ಪುತ್ತೂರು: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2023-2024ರ ಅವಧಿಯಲ್ಲಿ ಒಟ್ಟು 4,02,07,950 ಫಲಾನುಭವಿಗಳಿಗೆ ರೂ. 6,40,87,95,242 ಅನುದಾನ ಬಿಡುಗಡೆಯಾಗಿದೆ. ಶಕ್ತಿ ಯೋಜನೆಯಡಿಯಲ್ಲಿ ಈಗಾಗಲೇ 39963277 ಫಲಾನುಭವಿಗಳಿಗೆ ರೂ. 99,00,21,441 ಅನುದಾನ ಮಂಜೂರುಗೊAಡಿದ್ದು, ಅತೀ ಶೀಘ್ರದಲ್ಲಿ 100 ಕೋಟಿ ಅನುದಾನದತ್ತ ತಲುಪಲಿದೆ ಎಂದು ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ತಿಳಿಸಿದರು.
ಅವರು ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರದ ಯೋಜನೆಗಳು ಪಾರದರ್ಶಕವಾಗಿ ಫಲಾನುಭವಿಗಳನ್ನು ತಲುಪಬೇಕು ಎಂಬ ಉದ್ದೇಶದಿಂದ ಗೃಹಜ್ಯೋತಿಯ ರೀತಿ ಗೃಹಲಕ್ಷ್ಮೀ ಯೋಜನೆಯನ್ನು ಪರಿಶೀಲನೆ ನಡೆಸಲಾಗುತ್ತದೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಪರಿಶೀಲನಾ ಕಾರ್ಯ ಇನ್ನೂ ಆರಂಭಗೊಂಡಿಲ್ಲ, ಮುಂದೆ ಸಂಬಂಧಪಟ್ಟ ಇಲಾಖೆಯ ಸಿಬಂದಿಗೆ ಸೂಕ್ತ ತರಬೇತಿ ಲಭಿಸಿದ ಬಳಿಕ ಪರಿಶೀಲನೆ ಆರಂಭಗೊಳ್ಳುತ್ತದೆ. ಈ ಬಗ್ಗೆ ಯಾರೂ ಗೊಂದಲಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಮುಂದಿನ ದಿನಗಳಲ್ಲಿ ಫಲಾನುಭವಿಗಳ ಮನೆಗೆ ತೆರಳಿ ಜಿಪಿಎಸ್ ಮೂಲಕ ಪರಿಶೀಲನೆ ನಡೆಯಲಿದೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಮಾಹಿತಿಗಳನ್ನು ಯಾರೂ ನಂಬಬಾರದು. ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಫಲಾನುಭವಿಗಳು ಗೊಂದಲದಿಂದ ಗ್ಯಾರಂಟಿ ಅನುಷ್ಠಾನ ಸಮಿತಿಯವರು, ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆ. ಪರಿಶೀಲನೆ ನಡೆಯುವವರೆಗೆ ಈಗ ಹಣ ಪಾವತಿಯಾಗುತ್ತಿರುವ ಎಲ್ಲರಿಗೂ ಹಣ ಪಾವತಿಯಾಗುತ್ತದೆ. ಅದರ ಬಳಿಕ ಅರ್ಹರಾಗಿದ್ದರೆ ಹಣ ಪಾವತಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ತಾಲೂಕಿನ 321 ಮಹಿಳೆಯರಿಗೆ ಮೃತಪಟ್ಟ ಬಳಿಕವೂ ಗೃಹಲಕ್ಷ್ಮೀ ಮೊತ್ತ ಪಾವತಿ:
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿ ಫಲಾನುಭವಿಗಳು ಮೃತಪಟ್ಟ ಬಳಿಕ ಯೋಜನೆಯಲ್ಲಿ ಪಾವತಿಯಾದ ಹಣದ ಕುರಿತು ಸಹಾಯಕ ಸಿಡಿಪಿಒ ಮಂಗಳಾ ಕಾಳೆ ಅವರು ಮಾಹಿತಿ ನೀಡಿ, ಪುತ್ತೂರು ತಾಲೂಕಿನಲ್ಲಿ 321 ಮಂದಿಗೆ 29,46,000 ರೂ. ನಿಧನ ಹೊಂದಿದ ಬಳಿಕ ಪಾವತಿಯಾಗಿದ್ದು, ಅದರಲ್ಲಿ 10.83 ಲಕ್ಷ ರೂ. ಬ್ಯಾಂಕ್ ಗಳಿಂದ ಸರಕಾರಕ್ಕೆ ಪಾವತಿಸಿ 36.78 ಶೇ.ಪ್ರಗತಿ ಸಾಧಿಸಲಾಗಿದೆ. 13.24 ಲಕ್ಷ ರೂ. ಮೊತ್ತವನ್ನು ಮೃತ ಫಲಾನುಭವಿಯ ಕುಟುಂಬದ ಸದಸ್ಯರು ಬ್ಯಾಂಕಿನಿಂದ ಡ್ರಾ ಮಾಡಿಕೊಂಡಿದ್ದಾರೆ ಎಂದು ವಿವರ ನೀಡಿದರು.
