರಿಯಾದ ವ್ಯಕ್ತಿ. ಇನ್ನು ಶಿವ ಎಂದರೆ ಸರ್ವಾರ್ಥ, ಮಂಗಳಕರ ಎಂಬ ಅರ್ಥವಿದೆ ಎಂದು ವಿವರಿಸಿದರು.
ಹಿರೀಕರಿಗೆ ತರಬೇತಿ ಶಿಬಿರ ನಡೆಸಿದರೆ ಅನುಕೂಲ: ಸವಣೂರು ಸೀತಾರಾಮ ರೈ
ನವೀಕರಣಗೊಳಿಸಿದ ಕಂಪ್ಯೂಟರ್ ಕೌಂಟರ್ ಅನ್ನು ಉದ್ಘಾಟಿಸಿ ಮಾತನಾಡಿದ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ವಿಜ್ಞಾನದಲ್ಲಿ ಅನುಕೂಲತೆ ಹಾಗೂ ಅನಾನುಕೂಲತೆ ಎರಡೂ ಇದೆ. ಇದನ್ನು ಸದ್ಭಳಕೆ ಮಾಡುವುದು ನಮ್ಮ ಕೈಯಲ್ಲಿದೆ. ಸುಮಾರು 20ರಿಂದ 25 ವರ್ಷಗಳಷ್ಟು ಕೆಲಸದ ಅನುಭವ ಇರುವ ನೌಕರರಿಗೆ ಕಂಪ್ಯೂಟರ್ ಬಗ್ಗೆ ತಿಳಿದಿದೆ. ಆದರೆ ಅದಕ್ಕಿಂತ ಹಿಂದಿನವರಿಗೆ ಕಂಪ್ಯೂಟರ್ ಎಂದರೆ ಏನೂ ತಿಳಿಯದು. ಈ ಹಿನ್ನೆಲೆಯಲ್ಲಿ ಅವರಿಗಾಗಿ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು.
ಆದರ್ಶ ವಿವಿದೋದ್ದೇಶ ಸಹಕಾರಿ ಸಂಸ್ಥೆ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳಿಗೆ ಶಿವಂ ಕಂಪ್ಯೂಟರ್ಸ್ & ಸೆಕ್ಯೂರಿಟಿ ಸಿಸ್ಟಮ್ಸ್ ಸೇವೆ ನೀಡುತ್ತಾ ಬಂದಿದೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಿರುವುದರಿಂದ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಈ ಸಂಸ್ಥೆ ಇನ್ನಷ್ಟು ಉನ್ನತ ಸ್ಥಾನಕ್ಕೆ ಏರಬೇಕು ಎಂದು ಹಾರೈಸಿದರು.

ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಕೋಟಿ – ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮೊದಲಾದವರು ಸಂಸ್ಥೆಗೆ ಆಗಮಿಸಿ ಶುಭಹಾರೈಸಿದರು.
ಸುದರ್ಶನ ರೈ ನೀರ್ಪಾಡಿ ಹಾಗೂ ಪ್ರಿಯಾ ಸುದರ್ಶನ್ ರೈ ದಂಪತಿ ಒಡಿಯೂರು ಶ್ರೀಗಳಿಗೆ ಫಲಪುಷ್ಪ ಸಮರ್ಪಿಸಿದರು. ಸವಣೂರು ಸೀತಾರಾಮ ರೈ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಸಿಟಿ ಮಾರ್ಕೆಟ್ ಕಟ್ಟಡ ಮಾಲಕ ಹಾಜಿ ವಿಟ್ಲ ಮೊಯಿಲಾರ್ ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು. ಯತೀಶ್ ಕಾರ್ಯಕ್ರಮ ನಿರೂಪಿಸಿದರು.
ಶಿವಂ ಕಂಪ್ಯೂಟರ್ಸ್ & ಸೆಕ್ಯೂರಿಟಿ ಸಿಸ್ಟಮ್ಸ್:
ಪುತ್ತೂರಿನ ದರ್ಬೆಯಲ್ಲಿರುವ ಶಿವಂ ಕಂಪ್ಯೂಟರ್ಸ್ & ಸೆಕ್ಯೂರಿಟಿ ಸಿಸ್ಟಮ್ಸ್ ಇದೀಗ ತನ್ನ 2ನೇ ಮಳಿಗೆಯನ್ನು ಉಪ್ಪಿನಂಗಡಿಯ ಬೈಪಾಸ್ ಹಾಗೂ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯ ಜಂಕ್ಷನಲ್ಲೇ ತೆರೆದಿದೆ. ಉಪ್ಪಿನಂಗಡಿ ಭಾಗದ ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ನೂತನ ಮಳಿಗೆ ಶುಭಾರಂಭಗೊಂಡಿದ್ದು, ಇಲ್ಲಿ ಬ್ರಾಂಡೆಡ್ ನ್ಯೂ ಕಂಪ್ಯೂಟರ್ಸ್, ರಿಫರ್ಬ್ಡ್ ಕಂಪ್ಯೂಟರ್ಸ್, ಸಿಸಿಟಿವಿ, ಕಂಪ್ಯೂಟರ್ ಸರ್ವೀಸ್ ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಸುದರ್ಶನ್ ರೈ ನೀರ್ಪಾಡಿ ತಿಳಿಸಿದ್ದಾರೆ.
























