ಕೃಷಿ

ಫಸಲ್ ಭೀಮಾ ವಿಮಾ ಪರಿಹಾರದಲ್ಲಿ ತಾರತಮ್ಯ: ತನಿಖೆಗೆ ಆಗ್ರಹಿಸಿದ ಸಂಜೀವ ಮಠಂದೂರು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾವತಿಯಾಗಿರುವ ಕೇಂದ್ರ ಸರಕಾರದ ಹವಾಮಾನ ಆಧಾರಿತ ಫಸಲ್ ಭೀಮಾ ಬೆಳೆ ವಿಮಾ ಯೋಜನೆಯ ಮೊತ್ತದಲ್ಲಿ ತಾರತಮ್ಯ ಎಸಗಲಾಗಿದೆ. ರೈತರಿಗೆ ಆಗಿರುವ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದರು.

gl

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿಗೆ ಜಾರಿಗೆ ತಂದಿರುವ ಹವಾಮಾನ ಆಧಾರಿತ ಫಸಲ್ ಭಿಮಾ ಬೆಳೆ ವಿಮಾ ಯೋಜನೆಯು 2023ನೇ ಸಾಲಿನವರೆಗೆ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿತ್ತು. ಬಳಿಕ ಸಾಕಷ್ಟು ವ್ಯತ್ಯಾಸಗಳು ಕಂಡುಬಂದು ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ಪಾವತಿಯಾಗಿರುವ ವಿಮಾ ಪರಿಹಾರ ಮೊತ್ತದಲ್ಲಿ ತಾರತಮ್ಯ ಎಸಗಲಾಗಿದೆ. ರಾಜ್ಯ ಸರಕಾರ, ಅಧಿಕಾರಿಗಳು ಮೌನವಹಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ಹಿಂದೆ ಯಾರದ್ದೋ ಕೈವಾಡವಿರುವ ಶಂಕೆಗಳಿದ್ದು, ಷಡ್ಯಂತ್ರ, ಭ್ರಷ್ಟಾಚಾರ ಇರುವ ಅನುಮಾನವೂ ಮೂಡುತ್ತಿದೆ. ವಿಮಾ ಕಂಪೆನಿಗಳ ತಾರತಮ್ಯದ ಕುರಿತು ಸಮಗ್ರ ತನಿಖೆ ಮಾಡಬೇಕು. ಜತೆಗೆ ಈ ಬಾರಿ ಇಡೀ ಜಿಲ್ಲೆಗೆ ಎಷ್ಟು ಪರಿಹಾರ ಮೊತ್ತ ಪಾವತಿಯಾಗಿದೆ ಎಂಬುದನ್ನು ಕೂಡ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಫಸಲ್ ಭಿಮಾ ಯೋಜನೆಗೆ ಪ್ರೀಮಿಯಂ ಪಾವತಿಗೆ ಸಂಬAಧಿಸಿ 5 ಶೇ.ರೈತರು, 10 ಶೇ. ಕೇಂದ್ರ ಹಾಗೂ 20 ಶೇ. ರಾಜ್ಯ ಸರಕಾರ ಪಾವತಿ ಮಾಡುತ್ತಿದ್ದು, ಯೋಜನೆಯ ಅನುಷ್ಠಾನವನ್ನು ರಾಜ್ಯ ಸರಕಾರ ನಿರ್ವಹಿಸುವ ನಿಟ್ಟಿನಲ್ಲಿ ಸೂಕ್ತ ನಿಯಮಾವಳಿಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ತೋಟಗಾರಿಕೆ ಇಲಾಖೆಯ ಡಿಡಿಯವರು ಕಾರ್ಯದರ್ಶಿಯಾಗಿರುತ್ತಾರೆ.