ಮಹಿಳೆಯರಿಗೆ ಉಚಿತವಾದರೂ, ಟಿಕೇಟ್ ನೀಡಬೇಕು:
ಅನಂತಾಡಿಯ ಬಸ್ಸಿನ ಬೇಡಿಕೆಯ ಕುರಿತು ಅಧ್ಯಕ್ಷರು ಕೆಎಸ್‌ಆರ್‌ಟಿಸಿ ಪುತ್ತೂರು ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್ ಅವರಲ್ಲಿ ಪ್ರಶ್ನಿಸಿದರು. ಪುತ್ತೂರು – ಮಂಗಳೂರು ಎಕ್ಸ್ ಪ್ರೆಸ್ ಬಸ್ಸಿನಲ್ಲಿ ಚಾಲಕ-ನಿರ್ವಾಹಕನ ಜವಾಬ್ದಾರಿಯನ್ನು ಒಬ್ಬರೇ ನಿರ್ವಹಿಸುತ್ತಿದ್ದು, ಅಲ್ಲಿ ಮಹಿಳೆಯರಿಗೆ ಉಚಿತ ಎಂದು ಟಿಕೆಟ್ ನೀಡದೇ ಇರುವ ದೂರುಗಳು ಕೇಳಿ ಬರುತ್ತಿದೆ. ಉಚಿತವಾದರೂ ಟಿಕೆಟ್ ನೀಡುವುದು ಕಡ್ಡಾಯವಾಗಿದ್ದು, ಈ ಕುರಿತು ಬಸ್ಸಿನ ಸಿಬಂದಿ ಹೆಚ್ಚಿನ ಮುತುವರ್ಜಿ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಅಧ್ಯಕ್ಷರು ತಿಳಿಸಿದರು.
ಚೆಲ್ಲಿದ ಅಕ್ಕಿಯನ್ನು ಗುಡಿಸಿ ಫಲಾನುಭವಿಗಳಿಗೆ ನೀಡಬಾರದು:
ಪುತ್ತೂರಿನ ಯಾವುದೋ ಒಂದು ಭಾಗದ ನ್ಯಾಯ ಬೆಲೆ ಅಂಗಡಿಯಲ್ಲಿ ಚೆಲ್ಲಿದ ಅಕ್ಕಿಯನ್ನು ಗುಡಿಸಿ ಬಳಿಕ ಗೋಣಿ ತುಂಬಿಸಿ ಫಲಾನುಭವಿಗಳಿಗೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಯಾವುದೇ ಕಾರಣಕ್ಕೂ ಅಕ್ಕಿ ಕೆಳಗೆ ಬೀಳದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕೆಳಗೆ ಬಿದ್ದರೂ ಅದನ್ನು ಫಲಾನುಭವಿಗಳಿಗೆ ನೀಡಬಾರದು. ಜತೆಗೆ ನ್ಯಾಯಬೆಲೆ ಅಂಗಡಿಗಳಿಗೆ ಬಂದ ಗೋಣಿ ಚೀಲದಲ್ಲಿ ಅಕ್ಕಿಯನ್ನು ಫಲಾನುಭವಿಗಳಿಗೆ ನೀಡಬಾರದು. ಗೋಣಿಗಳನ್ನು ತಿಂಗಳ ಕೊನೆಯವರೆಗೆ ಇಟ್ಟು ಪರಿಶೀಲನೆಯ ಬಳಿಕ ಜತೆಯಾಗಿ ಏಲಂ ಮಾಡಬೇಕು ಎಂಬ ನಿಯಮವಿದೆ ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು. ಅನ್ನಭಾಗ್ಯ ಯೋಜನೆಯ ಕುರಿತು ಆಹಾರ ಇಲಾಖೆ ಸರಸ್ವತಿ ಅವರು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯ ಪರಿಶೀಲನಾ ಕಾರ್ಯದ ಕುರಿತು ಮೆಸ್ಕಾಂ ಎಇಇ ರಾಜೇಶ್ ಅವರು ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ಪರಿಶೀಲನೆ ಮಾಡಿರುವ ಮನೆಗಳು, ಬಾಕಿ ಇರುವ ಮನೆಗಳ ಮಾಹಿತಿಯನ್ನು ಪಂಚಾಯತ್ ವಾರು ಸಮಿತಿಗೆ ನೀಡುವಂತೆ ಅಧ್ಯಕ್ಷರು ತಿಳಿಸಿದರು. ಪುತ್ತೂರಿನ ನೈತಾಡಿಯ ಮನೆಯೊಂದರ ವಿದ್ಯುತ್ ಸಂಪರ್ಕ ಗೊಂದಲದ ಕುರಿತು ಸಮಿತಿ ಸದಸ್ಯ ಸಂತೋಷ್ ರೈ ಚಿಲ್ಮೆತ್ತಾರ್ ಅವರು ಸಭೆಯ ಗಮನಕ್ಕೆ ತಂದಿದ್ದು, ಅದು ಲೇಔಟ್ ಮಾದರಿಯ ನಿವೇಶನವಾಗಿದ್ದು, ಅದಕ್ಕೆ 1 ಕಿಲೋವ್ಯಾಟ್ ಗೆ 6 ಸಾವಿರ ರೂ.ಗಳಂತೆ ಮೊತ್ತವನ್ನು ಮೆಸ್ಕಾಂಗೆ ಪಾವತಿಸಬೇಕಾಗುತ್ತದೆ ಎಂದು ಎಇಇ ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿ, ಯೋಜನಾ ನಿರ್ದೇಶಕಿ ಶೋಭಾ ವಂದಿಸಿದರು.

























