ಪುತ್ತೂರು: ಇಂದು ಕಲಾವಿದರು, ಕುಶಲಕರ್ಮಿಗಳು, ಶಿಲ್ಪಿಗಳು ಎ. ಐ. ಯಂತಹ ವಿನೂತನ ತಂತ್ರಜ್ಞಾನಗಳು ಆಗಮನದಿಂದ ತಮ್ಮ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಆದರೆ ನಿಜವಾದ ಪ್ರತಿಭೆ ಹಾಗೂ ಕೌಶಲ್ಯವುಳ್ಳವರು ಆತಂಕ ಪಡಬೇಕಿಲ್ಲ. ಎ. ಐ. ಯಂತಹ ತಂತ್ರಜ್ಞಾನಗಳು, ಡಿಜಿಟಲ್ ಟೂಲ್ ಗಳನ್ನು ಬಳಸಿ ಸಮಯ ಹಾಗೂ ಪರಿಕರಗಳ ಬಳಕೆಯನ್ನು ಕಡಿಮೆ ಮಾಡಿಕೊಂಡು ಇನ್ನೂ ವ್ಯಾಪಕವಾದ ಮಾರುಕಟ್ಟೆಗೆ ತಮ್ಮ ಕಲಾಕೃತಿಗಳು ತಲುಪುವಂತೆ ಮಾಡಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳಬಹುದು ಎಂದು ಖ್ಯಾತ ಸಾಫ್ಟ್’ವೇರ್ ವಿಕಾಸಕರೂ, ಮಂಗಳೂರು ಕೆಪಿಟಿಯ ನಿವೃತ್ತ ಪ್ರಾಚಾರ್ಯರೂ ಆದ ಹರೀಶ ಶೆಟ್ಟಿ ಹೇಳಿದರು.
ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಮತ್ತು ಎಸ್. ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ. ಲಿ. ಇದರ ಆಶ್ರಯದಲ್ಲಿ ಕಲಾವಿದರು ಹಾಗೂ ಕುಶಲಕರ್ಮಿಗಳಿಗಾಗಿ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಇಂಪ್ಯಾಕ್ಟ್’ – ಹಸ್ತಕೌಶಲದಿಂದ ಹ್ಯಾಶ್ ಟ್ಯಾಗ್ ವರೆಗೆ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ, ರುದ್ರ ಹನುಮಾನ್ ಖ್ಯಾತಿಯ ಕರಣ್ ಆಚಾರ್ಯ ಮಾತನಾಡಿ, ಸಾಮಾಜಿಕ ಮಾಧ್ಯಮವನ್ನು ಕೌಶಲ್ಯಯುಕ್ತವಾಗಿ ಜಾಣ್ಮೆಯಿಂದ ಬಳಸಿಕೊಂಡರೆ ಕಲಾವಿದರು ಹೆಚ್ಚಿನ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಜಿ.ಐ. ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಮಾತನಾಡಿ, ಕಲಾವಿದರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಕಟ್ಟಿಕೊಳ್ಳಲು ಇಂತಹ ಕಾರ್ಯಾಗಾರಗಳು ಬಹಳ ಅಗತ್ಯ ಎಂದರು.
ಭಜನೆ ಸುಗಮ ಸಂಗೀತ ಹಾಗೂ ಮದರಂಗಿ ತರಬೇತಿ ತರಗತಿಗಳಿಗೆ ಚಾಲನೆಯ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು. ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿ ಪೂಜಾ ಆಚಾರ್ಯ ನಡೆಸಿಕೊಟ್ಟರು. ಭರತ್ ರಾಜ್ ಬೈಕಾಡಿ ಮತ್ತು ಜೀವನ್ ಆಚಾರ್ಯ ಸಹಕರಿಸಿದರು.
ಸಂಗೀತ ನಿರ್ದೇಶಕ ಕೆ.ರವಿಶಂಕರ್, ಸಂಗೀತ ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ ರೂವಾರಿ.ಕಾಂ ಮತ್ತು ಮದರಂಗಿ ಕಲಾ ತರಬೇತಿದಾರೆ ಆದ್ವಿಕಾ ಆಚಾರ್ಯ ಉಪಸ್ಥಿತರಿದ್ದರು.
ಪರಿಷತ್ ನ ಕಾರ್ಯದರ್ಶಿ ರಮ್ಯಾ ಲಕ್ಷ್ಮೀಶ್ ಪ್ರಾರ್ಥಿಸಿದರು. ಮಂಗಳೂರು ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷ ಡಾ. ಎಸ್.ಪಿ. ಗುರುದಾಸ್ ಸ್ವಾಗತಿಸಿ, ಯಜ್ಞೇಶ್ವರ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.






















