ಪುತ್ತೂರು: ಜೀವನ ರೂಪಿಸಿಕೊಳ್ಳಬೇಕಾದ ವಿದ್ಯೆಯನ್ನು ಪ್ರತಿಯೊಂದು ಪ್ರಾಣಿ ಪಕ್ಷಿಗಳಂತೆ ದೇವರು ನೀಡಿದ್ದಾರೆ. ಆದರೆ ಮನುಷ್ಯನಲ್ಲಿರುವ ವಿಶೇಷವೇನೆಂದರೆ ಹೊಸತನ. ತನ್ನ ದೈನಂದಿನ ಜೀವನದ ಜೊತೆಗೆ ವಿಮಾನ, ಜಲಾಂತರ್ಗಾಮಿ ಹೀಗೆ ಅನೇಕ ಹೊಸತನಗಳಿಗೂ ಮನುಷ್ಯ ಮುಂದಾದ. ಈ ಅಭಿವೃದ್ಧಿ ವಿನಾಶಕ್ಕೆ ಕಾರಣ ಆಗದಂತೆ ಜಾಗೃತೆ ವಹಿಸಬೇಕಾದ ಅವಶ್ಯ ನಮ್ಮ ಮುಂದಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅಕ್ಷಯ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನೇತೃತ್ವದ ವೃತ್ತಿಪರ ಶಿಕ್ಷಣ ಅಕ್ಷಯ ಪದವಿ ಕಾಲೇಜು, ಅಕ್ಷಯ ಪದವಿ ಪೂರ್ವ ಕಾಲೇಜು, ಅಕ್ಷಯ ಕೆರಿಯರ್ ಅಕಾಡೆಮಿ, ಅಕ್ಷಯ ಕೆರಿಯರ್ ಡೆಸ್ಟಿನಿ ಸಕಲ ಸೌಕರ್ಯಗಳೊಂದಿಗೆ ಮೇಲ್ದರ್ಜೆಗೇರಿದ್ದು, ಕಾಲೇಜಿನಲ್ಲಿ ಶಾರದೋತ್ಸವ, ನೂತನ ಸಭಾಂಗಣ, ಲಿಫ್ಟ್, ವಿವಿಧ ಪ್ರಯೋಗಾಲಯ, ಏವಿಯೇಶನ್ ಟ್ರೈನಿಂಗ್ ಸ್ಟುಡಿಯೋ, ವಿದ್ಯಾರ್ಥಿನಿಲಯಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಅಪಾರ ಬುದ್ದಿಶಕ್ತಿ, ಮನಶಕ್ತಿ, ಕ್ತಿಯಾಶೀಲ ಕೈ ಮನುಷ್ಯನ ಹೆಚ್ಚುಗಾರಿಕೆ. ಮನುಷ್ಯ ಮನೆ ನಿರ್ಮಿಸುತ್ತಾನೆ. ಅದೇ ರೀತಿ ಗೀಜಗ ಎಂಬ ಹಕ್ಕಿ ಗೂಡು ಕಟ್ಟುತ್ತದೆ. ಇದೇ ರೀತಿ ಅನೇಕ ಪ್ರಾಣಿ ಪಕ್ಷಿಗಳಿವೆ. ಅವುಗಳಲ್ಲೇನೂ ವಿಶೇಷವಿಲ್ಲ. ಆದರೆ, ಮನುಷ್ಯ ಹೊಸತನಗಳ ಜೊತೆಗೆ ಬದುಕುತ್ತಾನೆ. ಆದರೆ ಸಂಸ್ಕಾರದ ಚೌಕಟ್ಟಿನಿಂದ ಹೊರಹೋಗಬಾರದು ಎನ್ನುವ ಅರಿವು ನಮಗಿರಬೇಕು. ಹಾಗಾಗಿ ಹಿರಿಯರು ಸಂಸ್ಕಾರದ ಜೊತೆಗೆ ಶಿಕ್ಷಣ ನೀಡಿದರು. ಇಂದು ಆವಿಷ್ಕಾರಗೊಂಡ ಏಐ ಬಗ್ಗೆಯೂ ಅನೇಕ ವಿಜ್ಞಾನಿಗಳಿಗೆ ಭಯವಿದೆ. ಕಾರಣ ನಾಶಕ್ಕೂ ಕಾರಣವಾದೀತು ಎಂದು. ಆದ್ದರಿಂದ ಒಂದು ಹಂತಕ್ಕೆ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ ಎಂದರು.
ಅಕ್ಷಯ ಕಾಲೇಜಿನಲ್ಲಿ ಶಾರದೋತ್ಡವ ಮಾಡಿರುವುದು ಉತ್ತಮ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವಂತರಾಗ್ತಾರೆ. ಈ ವಿದ್ಯಾಸಂಸ್ಥೆಯ ಶಾಖೆ ಅನೇಕ ಕಡೆ ಹುಟ್ಟಿಕೊಳ್ಳಲಿ. ಸಂಸ್ಥೆ ಹಾಗೂ ಇಲ್ಲಿನ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಶುಭಹಾರೈಸಿದರು.
ಮೂಡುಬಿದರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಮಕ್ಕಳಿಗೆ ಓದು , ಮಾರ್ಕ್ ಅಂತ ಮಕ್ಕಳಿಗೆ ಒತ್ತಡ ಹಾಕಬೇಡಿ. ಪುಸ್ತಕದ ಹೊರಗೂ ಒಂದು ಬದುಕಿದೆ ಎನ್ನುವುದನ್ನು ತಿಳಿಸಿಕೊಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಯಂತ್ ನಡುಬೈಲು ಮಾತನಾಡಿ, 2019ರಲ್ಲಿ 15 ಮಕ್ಕಳಿಂದ ಪ್ರಾರಂಭವಾದ ಸಂಸ್ಥೆ ಇಂದು ಈ ಹಂತಕ್ಕೆ ಬೆಳೆದು ನಿಂತಿರುವುದು ನಿಮ್ಮೆಲ್ಲರ ಸಹಕಾರದಿಂದ. ನನ್ನದು ಕೋಳಿ, ಕೃಷಿ ಉದ್ಯಮ. ಇಲ್ಲಿಂದ ಶಿಕ್ಷಣ ಕ್ಷೇತ್ರಕ್ಕೆ ಬರುವಂತಾಯಿತು. ಆನಂದ ಆಚಾರ್ಯ ಅವರು ಆರಂಭಿಸಿದ ಗ್ಲೋರಿಯಾ ಕಾಲೇಜನ್ನು ನನಗೆ ನೀಡಿದರು. ಎಲ್ಲಾ ಶಿಕ್ಷಕ, ಮಕ್ಕಳ ಸಹಕಾರದಿಂದ ಸಂಸ್ಥೆ ಇಲ್ಲಿವರೆಗೆ ಬೆಳೆದು ಬರುವಂತಾಯಿತು. ಇಂದು 90 ಸಾವಿರ ಚದರ ಅಡಿಯಷ್ಟು ಬೆಳದು ನಿಂತಿರುವ ಕಟ್ಟಡದಲ್ಲಿ ಕಾಲೇಜು ಕಾರ್ಯನಿರ್ವಹಿಸುತ್ತಿದೆ ಎಂದರು.
ಇಂದು ಎಲ್ಲಾ ಕಡೆಯೂ ನಮ್ಮ ಮಕ್ಕಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವಾಗ, ಎಐ ಕ್ಷೇತ್ರಕ್ಕೆ ಹೋಗುವಾಗ ಅಲ್ಲಿ ನಮ್ಮ ಮಕ್ಕಳು ಕಾಣಸಿಗುತ್ತಾರೆ. ಇದರಿಂದಾಗಿ ಚಿಕ್ಕಮಗಳೂರಲ್ಲೂ ನಮ್ಮ ಶಾಖೆ ತೆರೆಯಲು ಸಹಕಾರಿಯಾಯಿತು ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಭಾರತ್ ಬ್ಯಾಂಕ್ ಮುಂಬೈ ಲಿ. ಅಧ್ಯಕ್ಷ ಜಯಕಾಂತ್ ಸುವರ್ಣ, ರೋಟರಿ 3181 ಇದರ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಮೂರ್ತೆದಾರರ ಮಹಾಮಂಡಳಿ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಉಪಸ್ಥಿತರಿದ್ದು, ಶುಭಹಾರೈಸಿದರು.
ಸಂಸ್ಕೃತ ಒಲಿಂಪಿಯಾಡ್ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಎರಡನೇ ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿ ಅಪೇಕ್ಷಾ ಕೆ.ಜೆ. ಶೆಟ್ಟಿ ಅವರನ್ನು ಗೌರವಿಸಲಾಯಿತು. ಕುಣಿತ ಭಜನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರಥಮ ಬಿಸಿಎ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅಕ್ಷಯ ಪದವಿ ಕಾಲೇಜು ಪ್ರಾಂಶುಪಾಲ ಸಂಪತ್ ಪಿ. ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ ಪದವಿ ಪೂರ್ವ ಕಾಲೇಜು ಅಭಿಲಾಷ್ ಕ್ಷತ್ರೀಯ ಸ್ವಾಗತಿಸಿ, ಆಡಳಿತಾಧಿಕಾರಿ ಡಾ. ಅರ್ಪಿತ್ ಟಿ.ಎ. ವಂದಿಸಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ರಶ್ಮಿ ಕೆ., ಅಕ್ಷಯ ಕೆರಿಯರ್ ಅಕಾಡೆಮಿಯ ಭರತ್ ಕುಮಾರ್ ಒತ್ಲಾಜೆ ಕಾರ್ಯಕ್ರಮ ನಿರೂಪಿಸಿದರು.

