2025-26ನೇ ಸಾಲಿನ ದ.ಕ.ಜಿಲ್ಲೆಯ ಬೆಳೆ ವಿಮೆ ಪಾವತಿಗೆ ಸಂಬಂಧಿಸಿ ಅಡಿಕೆ 840.74 ಕೋ.ರೂ.ಗಳ ಬೆಳೆ ವಿಮೆಯ ಮೊತ್ತಕ್ಕೆ 294.24 ಕೋ.ರೂ. ಪ್ರಿಮಿಯಂ ಪಾವತಿಯಾಗಿದೆ. 1 ಹೆಕ್ಟೇರ್ ಗೆ ಸುಮಾರು 45 ಸಾವಿರ ರೂ.ಗಳಷ್ಟು ವಿಮಾ ಮೊತ್ತ ಪಾವತಿಯಾಗಿದ್ದು, ಆದರೆ ರೈತರಿಗೆ ವಿಮಾ ಪರಿಹಾರ ಮೊತ್ತ ಪಾವತಿ ಮಾಡುವಾಗ ಅದಕ್ಕಿಂತಲೂ ಕಡಿಮೆ ಮೊತ್ತವನ್ನು ನೀಡುತ್ತಿದ್ದಾರೆ. ಉದಾಹರಣೆಗೆ ಪುತ್ತೂರಿನ ಬಜತ್ತೂರು ಗ್ರಾಮದ ಒಬ್ಬ ಅಡಿಕೆ ಬೆಳೆಗಾರನಿಗೆ ಹೆಕ್ಟೇರ್ ಗೆ 10,800 ರೂ. ವಿಮಾ ಪರಿಹಾರ ಮೊತ್ತ ನೀಡಿದರೆ, ಕೊಳ್ತಿಗೆ ಗ್ರಾಮದಲ್ಲಿ ಹೆಕ್ಟೇರ್ ಗೆ 51,824 ರೂ. ಪಾವತಿಸಿದ್ದು, ಈ ರೀತಿಯ ತಾರತಮ್ಯ ಮಾಡಲಾಗಿದೆ.

ವಾರ್ಷಿಕ ಮಳೆ ಹಾಗೂ ತಾಪಮಾನವನ್ನು ನೋಡಿಕೊಂಡು ವಿಮಾ ಪರಿಹಾರ ನೀಡಲಾಗುತ್ತಿದ್ದು, ಆದರೆ ಕೆಲವೊಂದು ಭಾಗದಲ್ಲಿ ಅಂತಹ ಮಾಪಕಗಳು ಕೂಡ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂಬುದು ಕಳೆದ ವರ್ಷ ನಾವು ಸತ್ಯಶೋದನಾ ಸಮಿತಿ ಮಾಡಿ ಜಿಲ್ಲೆಯಲ್ಲಿ ತಿರುಗಾಡಿದಾಗ ಈ ವಿಚಾರ ತಿಳಿದುಬಂದಿತ್ತು. ಈ ಎಲ್ಲಾ ಲೋಪದ ಕಾರಣಕ್ಕೆ ರೈತರು ವಿಮಾ ಮೊತ್ತ ಪಾವತಿಸಿದ ಸಹಕಾರಿ ಸಂಘಗಳನ್ನು ಪ್ರಶ್ನೆ ಮಾಡುವಂತಾಗಿದೆ.

ಈ ಬಾರಿ ಅಡಿಕೆ ಧಾರಣೆ ಕುಸಿತದಿಂದ ರೈತರು ಕಂಗಾಲಾಗಿದ್ದು, ಪ್ರಸ್ತುತ ವಿಮಾ ಪರಿಹಾರದಲ್ಲೂ ಅನ್ಯಾಯ ಮಾಡಲಾಗಿದೆ. ಜತೆಗೆ ರಾಜ್ಯ ಸರಕಾರ ಕಿಸಾನ್ ಸಮ್ಮಾನ್ ನಿಧಿಯ 4 ಸಾವಿರ ರೂ. ಕಡಿತ ಮಾಡಿದ್ದು, ರೈತ ವಿದ್ಯಾನಿಧಿಯನ್ನೂ ನಿಲ್ಲಿಸಿದೆ. ಬರ ತಾಲೂಕುಗಳ ಘೋಷಣೆಯಲ್ಲೂ ಜಿಲ್ಲೆಯ ಕೆಲವು ತಾಲೂಕುಗಳಿಗೆ ಅನ್ಯಾಯ ಮಾಡಿದೆ. ಈ ರೀತಿಯಲ್ಲಿ ರಾಜ್ಯ ಸರಕಾರ ಒಂದಲ್ಲ ಒಂದು ರೀತಿಯಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ದಯಾನಂದ ಶೆಟ್ಟಿ ಉಜಿರೆಮಾರ್, ಶಿವಕುಮಾರ್ ಕಲ್ಲಿಮಾರ್, ಶರತ್, ಶಶಿಧರ್ ನಾಯಕ್, ರಾಜೇಶ್ ಬನ್ನೂರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ರಬ್ಬರ್ ಮೌಲ್ಯವರ್ಧನೆಗಾಗಿ ಸ್ಥಳೀಯ ಕೈಗಾರಿಕೆ | ರಾಜ್ಯ ರಬ್ಬರ್ ಬೆಳೆಗಾರರ ಸಮ್ಮೇಳನದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ

ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಅಧ್ಯಯನ ಮಾಡಿಕೊಂಡು ರಬ್ಬರ್ ಮಂಡಳಿ…