ಪುತ್ತೂರು: ಪುತ್ತೂರುದ ಪಿಲಿಗೊಬ್ಬು 2026 – ಸೀಸನ್ 4 ಅಕ್ಟೋಬರ್ 17ರಂದು (ಶನಿವಾರ) ಹಾಗೂ ಫುಡ್ ಫೆಸ್ಟ್ ಅ. 17, 18ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ವಿಜಯ ಸಾಮ್ರಾಟ್ ಸಂಸ್ಥಾಪಕ ಸಹಜ್ ರೈ ಬಳಜ್ಜ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ವಿಶಿಷ್ಟ ಜಾನಪದ ಕಲೆಯಾದ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಳೆದ 3 ವರ್ಷಗಳಿಂದ ಪಿಲಿಗೊಬ್ಬು ಹಾಗೂ ಫುಡ್ ಫೆಸ್ಟ್ ಆಯೋಜಿಸಿಕೊಂಡು ಬರಲಾಗಿದೆ. ಸೀಸನ್ 1, 2 ಹಾಗೂ 3 ಯಶಸ್ವಿಯಾಗಿದ್ದು, ಈ ಬಾರಿ ಸೀಸನ್ 4 ನಡೆಯಲಿದೆ ಎಂದರು.
ಅಕ್ಟೋಬರ್ 17 ರಂದು ಬೆಳಗ್ಗೆ 10:30ಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಸರಸ್ವತಿ ಶ್ರೀಪಾದಂಗಳವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪಿಲಿಗೊಬ್ಬು ವೇದಿಕೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಜೆ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಪುತ್ತೂರಿನ ಪ್ರತಿಷ್ಠಿತ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಈ ಬಾರಿಯ ಪಿಲಿಗೊಬ್ಬು ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರಸಿದ್ಧ 9 ಆಯ್ದ ಹುಲಿವೇಷ ತಂಡಗಳು ಭಾಗವಹಿಸಲಿವೆ. ಅತ್ಯುತ್ತಮ ಪ್ರದರ್ಶನ ನೀಡುವ ತಂಡಕ್ಕೆ ಪ್ರಥಮ ಬಹುಮಾನವಾಗಿ 4 ಲಕ್ಷ ರೂ., ದ್ವಿತೀಯ ಬಹುಮಾನವಾಗಿ 3 ಲಕ್ಷ ರೂ. ಹಾಗೂ ತೃತೀಯ ಬಹುಮಾನವಾಗಿ 2 ಲಕ್ಷ ರೂ. ನೀಡಲಾಗುವುದು. ಇದರೊಂದಿಗೆ ಪ್ರೋತ್ಸಾಹಕ ಬಹುಮಾನಗಳನ್ನೂ ವಿತರಿಸಲಾಗುವುದು, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೂ Rs. 60,000/-ಗೌರವ ಸಂಭಾವನೆ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.
ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ ಪ್ರಶಸ್ತಿ ಹಾಗೂ ಗುಂಪು ಪ್ರಶಸ್ತಿ ವಿಭಾಗಗಳಲ್ಲಿ ಉತ್ತಮ ತಾಸೆ, ಉತ್ತಮ ಬಣ್ಣ ಮತ್ತು ಉತ್ತಮ ಧರಣಿ ಮಂಡಲ ಕುಣಿತಕ್ಕೆ ಪ್ರಶಸ್ತಿಗಳನ್ನು ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ, ಪುತ್ತೂರುದ ಹುಲಿ, ಮುಡಿ ಹಾರಿಸುವುದು ಮತ್ತು ನಾಣ್ಯ ತೆಗೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳಿಗೆ ವಿಶೇಷ ಬಹುಮಾನಗಳಿರಲಿವೆ ಎಂದು ವಿವರಿಸಿದರು.
ಪ್ರತಿ ತಂಡದಲ್ಲಿ 15 ಹುಲಿವೇಷಧಾರಿಗಳು ಭಾಗವಹಿಸಲಿದ್ದು, ಕಲಾ ಪ್ರದರ್ಶನಕ್ಕೆ 20+2 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಹುಲಿವೇಷ ಕುಣಿತ ಕ್ಷೇತ್ರದಲ್ಲಿ ಅನುಭವ ಮತ್ತು ಪರಿಣತಿ ಹೊಂದಿರುವ ಜಿಲ್ಲೆಯ ಖ್ಯಾತ ತೀರ್ಪುಗಾರರು ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ. ನವನೀತ್ ಶೆಟ್ಟಿ, ಪಿಲಿಕುಣಿತದಲ್ಲಿ ಹಲವು ವರ್ಷಗಳ ಅನುಭವವುಳ್ಳ ಟೈಗರ್ ಕ್ಯಾಂಪ್ ರಾಜ, ಸತೀಶ್ ಹೊಯಿಗೆ ಬಜಾರ್, ಗಿರೀಶ್ ನಾರಾಯಣ್ ತೀರ್ಪುಗಾರರಾಗಿರುವರು.
