ಕೃಷಿ

ರಾಜ್ಯಕ್ಕೆ ದೇಶದ ನಂಬರ್ ವನ್ ಕೃಷಿ ಪುರಸ್ಕಾರ | ಪುತ್ತೂರಿನಲ್ಲಿ ಕೃಷಿ ಮೇಳ – ಸಸ್ಯಜಾತ್ರೆ ಉದ್ಘಾಟಿಸಿ ಕೃಷಿ ಸಚಿವ ಚೆಲುವರಾಯ ಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕರ್ನಾಟಕದ ಕೃಷಿ ಈಗ ಜಗತ್ತಿನ ಗಮನ ಸೆಳೆದಿದ್ದು, ದೇಶದಲ್ಲೇ ನಂಬರ್ ವನ್ ಕೃಷಿ ಎಂಬ ಪುರಸ್ಕಾರವನ್ನು ಕೇಂದ್ರದಿಂದ ಪಡೆದುಕೊಂಡಿದೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು.

maithri

ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ಜಿಲ್ಲಾ  ಕೃಷಿಕ ಸಮಾಜ ದಕ್ಷಿಣ ಕನ್ನಡ ಇವರ ಸಾರಥ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸುದ್ದಿ ಅರಿವು ಕೇಂದ್ರ, ರೈತ ಕುಡ್ಲ ಪ್ರತಿಷ್ಠಾನ ಸಹಯೋಗದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಶನಿವಾರ ಆರಂಭಗೊಂಡ 3 ದಿನಗಳ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ- ಸಸ್ಯಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸರಕಾರ ಗೊಬ್ಬರ, ಬಿತ್ತನೆ ಬೀಜ ಸಮಸ್ಯೆಗಳನ್ನು ಕೇಂದ್ರದ ಅಸಹಕಾರದ ನಡುವೆಯೂ ನಿವಾರಿಸಿದೆ. ಕೆಲವೇ ತಾಲೂಕುಗಳಲ್ಲಿದ್ದ ಕೃಷಿ ಭಾಗ್ಯ ಯೋಜನೆಯನ್ನು ಎಲ್ಲ  224 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸಿದೆ. ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯ  ಪರಿಹಾರ ಮೊತ್ತ ಪಾವತಿಯಲ್ಲಿ  ಆಗಿರುವ ಸಮಸ್ಯೆ  ನಿವಾರಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಗ್ರಾಮೀಣ ಭಾಗದಲ್ಲಿ ಅಳವಡಿಸಲಾದ ಮಳೆ ಮಾಪಕ, ಹವಾಮಾನ ಮಾಪಕಗಳ ಅವೈಜ್ಞಾನಿಕತೆಯನ್ನು  ಮಳೆಗಾಲ ಆರಂಭಕ್ಕೆ ಮುನ್ನ  ಸರಿಪಡಿಸಲಾಗುವುದು. ಪರಿಹಾರ ಪಾವತಿಯಲ್ಲಿ ಉಂಟಾದ ತಾರತಮ್ಯ ನಿವಾರಣೆಗೆ ತೋಟಗಾರಿಕೆ ಖಾತೆ ಸಚಿವರು ಈಗಾಗಲೇ ಉಪಕ್ರಮ ಆರಂಭಿಸಿದ್ದಾರೆ ಎಂದರು.

ಬೆಳೆ ವಿಮೆಯಲ್ಲಾದ ಅನ್ಯಾಯದ ಬಗ್ಗೆ ಪುತ್ತೂರು ಶಾಸಕರು ಸದನದಲ್ಲಿ ಗಮನ ಸೆಳೆದಿದ್ದಾರೆ. ನಾನು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್  ಜತೆ ಮಾತನಾಡಿದ್ದೇನೆ. ಸಮಸ್ಯೆ ಸರಿಯಾಗಲಿದೆ ಎಂದವರು ಭರವಸೆ ನೀಡಿದರು.

ವಿಮೆ ಯೋಜನೆಯಲ್ಲಿ ರಾಜ್ಯದಲ್ಲಿ ಈಗಾಗಲೇ 5 ಸಾವಿರ ಕೋಟಿ ರೂ. ಪಾವತಿ ಮಾಡಲಾಗಿದೆ.  ಹಿಂದಿನ ವರ್ಷಗಳಲ್ಲಿ ವಿಮೆ ಯೋಜನೆಯ ನೋಂದಣಿ 13 ಲಕ್ಷದಷ್ಟಿದ್ದರೆ, ಈಗ 23 ಲಕ್ಷ ದಾಟಿದೆ. ಕೃಷಿ ಇಲಾಖೆಯಿಂದ 31 ಜಿಲ್ಲೆಗಳಿಗೆ 2500 ಕೋಟಿ ರೂ. ಸಬ್ಸಿಡಿ ನೀಡಿದ್ದೇವೆ. ರಾಜ್ಯದಲ್ಲಿ 83 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಇದ್ದು, 25 ಲಕ್ಷ ಹೆಕ್ಟೇರ್‌ನಲ್ಲಿ ಸಮಿಶ್ರ ಬೆಳೆಯಿದೆ. ನಾನಾ ಕಾರಣಗಳಿಂದ ಕೃಷಿ ಪ್ರದೇಶ ಕಡಿಮೆಯಾಗುತ್ತಿದೆ. ಈ ಹಂತದಲ್ಲಿ ರೈತರು ಯಾಂತ್ರಿಕ  ಕೃಷಿ, ಸಮಗ್ರ ಕೃಷಿಗೆ ಆದ್ಯತೆ ನೀಡಬೇಕು. ತಾವು ಬೆಳೆದ ಬೆಳೆಗಳನ್ನು ತಾವೇ ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ಬಿಟ್ಟರೆ ಆದಾಯದಲ್ಲಿ ಐದಾರು ಪಟ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಎಂದರು.

