ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಸಹಕಾರದಲ್ಲಿ ನಡೆಯುತ್ತಿರುವ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಅಭಿಯಾನದಡಿ ಆಯೋಜಿಸಲಾಗುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ–22ರ ಅಂತಿಮ ಕಾರ್ಯಕ್ರಮ ಅಕ್ಟೋಬರ್ 2ರಂದು ಬಲ್ನಾಡಿನಲ್ಲಿ ನಡೆಯಲಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಗ್ರಾಮ ಪಂಚಾಯತ್ ಬಲ್ನಾಡು, ಕನ್ನಡ ಸಂಘ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಬಲ್ನಾಡು ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ, ಅಬುದಾಬಿ ಅವರ ಮಹಾಪೋಷಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಅವರ ನೇತೃತ್ವದಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಿಂದ ಆರಂಭಗೊಂಡ ಸಾಹಿತ್ಯ ಪಯಣವು ಕಳೆದ ಐದು ವರ್ಷಗಳಲ್ಲಿ ತಾಲೂಕಿನ 31 ಗ್ರಾಮಗಳನ್ನು ತಲುಪಿದೆ. ಇದೀಗ 32ನೇ ಹಾಗೂ ಅಂತಿಮ ಗ್ರಾಮವಾದ ಬಲ್ನಾಡಿನಲ್ಲಿ ಕಾರ್ಯಕ್ರಮ ನಡೆಯುವ ಮೂಲಕ ತಾಲೂಕಿನ 32 ಗ್ರಾಮಗಳಲ್ಲೂ ಗ್ರಾಮ ಸಾಹಿತ್ಯ ಸಂಭ್ರಮ ಪೂರ್ಣಗೊಳ್ಳಲಿದೆ.
ವಿದ್ಯಾರ್ಥಿಗಳೇ ಕೇಂದ್ರಬಿಂದು
ಅ.2ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಬಲ್ನಾಡಿನ ಉಜ್ರುಪಾದೆಯಲ್ಲಿರುವ ಕೋಟ ಶಿವರಾಮ ಕಾರಂತ ಸಭಾಂಗಣ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ನಡೆಯುವ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ ವಿದ್ಯಾರ್ಥಿಗಳ ಸಾಹಿತ್ಯಿಕ ಹಾಗೂ ಸೃಜನಶೀಲ ಪ್ರತಿಭೆಗೆ ಆದ್ಯತೆ ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ವೇದಿಕೆ ಕಲ್ಪಿಸಲಾಗಿದೆ.
ಕವಿಗೋಷ್ಠಿ, ಕಥಾಗೋಷ್ಠಿ, ‘ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ’, ‘ನನ್ನ ಆಪ್ತಮಿತ್ರ’, ಪ್ರವಾಸ ಕಥನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವರಚಿತ ಬರಹ ಹಾಗೂ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಬಲ್ನಾಡು ಕಾರ್ಯಕ್ರಮದಲ್ಲಿ ಆರು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ವಿವಿಧ ಸಾಹಿತ್ಯಿಕ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆ ಬಲ್ನಾಡಿನಲ್ಲಿದ್ದ ಶ್ರೀ ವಾಲ್ಮೀಕಿ ಆಶ್ರಮಶಾಲೆ ಪ್ರಸ್ತುತ ಉಪ್ಪಿನಂಗಡಿಗೆ ಸ್ಥಳಾಂತರಗೊಂಡಿದ್ದರೂ, ಅಲ್ಲಿನ ವಿದ್ಯಾರ್ಥಿಗಳು ಸಾಹಿತ್ಯಿಕ ಅವಕಾಶದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅವರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
22 ಸಾಧಕರಿಗೆ ಗ್ರಾಮ ಸಾಹಿತ್ಯ ಪುರಸ್ಕಾರ
ಗ್ರಾಮ ಸಾಹಿತ್ಯ ಸಂಭ್ರಮ ಸರಣಿ–22ರ ಅಂಗವಾಗಿ ಬಲ್ನಾಡು ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಸೇವೆ, ಸಾಧನೆ ಹಾಗೂ ವಿಶೇಷ ಕೊಡುಗೆ ನೀಡಿರುವ 22 ಸಾಧಕರು ಹಾಗೂ ಕಲಾ-ಸಂಸ್ಥೆಗಳಿಗೆ ಗ್ರಾಮ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಕೃಷಿ ಸಂಶೋಧನೆ, ನಾಟಿ ವೈದ್ಯಕೀಯ, ದೈವಾರಾಧನೆ, ಕಲೆ-ಸಾಹಿತ್ಯ, ಯಕ್ಷಗಾನ, ಸಮಾಜ ಸೇವೆ, ಕಾನೂನು ಸೇವೆ, ಹೈನುಗಾರಿಕೆ, ವೈದ್ಯಕೀಯ, ಜನಪದ ಕಲೆ, ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ಈ ಮೂಲಕ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಸ್ಥಳೀಯ ಸಾಧಕರ ಪರಿಚಯವಾಗುವುದರ ಜೊತೆಗೆ, ಅವರ ಬದುಕು ಮುಂದಿನ ಪೀಳಿಗೆಗೆ ಪ್ರೇರಣೆಯಾಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಈವರೆಗೆ ಗ್ರಾಮ ಸಾಹಿತ್ಯ ಸಂಭ್ರಮದ ಮೂಲಕ ಒಟ್ಟು 189 ಸಾಧಕರನ್ನು ಗೌರವಿಸಲಾಗಿದೆ.
ಸಾಧಕರನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅಭಿನಂದಿಸಿ ಗೌರವಿಸಲಿದ್ದಾರೆ. ಸಮಾರೋಪ ಭಾಷಣವನ್ನು ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿ ನೆರವೇರಿಸಲಿದ್ದಾರೆ.
‘ಕನ್ನಡದಲ್ಲೂ ಐಎಎಸ್ ಬರೆಯಿರಿ’ ಅಭಿಯಾನ
‘ಕನ್ನಡದಲ್ಲೂ ಐಎಎಸ್ ಬರೆಯಿರಿ’ ಅಭಿಯಾನದ ಅಂಗವಾಗಿ ಪುತ್ತೂರಿನ ಸಹಾಯಕ ಆಯುಕ್ತರಾದ ಕು. ಸ್ಟೆಲ್ಲಾ ವರ್ಗಿಸ್, ಕೆ.ಎ.ಎಸ್. ಅವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅವಕಾಶಗಳು ಹಾಗೂ ತಯಾರಿ ಕುರಿತು ಮಾಹಿತಿ ನೀಡಲಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಈ ಅಭಿಯಾನದ ಮೂಲಕ 50,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ತಲುಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮವನ್ನು ಸಹಾಯಕ ಆಯುಕ್ತರಾದ ಕು. ಸ್ಟೆಲ್ಲಾ ವರ್ಗಿಸ್, ಕೆ.ಎ.ಎಸ್. ಉದ್ಘಾಟಿಸಲಿದ್ದು, ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜು ಬಲ್ನಾಡಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು. ಪೂರ್ಣಶ್ರೀ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ತಾಲೂಕು ಪಂಚಾಯತ್ ಪುತ್ತೂರಿನ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಬಲ್ನಾಡು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಡಾ. ದೀಪಕ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ, ಬಲ್ನಾಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ.ಆರ್., ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಸಹಜ ರಾಧಾಕೃಷ್ಣ ಆಳ್ವ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರಸಾದ್ ಹಾಗೂ ಶಾಲಿನಿ ಬಿ. ಶೆಟ್ಟಿ, ಯುವ ಕವಯತ್ರಿ ಮಂಜುಳಾ ಮುರಳೀಕೃಷ್ಣ ಹಸಂತಡ್ಕ, ಸಂಸ್ಥೆಯ ಪ್ರಾಂಶುಪಾಲ ಅರುಣ್ ನಾಯ್ಕ್, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಐದು ವರ್ಷಗಳ ಕಾಲ ಪುತ್ತೂರು ತಾಲೂಕಿನ ಗ್ರಾಮ ಗ್ರಾಮಗಳಿಗೆ ತೆರಳಿ ಸಾಹಿತ್ಯವನ್ನು ವಿದ್ಯಾರ್ಥಿಗಳ ಬಳಿಗೆ ಕೊಂಡೊಯ್ದ ಈ ಅಭಿಯಾನವು ಬಲ್ನಾಡಿನಲ್ಲಿ ಸಮಾರೋಪಗೊಳ್ಳುತ್ತಿರುವುದು ವಿಶೇಷವಾಗಿದೆ. ಸಾವಿರಾರು ವಿದ್ಯಾರ್ಥಿಗಳನ್ನು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಗ್ರಾಮಗಳ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಸಾಹಿತ್ಯವನ್ನು ಗ್ರಾಮೀಣ ಬದುಕಿನೊಂದಿಗೆ ಬೆಸೆಯುವ ಪ್ರಯತ್ನಕ್ಕೆ ಗ್ರಾಮ ಸಾಹಿತ್ಯ ಸಂಭ್ರಮ ಸಾಕ್ಷಿಯಾಗಿದೆ.
