ಕೋಸ್ಟಲ್ವುಡ್ ಮತ್ತು ಸ್ಯಾಂಡಲ್ವುಡ್ ತಾರೆಯರ ಮೆರುಗು
ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಲು ಬಾಲಿವುಡ್ ನಟ ಸೋನು ಸೂದ್, ಕರಾವಳಿಯ ಪೃಥ್ವಿ ಅಂಬರ್, ಇನ್’ಫ್ಲುಯೆನ್ಸರ್’ಗಳಾದ ಶ್ರವಣ್, ಚರಣ್ ಚಿಲಿಂಬಿ ಹಾಗೂ ರಾಜ್ಯದ ಪ್ರಸಿದ್ದ ಸ್ಯಾಂಡಲ್ವುಡ್ ನಟ – ನಟಿಯರು ಭಾಗವಹಿಸಲಿದ್ದಾರೆ ಎಂದರು.
ಅಕ್ಟೋಬರ್ 17 ಮತ್ತು 18 ರಂದು ಪುತ್ತೂರು ವುಡ್ ಫೆಸ್ಟ್
ಪಿಲಿಗೊಬ್ಬು ಕಾರ್ಯಕ್ರಮದೊಂದಿಗೆ ಪುತ್ತೂರು ಪುಡ್ ಫೆಸ್ಟ್ ಕೂಡ ನಡೆಯಲಿದೆ. ಅಕ್ಟೋಬರ್ 17 ರಂದು ಶನಿವಾರ ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೆ ಹಾಗೂ ಅಕ್ಟೋಬರ್ 18 ರಂದು ಭಾನುವಾರ ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೆ ಆಹಾರಮೇಳ ಆಯೋಜಿಸಲಾಗಿದೆ.
ಸುಂದರ ಹಾಗೂ ಸುಸಜ್ಜಿತ ಪಗೋಡ ಮಾದರಿಯ ಮಳಿಗೆಗಳಲ್ಲಿ ಬರ್ಗರ್, ಸ್ಯಾಂಡ್ವಿಚ್, ವಿವಿಧ ಬಗೆಯ ದೋಸೆಗಳು, ಶ್ರೀಫಲ ಐಸ್ಲಿಂ, ಗೀ ಪುಡ್ಡಿಂಗ್ – ಗೀ ಮಿನಿ ಇಡ್ಲಿ ವಿವಿಧ ಬಗೆಯ ಐಸ್ಕ್ರೀಮ್ಗಳು, ಮೋಕ್ಟೇಲ್ ಜ್ಯೂಸ್, ಮಟ್ಕಾ ಸೋಡಾ ಹಾಗೂ ಕರಾವಳಿಯ ಸಾಂಪ್ರದಾಯಿಕ ರುಚಿಕರ ಖಾದ್ಯಗಳು ಸೇರಿದಂತೆ ಸುಮಾರು 50 ವಿವಿಧ ಶುದ್ಧ ಸಸ್ಯಾಹಾರಿ ಆಹಾರ ಮಳಿಗೆಗಳು ಆಹಾರ ಪ್ರಿಯರನ್ನು ಆಕರ್ಷಿಸಲಿವೆ. ಆಹಾರ ಮಳಿಗೆಗಳಿಗೆ ಸ್ಟಾಲ್ ಖರ್ಚನ್ನು ಮಾತ್ರ ಭರಿಸುವುದು ಇಲ್ಲಿನ ವಿಶೇಷ ಎಂದರು.
ತುಳುನಾಡಿನ ನಾಡಿಮಿಡಿತವಾಗಿರುವ ಹುಲಿವೇಷ ಕುಣಿತದಂತಹ ದೈವಿಕ ಹಿನ್ನೆಲೆಯ ಜಾನಪದ ಕಲೆಯನ್ನು ಪ್ರೋತ್ಸಾಹಿಸುವುದು ಹಾಗೂ ಈ ಕಲೆಯ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪಿಲಿಗೊಬ್ಬು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯೊಂದಿಗೆ ಆಹಾರ ವೈವಿಧ್ಯವನ್ನೂ ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮಾಧ್ಯಮಗಳು ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡುವ ಮೂಲಕ ಸಹಕರಿಸಬೇಕೆಂದು ಆಯೋಜಕರು ಗೌರವಪೂರ್ವಕವಾಗಿ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕಾರ್ಯಾಧ್ಯಕ್ಷ ರತನ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಕೋಶಾಧಿಕಾರಿ ಅಶೋಕ್ ಅಡೂರ್ ಉಪಸ್ಥಿತರಿದ್ದರು.

