ಎಸ್‌ಸಿ- ಎಸ್‌ಟಿ ರೈತರಿಗೆ ಕೆಲವೊಂದು ಸವಲತ್ತುಗಳಲ್ಲಿ ನೀಡಲಾಗುತ್ತಿದ್ದ ಶೇ. 90 ಸಬ್ಸಿಡಿಯನ್ನು ಇತರ ಸಮುದಾಯಗಳಿಗೆ  ವಿಸ್ತರಿಸಲಾಗಿದೆ. ಭತ್ತಕ್ಕೆ ಪ್ರೋತ್ಸಾಹಧನ ನೀಡಲಾಗುವುದು. ಮಣ್ಣು ಪರೀಕ್ಷೆ ಕೇಂದ್ರ ಯೋಜನೆ ಯಶಸ್ವಿಯಾಗಿ ಜಾರಿ ಮಾಡಲಾಗಿದೆ ಎಂದವರು ನುಡಿದರು.

ಬ್ರಹ್ಮಾವರದಲ್ಲಿ ಕೃಷಿ ಕಾಲೇಜು

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ಸರಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ದಕ್ಷಿಣ ಕನ್ನಡ, ಉಡುಪಿ,  ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನು  ಒಳಗೊಂಡು ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪಿಸಲಾಗುವುದು. ಈಗಾಗಲೇ ಕಾಲೇಜಿಗೆ ಮಂಜೂರಾತಿ ನೀಡಲಾಗಿದೆ ಎಂದು ಚೆಲುವರಾಯ ಸ್ವಾಮಿ ಹೇಳಿದರು.

ಕೃಷಿಗೆ ಸೇರಿಸಲು ಆಗ್ರಹ:

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶಾಸಕ ಅಶೋಕ್ ರೈ, ಅಡಕೆ, ರಬ್ಬರ್ ಸೇರಿದಂತೆ 28 ಬೆಳೆಗಳನ್ನು ಕೃಷಿ ಬೆಳೆಗಳೆಂದು ಘೋಷಿಸಲು ಕೇಂದ್ರಕ್ಕೆ ರಾಜ್ಯದಿಂದ ಶಿಫಾರಸು ಮಾಡಲಾಗಿದೆ. ಇದರ ಅನುಷ್ಠಾನದ ನಿಟ್ಟಿನಲ್ಲಿ ಸರಕಾರ ಇನ್ನಷ್ಟು ಶ್ರಮಿಸಬೇಕೆಂದು ಆಗ್ರಹಿಸಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಕಾಡು ಪ್ರಾಣಿಗಳ ಹಾವಳಿ, ರೋಗ ಹಾವಳಿಯಿಂದ ಕಂಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯ ರೈತರ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂದರು. 

ಕೃಷಿ ಮೇಳದ ಸಂಚಾಲಕ, ಮಾಜಿ ಶಾಸಕ ಸಂಜೀವ ಮಠಂದೂರು ದಕ್ಷಿಣ ಕನ್ನಡ ಜಿಲ್ಲೆಯ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು.

ಆನೆ ದಾಳಿಯಿಂದ  ಜಿಲ್ಲೆಯಲ್ಲಿ 5 ಸಾವು ಸಂಭವಿಸಿದೆ. ಕಾಡುಪ್ರಾಣಿ, ಪಕ್ಷಿಗಳ ಹಾವಳಿಯಿಂದ ರೈತರು ಮತ್ತು ಬೆಳೆಗಳನ್ನು ರಕ್ಷಿಸಲು ಮತ್ತು ಪರಹಾರ ನೀಡಲು ಕ್ರಮ ಕೈಗೊಳ್ಳಬೇಕು.

ಎಲೆಚುಕ್ಕಿ ರೋಗ, ಹಳದಿ ರೋಗ, ಕೊಳೆರೋಗದಿಂದ  ನಾಶವಾಗಿರುವ ಅಡಕೆ ಬೆಳೆಗೆ ಪರಿಹಾರ ನೀಡಬೇಕು. ಈ ಬಾರಿ ಬೆಳೆ ವಿಮೆ ಪಾವತಿಯಲ್ಲಾಗಿರುವ ತಾರತಮ್ಯ ನಿವಾರಿಸಬೇಕು. ಮಳೆಮಾಪಕ, ಹವಾಮಾನ ಮಾಪಕದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ದ.ಕ.ದಲ್ಲಿ ಹಡಿಲು ಬಿದ್ದಿರುವ ಭತ್ತದ ಗದ್ದೆಗಳಲ್ಲಿ ಬೇಸಾಯ ಮಾಡುವ ರೈತರಿಗೆ ಕೇರಳ ಮಾದರಿಯಲ್ಲಿ ಪರಿಹಾರ ನೀಡಬೇಕು.

