ಮಂಗಳೂರು, ಅ. 8: ಆಟೋ ರಿಕ್ಷಾದಲ್ಲಿ ಅಜಾಗರೂಕತೆಯಿಂದ ಬಿಟ್ಟುಹೋದ 48 ಗ್ರಾಂ ತೂಕದ ಚಿನ್ನದ ಸರವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಆಟೋ ಚಾಲಕ ಬಸವರಾಜ್ ಅವರು ಪ್ರಾಮಾಣಿಕತೆ ಹಾಗೂ ಮಾನವೀಯತೆ ಮೆರೆದಿದ್ದಾರೆ. ಅವರ ಈ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಅಜ್ಜಿಲಾ ಅವರು ಸುಲ್ತಾನ್ ಗೋಲ್ಡ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ಸರವನ್ನು ಖರೀದಿಸಿದ್ದರು. ಬಳಿಕ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನದ ಸರವಿದ್ದ ಬ್ಯಾಗ್ ಅನ್ನು ಅಜಾಗರೂಕತೆಯಿಂದ ಆಟೋದಲ್ಲೇ ಬಿಟ್ಟು ತೆರಳಿದ್ದರು.
ಪ್ರಯಾಣ ಮುಗಿದ ಬಳಿಕ ಬ್ಯಾಗ್ ಕಾಣೆಯಾಗಿರುವುದು ಗಮನಕ್ಕೆ ಬಂದಾಗ ಅಜ್ಜಿಲಾ ಅವರು ಆತಂಕಗೊಂಡು ಚಿನ್ನದ ಸರಕ್ಕಾಗಿ ಹುಡುಕಾಟ ನಡೆಸಿದ್ದರು. ಈ ನಡುವೆ ಆಟೋ ಚಾಲಕ ಬಸವರಾಜ್ ಅವರಿಗೆ ಬ್ಯಾಗ್ ಸಿಕ್ಕಿದ್ದು, ಅದರಲ್ಲಿದ್ದ ಚಿನ್ನದ ಸರವನ್ನು ತಮ್ಮ ಬಳಿ ಇಟ್ಟುಕೊಳ್ಳದೆ ವಾರಸುದಾರರಿಗೆ ಸುರಕ್ಷಿತವಾಗಿ ಹಿಂದಿರುಗಿಸಿದ್ದಾರೆ.ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಸಿಕ್ಕರೂ ಅದನ್ನು ಪ್ರಾಮಾಣಿಕವಾಗಿ ಮಾಲೀಕರಿಗೆ ಮರಳಿಸಿದ ಬಸವರಾಜ್ ಅವರ ನಡೆ ಎಲ್ಲರಿಗೂ ಮಾದರಿಯಾಗಿದೆ. ಚಿನ್ನಕ್ಕಿಂತಲೂ ಮಿಗಿಲಾದದ್ದು ಪ್ರಾಮಾಣಿಕತೆ ಎಂಬುದನ್ನು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿರುವ ಆಟೋ ಚಾಲಕನಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
