ಕೃಷಿ  ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಅದನ್ನು ನಿವಾರಿಸಬೇಕು ಎಂದು ಗಮನ ಸೆಳೆದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರ್ನಾಟಕ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ವಿಜಯ ಕುಮಾರ ರೈ ಕೋರಂಗ, ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕರ್ನಾಟಕ ಕೃಷಿಕ ಸಮಾಜದ ನಿಕಟಪೂರ್ವ ರಾಜ್ಯಾಧ್ಯಕ್ಷ ಮಂಜುನಾಥ ಗೌಡ ಎಸ್.ಆರ್., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಜಿಲ್ಲಾ  ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಬೀಜ ಮತ್ತು ಸಾವಯವ ನಿಗಮದ ಅಧ್ಯಕ್ಷೆ ಲಾವಣ್ಯ ಬಳ್ಳಾಲ್, ದ.ಕ.ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಚಂದ್ರ ಕೋಲ್ಚಾರ್, ಕೃಷಿ ಇಲಾಖೆ ಅಧಿಕಾರಿಗಳು, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಸಾಧಕ ಪ್ರಶಸ್ತಿ ಪ್ರದಾನ

ಪಂಜಿಗುಡ್ಡೆ ಈಶ್ವರ ಭಟ್ ಪುತ್ತೂರು, ಕಾಂತಪ್ಪ ಪೂಜಾರಿ ಬೆಳ್ತಂಗಡಿ, ಪ್ರತಿಭಾ ಹೆಗ್ಡೆ ಮಂಗಳೂರು, ಪ್ರೇಮನಾಥ ಶೆಟ್ಟಿ ಬಂಟ್ವಾಳ, ಅರವಿಂದ ಮುಳ್ಳಂಕೊಚ್ಚಿ ಕಡಬ, ಪ್ರಮಿಳಾ ಎಸ್. ಶೆಟ್ಟಿ ಮೂಲ್ಕಿ, ಜಿ.ಟಿ. ರಾಜಾರಾಂ ಭಟ್ ಉಳ್ಳಾಲ, ಡಿ.ಎನ್. ಚಂದ್ರಶೇಖರ್ ಸುಳ್ಯ, ನಾಗಪ್ಪ ಪೂಜಾರಿ ಮೂಡುಬಿದ್ರೆ ಇವರಿಗೆ ಅತ್ಯುತ್ತಮ ಕೃಷಿ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೆಂಕಪ್ಪ ಜಿ. ಗೋಳ್ತಮಜಲು ಬಂಟ್ವಾಳ, ಶೀನಪ್ಪ ಪೂಜಾರಿ ಹೊಸಮಠ ಕಡಬ, ಲಿಂಗಪ್ಪ ಮಡಿವಾಳ ಬೆಳ್ತಂಗಡಿ, ತೀರ್ಥರಾಮ ಬೈತಡ್ಕ ಸುಳ್ಯö, ಮೋಹನದಾಸ್ ಕಾಮತ್ ಪುತ್ತೂರು ಇವರನ್ನು ಅತ್ಯುತ್ತಮ ಕೃಷಿ ಕೂಲಿ ಕಾರ್ಮಿಕ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಕೃಷಿ ಸಲಕರಣೆ ಉತ್ಪಾದಕ ಉದ್ಯಮಿ ಪುರಸ್ಕಾರವನ್ನು ಕೇಶವ ಗೌಡ ಅಮೈಗುತ್ತು, ಕೆ.ಪಿ. ಮಹಮ್ಮದ್ ಸಾದಿಕ್, ಪುರುಷೋತ್ತಮ ಬಿ. ಇವರಿಗೆ ನೀಡಲಾಯಿತು.

ಗುರುಪ್ರಿಯಾ ಕಾಮತ್, ಚಂದ್ರಶೇಖರ್ ಹೆಗ್ಡೆ, ಶಿವಾನಂದ್ ನಾಡಗೀತೆ ಮತ್ತು ರೈತ ಗೀತೆ ಹಾಡಿದರು. ಕೃಷಿ ಮೇಳ ಸಮಿತಿ  ಕಾರ್ಯಾಧ್ಯಕ್ಷ ಪದ್ಮನಾಭ ರೈ ಕಲ್ಲಡ್ಕ ಸ್ವಾಗತಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರಬ್ಬರ್ ಮೌಲ್ಯವರ್ಧನೆಗಾಗಿ ಸ್ಥಳೀಯ ಕೈಗಾರಿಕೆ | ರಾಜ್ಯ ರಬ್ಬರ್ ಬೆಳೆಗಾರರ ಸಮ್ಮೇಳನದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ

ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಅಧ್ಯಯನ ಮಾಡಿಕೊಂಡು ರಬ್ಬರ್ ಮಂಡಳಿ…